ಗುಂಡಿ ಅಗಿ…ಮುಚ್ಚು…ಅಗಿ…ಮುಚ್ಚು… ಅಭಿವೃದ್ಧಿಯಲ್ಲಿ ಕಾಣದ ಸಮನ್ವಯತೆ

ದಾವಣಗೆರೆ ಹದಡಿ ರಸ್ತೆಯಲ್ಲಿ ಇತ್ತೀಚೆಗಷ್ಟೇ ಟೈಲ್ಸ್ ಹಾಕಿ ನಿರ್ಮಿಸಿದ್ದ ಸುಂದರ ಫುಟ್ ಪಾತ್ ಅನ್ನು ಪೈಪ್ ಲೈನ್ ಅಳವಡಿಸಲು ಕೀಳುತ್ತಿರುವುದು.

ದಾವಣಗೆರೆ, ಜ.2- ಕೊರೊನಾ ಹಿನ್ನೆಲೆಯಲ್ಲಿ ಹಲ ವಾರು ತಿಂಗಳುಗಳಿಂದ ನಗರದಲ್ಲಿ ಸ್ಥಗಿತಗೊಂಡಿದ್ದ ಕಾಮಗಾರಿಗಳು ಇದೀಗ ವೇಗ ಪಡೆದಿವೆ. ಆದರೆ ಕಾಮಗಾರಿ ನಿರ್ವಹಣೆಯಲ್ಲಿ ಇಲಾಖೆಗಳ ಸಮನ್ವಯತೆ ಕೊರತೆಯಿಂದ ಕಾಮಗಾರಿ ಕೆಲಸಗಳೇ ಜನತೆಗೆ ತಲೆನೋವಾಗಿ ಪರಿಣಮಿಸಿವೆ.

ಹೌದು,  ಕಳೆದ ಕೆಲ ದಿನಗಳಿಂದ ನಗರದಲ್ಲಿ ಎಲ್ಲೆಂದರಲ್ಲಿ ಗುಂಡಿ ಅಗೆಯುವ ಕೆಲಸಗಳು ಕಾಣುತ್ತಿವೆ. ಇಷ್ಟೇ ಆದರೆ ಸಮಸ್ಯೆ ಇಲ್ಲ. ಆದರೆ ಅಗೆದ ಗುಂಡಿ ಮುಚ್ಚಿದ ಮಣ್ಣು ಹಸಿ ಇರುವಾಗಲೇ ಅದೇ ಜಾಗದಲ್ಲಿ ಗುಂಡಿ ಅಗೆಯುವ ಕೆಲಸ ನಡೆಯುತ್ತದೆ. ಈ ರೀತಿಯ ಕೆಲಸಗಳು ಸ್ಥಳೀಯರಲ್ಲಿ ದಿಗ್ಭ್ರಮೆ ಮೂಡಿಸಿವೆ.

ಬೆಸ್ಕಾಂ, ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ, ಟೆಲಿಕಾಂ ಕಂಪನಿಗಳ ನಡುವೆ ಸಮನ್ವಯತೆ ಇರದ ಕಾರಣ ಮುಚ್ಚಿದ ಗುಂಡಿ ಮತ್ತೆ ತೆಗೆಯುವ ಕಾರ್ಯಗಳು ಹೆಚ್ಚು ಹೆಚ್ಚು ನಡೆ ಯತ್ತಲೇ ಸಾಗಿವೆ. ಇದರಿಂದಾಗಿ ಅನಗತ್ಯ ವೆಚ್ಚ ಎಷ್ಟಾಗು ತ್ತದೆ? ಇಂತಹ `ಗಾಂಪುರ ಗುಂಪಿನ’ ಕೆಲಸಗಳಿಗೆ ಮುಕ್ತಿ ಯಾವಾಗ? ಎಂದು ನಗರದ ಜನತೆ ಪ್ರಶ್ನಿಸಲಾರಂಭಿಸಿದ್ದಾರೆ.

ಹೊಂದಾಣಿಕೆ ಕೊರತೆಯೋ, ಅಧಿಕಾರಿಗಳ ನಿರ್ಲಕ್ಷ್ಯವೋ ಇಂತಹ ಕಾಮಗಾರಿಗಳಿಗೆ ಹದಡಿ ರಸ್ತೆ ಸ್ಪಷ್ಟ ಉದಾಹರಣೆಯಾಗಿದೆ. ಕೆಲ ದಿನಗಳ ಹಿಂದಷ್ಟೇ  

ಹದಡಿ ರಸ್ತೆಯಲ್ಲಿನ ಐಟಿಐ ಕಾಲೇಜು ಮುಂಭಾಗದ ರಸ್ತೆಯ ಎಡ ಹಾಗೂ ಬಲ ಬದಿಗಳಲ್ಲಿ ಟೈಲ್ಸ್ ಅಳವಡಿಸಿ ಸುಂದರ ಫುಟ್ ಪಾತ್ ನಿರ್ಮಿಸಲಾಯಿತು. ಇದೀಗ  ಜಲ ಸಿರಿ ಯೋಜನೆಯ ಪೈಪ್ ಲೈನ್ ಕಾಮಗಾರಿ ಎಂದು ಫುಟ್ ಪಾತ್‌ನಲ್ಲಿನ ಫೇವರ್ಸ್ ಕಿತ್ತು ಗುಂಡಿ ತೆಗೆಯಲಾಗುತ್ತಿದೆ. 

