ದಾವಣಗೆರೆ, ಮಾ. 10- ನಗರದೆಲ್ಲೆಡೆ ವಿದ್ಯುತ್ ಪೈಪ್ಲೈನ್, ಗ್ಯಾಸ್ ಪೈಪ್ಲೈನ್ ಒಂದೇ ಗುಂಡಿಯಲ್ಲಿ ಅಳವಡಿಸುವುದರಿಂದ ದೈತ್ಯ ಸ್ವರೂಪದ ಅಗ್ನಿ ದುರಂತವಾದರೆ ಯಾರು ಹೊಣೆ ಎಂದು ಕೆಪಿಸಿಸಿ ಸದಸ್ಯ ಹೆಚ್. ದುಗ್ಗಪ್ಪ ಪ್ರಶ್ನಿಸಿದ್ದಾರೆ.
ಜಿಲ್ಲಾಡಳಿತ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಜನರಿಗೆ ಮಾರಕವಾಗುವಂತಹ ಕಾಮಗಾರಿಗಳಿಗೆ ಕೈ ಹಾಕುತ್ತಿದ್ದಾರೆ. ಈಗ ರಸ್ತೆಯ ಒಂದೇ ಗುಂಡಿಯಲ್ಲಿ ವಿದ್ಯುತ್ ಮತ್ತು ಗ್ಯಾಸ್ ಪೈಪ್ಲೈನ್ ಅಳವಡಿಸುವ ಅವೈಜ್ಞಾನಿಕ, ಅಪಾಯಕಾರಿ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಪೈಪ್ಲೈನ್ನಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸಾಕು ಇಡೀ ದಾವಣಗೆರೆ ಹೊತ್ತಿ ಉರಿಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ಒಂದೇ ಕಡೆ ವಿದ್ಯುತ್ ಮತ್ತು ಗ್ಯಾಸ್ ಪೈಪ್ಲೈನ್ ಅಳವಡಿಸಿದ್ದರೆ ತಕ್ಷಣ ತೆರವುಗೊಳಿಸಬೇಕು. ಅವೈಜ್ಞಾನಿಕ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕೆಂದು ದುಗ್ಗಪ್ಪ ಆಗ್ರಹಿಸಿದ್ದಾರೆ.
ನಗರದಲ್ಲಿ ಕೈಗೊಂಡಿರುವ ಎಲ್ಲಾ ಕಾಮಗಾರಿಗಳನ್ನು ವೈಜ್ಞಾನಿಕತೆ ಮತ್ತು ಸುರಕ್ಷತೆಯನ್ನು ಅಳವಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು.
ಅಪಾಯಕಾರಿ ಕಾಮಗಾರಿಗಳನ್ನು ತಕ್ಷಣ ಸ್ಥಗಿತಗೊಳಿಸಬೇಕು. ಕೇವಲ ಹಣಕ್ಕೆ ಮಾನ್ಯತೆ ಕೊಡದೇ ಜನರ ಜೀವಗಳಿಗೆ ಬೆಲೆ ಕೊಡಿ. ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕೆಂದು ಮನವಿ ಮಾಡಿದರು.