ದಾವಣಗೆರೆ, ಜ.1- ಜ್ಞಾನಕ್ಕೆ ಸಮನಾದದ್ದು ಬೇರೆ ಯಾವುದೂ ಇಲ್ಲ. ಆದ್ದರಿಂದ ಜ್ಞಾನದ ಬೆನ್ನು ಹತ್ತಬೇಕು ಎಂದು ಜಿಲ್ಲಾಧಿಕಾರಿ ಮಹಾಂತ ಬೀಳಗಿ ಮಕ್ಕಳಿಗೆ ಕಿವಿ ಮಾತು ಹೇಳಿದರು.
ಬಡತನದಿಂದಾಗಿ ಜಾತ್ರೆಯಲ್ಲಿ ಉತ್ತುತ್ತಿ ಮಾರುತ್ತಿದ್ದ ನಾನು, ಆಗಲೇ ಕೆಂಪು ದೀಪದ ಕಾರು ಹತ್ತುವ ಕನಸು ಕಂಡಿದ್ದೆ. ಹಣದ ಬೆನ್ನತ್ತದೆ ಜ್ಞಾನದ ಬೆನ್ನು ಹತ್ತಿದ್ದರಿಂದಲೇ ನನಗೆ ವಿದ್ಯೆಯ ಜೊತೆ ಎಲ್ಲಾ ಕನಸೂ ನನಸಾಗಿವೆ ಎಂದರು.
ಕನಸು ಕಾಣಲು ಮಿತಿ ಇಲ್ಲ. ಆದ್ದರಿಂದ ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನೇ ಕಾಣಬೇಕು. ಅದರ ಬಗ್ಗೆಯೇ ವಿಚಾರ ಮಾಡುತ್ತಿರಬೇಕು.
ಆಗ ಮುಂದೊಂದು ದಿನ ನಮಗೆ ಗೊತ್ತಿಲ್ಲದಂತೆಯೇ ನಮ್ಮ ಕನಸುಗಳು ನನಸಾಗುತ್ತವೆ ಎಂದರು.
ಕೊರೊನಾ ಹಿನ್ನೆಲೆಯಲ್ಲಿ ಕಳೆದ ಹತ್ತು ತಿಂಗಳು ಶಾಲೆಗೆ ಆಗಮಿಸಲು ಸಾಧ್ಯವಾಗದ ನೀವು, ಇನ್ನೂ ಉಳಿದ ಮೂರ್ನಾಲ್ಕು ತಿಂಗಳು ಪ್ರತಿ ಕ್ಷಣವನ್ನೂ ವ್ಯಯ ಮಾಡದೆ ಓದಬೇಕು. ಎಸ್ಸೆಸ್ಸೆಲ್ಸಿ ಹಂತವು ಜೀವನದ ಪ್ರಮುಖ ಘಟ್ಟವಾಗಿದೆ.
ಈ ಸಮಯದಲ್ಲಿ ನೀವು ಕಾಣುವ ಕನಸುಗಳು ನಿಜವಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಉತ್ತಮ ಕನಸು ಹಾಗೂ ಗುರಿಯೊಂದಿಗೆ ಸಮಾಜದ ಆಸ್ತಿಯಾಗಿ ಎಂದು ಆಶಿಸಿದರು.
ಇದೇ ವೇಳೆ ಉದ್ಯಮಿ ಎಸ್.ಜಿ. ಉಳುವಯ್ಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ನೀಡಿ, ಶಾಲೆಗೆ 25 ಸಾವಿರ ರೂ. ದತ್ತಿ ನಿಧಿ ಕೊಡುವುದಾಗಿ ಹೇಳಿದರು. ಜಿಲ್ಲಾಧಿಕಾರಿಗಳು ತಾವೂ ಸಹ ಶಾಲೆಗೆ 25 ಸಾವಿರ ರೂ. ದತ್ತಿ ನಿಧಿ ನೀಡುವುದಾಗಿ ಭರವಸೆ ನೀಡಿದರು.
ಪಾಲಿಕೆ ಸದಸ್ಯೆ ಸವಿತಾ ಗಣೇಶ್ ಹುಲ್ಮನಿ ಹಾಗೂ ಗಣೇಶ್ ಹುಲ್ಮನಿ ದಂಪತಿ ವಿದ್ಯಾರ್ಥಿಗಳಿಗೆ ಡಿಕ್ಷನರಿ ನೀಡಿದರಲ್ಲದೆ, 1 ಲ್ಯಾಪ್ ಟಾಪ್ ಹಾಗೂ ಶಾಲೆಗೆ 50 ಸಾವಿರ ರೂ. ದತ್ತಿ ನಿಧಿ ನೀಡುವುದಾಗಿಯೂ ಹೇಳಿದರು. ದಾನಿಗಳ ಕಾರ್ಯವನ್ನು ಜಿಲ್ಲಾಧಿಕಾರಿ ಶ್ಲ್ಯಾಘಿಸಿದರು.
ಡಿಡಿಪಿಐ (ಆಡಳಿತ) ಸಿ.ಆರ್. ಪರಮೇಶ್ವರಪ್ಪ, ಡಿಡಿಪಿಐ (ಅಭಿವೃದ್ಧಿ) ಲಿಂಗರಾಜು, ದಕ್ಷಿಣ ಬಿಇಒ ನಿರಂಜನಮೂರ್ತಿ, ಉಮಾ ಪ್ರಕಾಶ್, ಮಂಜುನಾಥ ಸ್ವಾಮಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸುರೇಶ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಚಂದ್ರಪ್ಪ, ಎಸ್ಡಿಎಂಸಿ ಅಧ್ಯಕ್ಷ ತಿಪ್ಪೇಸ್ವಾಮಿ ಹಾಗು ಇತರರು ಈ ಸಂದರ್ಭದಲ್ಲಿದ್ದರು.