ಜಗಳೂರಿನಲ್ಲಿನ ಜೆಸಿಟಿಯು ಸಮ್ಮೇಳನದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು
ಜಗಳೂರು, ಮಾ.13- ಆಡಳಿತ ಪಕ್ಷಗಳು ಕಾರ್ಪೊರೇಟ್ ಕಂಪನಿಗಳ ಏಜೆಂಟ್ಗಳಾಗಿ ವರ್ತಿಸುತ್ತಾ ಕಾರ್ಮಿಕರ ಹಕ್ಕುಗಳನ್ನು ಕಸಿಯುವ ಹುನ್ನಾರ ನಡೆಸುತ್ತಿವೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಆರೋಪಿಸಿದರು.
ಪಟ್ಟಣದ ಪ್ರೇರಣಾ ಚರ್ಚ್ನಲ್ಲಿ ಜೆಸಿಟಿಯುನ ಮೊದಲನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಸಂವಿಧಾನಬದ್ದ ಹಕ್ಕುಗಳಿಗಾಗಿ ತೀವ್ರ ಸ್ವರೂಪದ ಹೋರಾಟ ರೂಪಿಸುವ ಅನಿವಾರ್ಯತೆ ಎದುರಾಗಿದೆ. ನ್ಯಾಯಯುತ ಬೇಡಿಕೆಗಳಿಗಾಗಿ ದೇಶದ ಮೂಲೆ ಮೂಲೆಗಳಲ್ಲಿ ರೈತ ಕಾರ್ಮಿಕರ ಬೃಹತ್ ಹೋರಾಟಗಳು ನಡೆಯುತ್ತಿದ್ದರೆ, ಸಮಸ್ಯೆಗಳ ವಿರುದ್ಧದ ಧ್ವನಿಯನ್ನು ಮಾಧ್ಯಮಗಳು ಮಾತ್ರ ಜನರಿಗೆ ತಲುಪಿಸುವಲ್ಲಿ ವಿಫಲವಾಗಿವೆ.
ಮಹನೀಯರ ತ್ಯಾಗ, ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಇಂದಿಗೂ ಹಕ್ಕುಗಳಿಗಾಗಿ ದೇಶದ ಒಳಗಿನ ಹೋರಾಟ ತಪ್ಪಿಲ್ಲ, ಇದೇ ದಿನಾಂಕ 28 ಮತ್ತು 29 ರಂದು ಜೆಸಿಟಿಯು ನೇತೃತ್ವದ ಅಖಿಲ ಭಾರತ ಮುಷ್ಕರ ಕರೆಗೆ ಒಕ್ಕೊರಲಿನಿಂದ ಬೆಂಬಲಿಸೋಣ ಎಂದರು.
ಎಐಟಿಯುಸಿ ತಾಲ್ಲೂಕು ಅಧ್ಯಕ್ಷ ಮಹಮ್ಮದ್ ಭಾಷಾ ಮಾತನಾಡಿ,ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡ ಕಾರ್ಮಿಕರ ಬದುಕನ್ನು ಬೀದಿಗೆ ತಳ್ಳಿದೆ. ಜನಪರ ಆಡಳಿತ ಮರೆತು, ಬಂಡವಾಳಶಾಹಿ ಪರವಾಗಿ ನಿಂತಿವೆ. ಆರೋಗ್ಯ, ಶಿಕ್ಷಣ ಸೇವೆಗಳು ಖಾಸಗೀಕರಣಗೊಂಡು ವ್ಯಾಪಾರೀಕರಣ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕೋವಿಡ್ ನೆಪದಲ್ಲಿ ದೇಶದ ಅಭಿವೃದ್ದಿ ಕುಂಠಿತವಾಗಿದೆ. ರಾಜ್ಯದಲ್ಲಿನ ಕಾರ್ಮಿಕ ಮಂಡಳಿಯ ಸೌಲಭ್ಯಗಳು ಅರ್ಹರಿಗೆ ತಲುಪಿಲ್ಲ. ಮಧ್ಯವರ್ತಿಗಳಿಂದ ಬೋಗಸ್ ಕಾರ್ಮಿಕ ಕಾರ್ಡ್ ಗಳಿಗೆ ಅಧಿಕಾರಿಗಳು ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಫಾದರ್ ವಿಲಿಯಂ ಮಿರಾಂಡ ಮಾತ ನಾಡಿ, ಕಾರ್ಮಿಕರ ಧ್ವನಿಯಾಗಿ ಕಷ್ಟ, ಸುಖ ಗಳಿಗೆ ಸದಾ ಸ್ಪಂದಿಸಿ ಕಾರ್ಮಿಕ ಸಂಘಟನೆ ಕೆಲಸ ಮಾಡಬೇಕು.ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು ದೊರೆಯಬೇಕು ಎಂದರು.
ಎಐಟಿಯುಸಿ ಮುಖಂಡರಾದ ವೀರಣ್ಣ, ತಿಪ್ಪೇಸ್ವಾಮಿ, ಗೌರಮ್ಮ, ಭಾರತಿ, ಭರಮಕ್ಕ, ರುಕ್ಕಮ್ಮ, ಸಿಐಟಿಯು ಮುಖಂಡ ಮಹಾಂತೇಶ್, ಎಸ್ಎಫ್ಐ ನ ಅನಂತರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.