ಶಾಲೆಗಳಲ್ಲಿ ಮರುಕಳಿಸಿದ ಹುರುಪು

6-9 ನೇ ತರಗತಿಗೆ ವಿದ್ಯಾಗಮ, 10-12ನೇ ತರಗತಿ ಆರಂಭ, ಖುಷಿಯಿಂದಲೇ ಬಂದ ಮಕ್ಕಳು

ದಾವಣಗೆರೆ, ಜ.1- ತಳಿರು ತೋರಣಗಳಿಂದ ಸಿಂಗಾರಗೊಂಡ ಶಾಲೆಗಳು, ಹೊಸ ಹುರುಪಿನೊಂದಿಗೆ ಆಗಮಿಸಿದ್ದ ಮಕ್ಕಳು, ಮಕ್ಕಳನ್ನು ಕಂಡು ಸಂತಸಗೊಂಡ ಶಿಕ್ಷಕರು, ಹತ್ತು ತಿಂಗಳಿನಿಂದ ಬಿಕೋ ಎನ್ನುತ್ತಿದ್ದ ಶಾಲೆಗಳಲ್ಲಿ ಹೊಸ ಕಳೆ, ಸಾಮಾಜಿಕ ಅಂತರದೊಂದಿಗೆ ತರಗತಿಗಳ ಆರಂಭ.

ನಗರ ಶಾಲೆಗಳಲ್ಲಿ ಕಂಡು ಬಂದ ವಾತಾವರಣವಿದು.  ಬೇಕು-ಬೇಡಗಳ ಚರ್ಚೆಯ ನಡುವೆಯೇ ಸರ್ಕಾರ ಇಂದಿನಿಂದ ಶಾಲಾ ಆರಂಭಕ್ಕೆ  ಹಸಿರು ನಿಶಾನೆ ನೀಡಿದ್ದರ ಹಿನ್ನೆಲೆಯಲ್ಲಿ ಕೋವಿಡ್ ಮಾರ್ಗಸೂಚಿ ಅನ್ವಯ ಶಾಲೆಗಳು ಆರಂಭವಾಗಿವೆ.

ಶಾಲಾರಂಭಕ್ಕೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆರಂಭದ ದಿನವಾದ ಶುಕ್ರವಾರ ಖಾಸಗಿ ಶಾಲೆಗಳಿಗೆ ಹೋಲಿಸಿದರೆ, ಸರ್ಕಾರಿ ಶಾಲೆಗಳಲ್ಲಿಯೇ ಮಕ್ಕಳ ಹಾಜರಾತಿ ಹೆಚ್ಚಾಗಿತ್ತು. 

ನಗರದ ಮೋತಿ ವೀರಪ್ಪ ಸರ್ಕಾರಿ ಪ್ರೌಢಶಾಲೆ ಹಾಗೂ ಕಾಲೇಜಿನಲ್ಲಿ ಶಾರದಾ ಪೂಜೆಯೊಂದಿಗೆ ತರಗತಿಗಳನ್ನು ಆರಂಭಿಸಲಾಯಿತು. ತಳಿರು ತೋರಣಗಳಿಂದ ಸಿಂಗರಿಸಿದ್ದ ಶಾಲೆಯಲ್ಲಿ ಚಾಕೊಲೇಟ್, ಗುಲಾಬಿ ಹೂ ನೀಡಿ ಮಕ್ಕಳನ್ನು ಸ್ವಾಗತಿಸಲಾಯಿತು. 

ನಿಟುವಳ್ಳಿಯ ಸರ್ಕಾರಿ ಶಾಲೆಯೂ ಮಕ್ಕಳ ಆಗಮನದ ಹಿನ್ನೆಲೆಯಲ್ಲಿ ಸಿಂಗಾರಗೊಂಡಿತ್ತು. ಮಕ್ಕಳು, ಶಿಕ್ಷಕರಲ್ಲಿ ಹೊಸ ಹುರುಪು, ಸಂತಸ ಮನೆ ಮಾಡಿತ್ತು. ಶಾಲಾ ಆವರಣದಲ್ಲಿನ ಮರದಡಿ 6 ರಿಂದ 9ನೇ ತರಗತಿ ಮಕ್ಕಳಿಗೆ ವಿದ್ಯಾಗಮ ತರಗತಿಗಳು ನಡೆದವು. ಶಾಲೆ ಒಳಗಡೆ ಹತ್ತನೇ ತರಗತಿಗಳು ನಡೆದವು. 

ಈ ಸಂದರ್ಭದಲ್ಲಿ ‘ಜನತಾವಾಣಿ’ಯೊಂದಿಗೆ ಮಾತನಾಡಿದ ಶಾಲೆಯ ಸಹ ಶಿಕ್ಷಕ ಜಗದೀಶ್, ಕೋವಿಡ್ ಮಾರ್ಗಸೂಚಿ ಅನ್ವಯ ತರಗತಿಗಳನ್ನು ನಡೆಸಲಾಗುತ್ತಿದೆ. ಮಕ್ಕಳು ಪೋಷಕರಿಂದ ಒಪ್ಪಿಗೆ ಪತ್ರ ತರುವಂತೆ ಹೇಳಿದ್ದೇವೆ. 6-9ನೇ ತರಗತಿ ಮಕ್ಕಳಿಗೆ ಬೆಳಿಗ್ಗೆ 10 ರಿಂದ 12.30ರವರೆಗೆ ಮೂರು ಪೀರಿಯಡ್ ತರಗತಿ ನಡೆಸುತ್ತೇವೆ. ಮಧ್ಯಾಹ್ನ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ತರಗತಿಗಳು ನಡೆಯಲಿವೆ ಎಂದರು.