ಇದೇ ರಸ್ತೆಯಲ್ಲಿ ನಾಲ್ಕು ದಿನಗಳ ಕೆಳಗೆ ಇದೇ ಜಲಸಿರಿ ಯೋಜನೆಯ ಮುಖ್ಯ ಪೈಪ್ ಲೈನ್ ಕಾಮಗಾರಿ ಎಂದು ಗುಂಡಿ ಅಗೆದು ಪೈಪ್ ಅಳವಡಿಸಿ ಗುಂಡಿ ಮುಚ್ಚಲಾಗಿತ್ತು.  ಈ ವೇಳೆ ವ್ಯಾಪಾರಸ್ಥರು ವಾಹನಗಳನ್ನು ನಿಲ್ಲಿಸಲು ಹಾಗೂ ಮಳಿಗೆಗಳ ಮುಂದೆ ಓಡಾಡಲು ಅನುಕೂಲವಾಗಲೆಂದು ಸ್ವತಃ ತಾವೇ ರಸ್ತೆ ಬದಿಯ ಗುಂಡಿಯನ್ನು ಸಮತಟ್ಟು ಮಾಡಿಕೊಂಡಿದ್ದರು. ಇದೀಗ ಮತ್ತೆ  ಜಲಸಿರಿಯ ಸಬ್ ಲೈನ್ ಕಾಮಗಾರಿ ಎಂದು ಮತ್ತೆ ಅದೇ ಸ್ಥಳದಲ್ಲಿ ಗುಂಡಿ ಅಗೆಯುತ್ತಿರುವುದು ಅಲ್ಲಿನ ವ್ಯಾಪಾರಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.

ಇತ್ತ ಫುಟ್ ಪಾತ್ ಟೈಲ್ಸ್ ಕಿತ್ತು ಹಾಕುತ್ತಿರುವುದು ಪ್ರಜ್ಞಾವಂತ ಜನರ ಕೋಪಕ್ಕೆ ಕಾರಣವಾಗಿದೆ. ಒಮ್ಮೆ ಗುಂಡಿ ಅಗೆದಾಗ ಕಾಮಗಾರಿಗಳನ್ನು ನಡೆಸಲು ಆಗುವುದಿಲ್ಲವೇ? ಟೈಲ್ಸ್ ಹಾಕಿ ಮತ್ತೆ ಕಿತ್ತು. ನಂತರ ಮತ್ತೆ ಫುಟ್ ಪಾತ್ ನಿರ್ಮಾಣಕ್ಕೆ ತಗಲುವ ವೆಚ್ಚವಾದರೂ ಎಷ್ಟು? ಅಧಿಕಾರಿಗ ಳಿಗೆ ಕನಿಷ್ಟ ಜ್ಞಾನವೂ ಇಲ್ಲವೇ? ಎಂಬುದು ಜನರ ಪ್ರಶ್ನೆ.

ಇತ್ತೀಚೆಗೆ ಭಗತ್ ಸಿಂಗ್ ನಗರದಲ್ಲಿ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿನ  ಒಂದು ಹಾಗೂ ಎರಡನೇ ಕ್ರಾಸ್‌ನಲ್ಲಿ ಖಾಸಗಿ ಬೋರ್ ವೆಲ್ ಪೈಪ್‌ ಲೈನ್‌ ಅಳವಡಿ ಕೆಗೆಂದು ಗುಂಡಿ ತೆಗೆದು ಪೈಪ್ ಅಳವಡಿಸಿ ಮುಚ್ಚಲಾಯಿತು. ಇದಾದ ನಾಲ್ಕು ದಿನಗಳಲ್ಲಿಯೇ ಜಲಸಿರಿ ಯೋಜನೆ ಹೆಸರಿನಲ್ಲಿ ಮತ್ತೆ ಅದೇ ಸ್ಥಳದಲ್ಲಿ ಗುಂಡಿ ಅಗೆಯಲಾಯಿತು.  ಈ ರೀತಿ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಗುಂಡಿಗಳು ಹೆಚ್ಚಾಗುತ್ತಲೇ ಇವೆ. ಬಳಲುತ್ತಿರುವುದು ಮಾತ್ರ ಸ್ಥಳೀಯರು.

error: Content is protected !!