ಹೆಚ್ಚಿನ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಒಲವು ತೋರಿದ್ದಾರೆ. ಕೆಲವರು ಮಕ್ಕಳ ಜವಾಬ್ದಾರಿ ನಿಮ್ಮದೇ ಎಂದು ಶಿಕ್ಷಕರಿಗೆ ಹೇಳುತ್ತಾರೆ. ಈ ವೇಳೆ ನಾವು ಪೋಷಕರಿಗೆ ಭರವಸೆ ನೀಡಿ, ಅರಿವು ಮೂಡಿಸಿ ಮನವೊಲಿಸುತ್ತೇವೆ ಎಂದರು.

ಸಿದ್ಧಗಂಗಾ ಶಾಲೆಯಲ್ಲೂ ತರಗತಿಗಳು ಆರಂಭವಾಗಿದ್ದವು. ಪತ್ರಿಕೆಯೊಂದಿಗೆ ಮಾತನಾಡಿದ ಮುಖ್ಯೋಪಾಧ್ಯಾಯರಾದ ಶ್ರೀಮತಿ ಜಸ್ಟಿನ್ ಡಿಸೌಜ, ಕೋವಿಡ್ ಮಾರ್ಗಸೂಚಿ ಪ್ರಕಾರ ತರಗತಿ ಆರಂಭವಾಗಿವೆ. ಬ್ಯಾಚ್ ಪ್ರಕಾರ ತರಗತಿಗಳನ್ನು ನಡೆಸಲಾಗುತ್ತಿದೆ. 

ಶೇ.70ರಷ್ಟು ಹತ್ತನೇ ತರಗತಿ ಮಕ್ಕಳು ಬಂದಿದ್ದರೆ, 6 ರಿಂದ 9ನೇ ತರಗತಿ ಮಕ್ಕಳು ಶೇ.10ರಷ್ಟು ಮಾತ್ರ ಆಗಮಿಸಿದ್ದಾರೆ. ಹೊಸ ವರ್ಷ ಹಾಗೂ ವಾರಾಂತ್ಯದ ದಿನಗಳಾಗಿರುವುದರಿಂದ ಸೋಮವಾರ ಹೆಚ್ಚಿನ ಮಕ್ಕಳು ಬರುವ ನಿರೀಕ್ಷೆ ಇದೆ ಎಂದರು.

ಶಾಲೆಗಳಲ್ಲಿ ಮರುಕಳಿಸಿದ ಹುರುಪು - Janathavani

ಬಹುದಿನಗಳ ನಂತರ ಶಾಲೆಗೆ ಆಗಮಿಸುತ್ತಿರುವ ವಿದ್ಯಾರ್ಥಿಗಳು, ಶಾಲೆಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಟೆಸ್ಟ್ ನಡೆಸಿ, ಕೈಗಳಿಗೆ ಸ್ಯಾನಿಟೈಸರ್ ಹಾಕಿ ಒಳ ಬಿಡುತ್ತಿರುವುದು .   

ನಿಮ್ಮ ಮಕ್ಕಳ ಜವಾಬ್ದಾರಿ ನಮ್ಮದು, ಧೈರ್ಯವಾಗಿ ಶಾಲೆಗೆ ಕಳುಹಿಸಿ: ಡಿಸಿ

ದಾವಣಗೆರೆ, ಜ.1- ನಿಮ್ಮ ಮಕ್ಕಳ ಆರೋಗ್ಯ ಕಾಪಾಡಿಕೊಂಡು ವಿದ್ಯಾದಾನ ಮಾಡುವ ಜವಾಬ್ದಾರಿ ನಮ್ಮದು, ಧೈರ್ಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಿ ಎಂದು ಜಿಲ್ಲಾಧಿಕಾರಿ ಮಹಾಂತೇಶ  ಬೀಳಗಿ ಪೋಷಕರಿಗೆ ಕರೆ ನೀಡಿದರು.

ನಿಟುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ  ಭೇಟಿ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎಲ್ಲಾ ಶಾಲೆಗಳಲ್ಲೂ ಸ್ಯಾನಿ ಟೈಸರ್, ದೈಹಿಕ ಅಂತರ ಕಾಪಾಡಿಕೊಂಡು ತರಗತಿ ಗಳನ್ನು ನಡೆಸಲಾಗುತ್ತದೆ. ಮಕ್ಕಳಿಗೆ ಏನೂ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು ಎಂದರು.

ರಾಜ್ಯ ಸರ್ಕಾರದ ಆದೇಶದಂತೆ  6 ರಿಂದ 9ನೇ ತರಗತಿ ಮಕ್ಕಳಿಗೆ ವಿದ್ಯಾಗಮವನ್ನು ಶಾಲಾ ಆವರಣದಲ್ಲಿಯೇ ಆರಂಭಿಸಲಾಗುತ್ತಿದೆ.  ಮಾರ್ಗಸೂಚಿ ಅನುಸರಿಸಿ, ದೈಹಿಕ ಅಂತರದೊಂದಿಗೆ 10 ಹಾಗೂ 12ನೇ ತರಗತಿ ಮಕ್ಕಳಿಗೆ ತರಗತಿ ಆರಂಭವಾಗಿವೆ ಎಂದರು.

ಜಿಲ್ಲೆಯಲ್ಲಿ 21 ಸಾವಿರ ಹತ್ತನೇ ತರಗತಿ ಮಕ್ಕಳಿದ್ದು, 1.80 ಲಕ್ಷ 6-9ನೇ ತರಗತಿ ಮಕ್ಕಳಿದ್ದಾರೆ. ಎಲ್ಲರನ್ನೂ ಶಾಲೆಗೆ ಕರೆ ತಂದು ಉತ್ತಮ  ಶಿಕ್ಷಣ ನೀಡಲಾಗುವುದು ಎಂದರು.

error: Content is protected !!