ದೇಶದ ಬದಲಾವಣೆಯ ಮೂಲವೇ ಮಹಿಳೆ

ವೇದಿಕೆ ಮೇಲೆ ಅಧಿಕಾರಿಗಳ ಪತ್ನಿಯರು

ಮಹಿಳಾ ದಿನಾಚರಣೆಯ ವೇದಿಕೆಯ ಮೇಲೆ ಜಿಲ್ಲಾ ಅಧಿಕಾರಿಗಳ ಪತ್ನಿಯರು ಉಪಸ್ಥಿತರಿದ್ದುದು ವಿಶೇಷವಾಗಿತ್ತು. ಆದರೆ, ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ್, ಉಪ ಮೇಯರ್ ಗಾಯತ್ರಿ ಬಾಯಿ ಹೊರತು ಪಡಿಸಿದರೆ ಜನಪ್ರತಿನಿಧಿಗಳು ಗೈರಾಗಿದ್ದರು. ಈ ಸಂದರ್ಭದಲ್ಲಿ ಪೌಷ್ಠಿಕತೆಯ ಸಂದೇಶ ಸಾರುವ ವಿವಿಧ ತಿನಿಸುಗಳ ಪ್ರದರ್ಶನ ಆಯೋಜಿಸಲಾಗಿತ್ತು. ಮಹಿಳೆ ಯರು ತಯಾರಿಸಿದ ಉತ್ಪನ್ನ ಹಾಗೂ ಖಾದ್ಯಗಳ ಮಾರಾಟ ಮಳಿಗೆಗಳನ್ನೂ ಅಳವಡಿಸಲಾಗಿತ್ತು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಬೀಳಗಿ

ದಾವಣಗೆರೆ, ಮಾ. 8 – ಅಬಲೆ ಎಂಬ ಪದವನ್ನು ನಿಘಂಟಿನಿಂದ ತೆಗೆದು ಹಾಕಬೇಕು. ಯಾವ ರೀತಿಯಿಂದಲೂ ಮಹಿಳೆ ಅಬಲೆಯಲ್ಲ, ಸಬಲೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ದಿ ಯೋಜನೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ, ಜಿಲ್ಲಾ ಶಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಜಿಲ್ಲಾ ಅಭಿ ಯಾನ ಘಟಕ, ಜಿಲ್ಲಾ ಪಂಚಾಯತ್, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಮಾವೇಶ-2022ರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ನಗರದ ಸರ್ಕಾರಿ ನೌಕರರ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಹಿಳೆಯರು ಇರುವ ಸಂಸ್ಥೆಗಳು ಉತ್ತಮ ವಾಗಿ ಕಾರ್ಯ ನಿರ್ವಹಿಸುತ್ತವೆ. ಮನೆ, ಸಮಾಜ ಹಾಗೂ ದೇಶದ ಬದಲಾವಣೆಯ ಮೂಲ ಮಹಿಳೆಯೇ ಆಗಿದ್ದಾಳೆ. ನಮ್ಮದು ಪುರುಷ ಪ್ರಧಾನ ಸಮಾಜ ಎಂದರೂ ಸಹ, ಹೆಣ್ಣಿಲ್ಲದೇ ಯಾವ ಸಾಧನೆಯೂ ಸಾಧ್ಯವಿಲ್ಲ ಎಂದರು.

ಮಗಳಾಗಿ, ಸಹೋದರಿಯಾಗಿ, ಹೆಂಡತಿ, ತಾಯಿ, ಅತ್ತೆ, ಸೊಸೆ ಹೀಗೆ ಹತ್ತು ಹಲವು ಪಾತ್ರಗಳಲ್ಲಿ ಹೆಣ್ಣು ಗುರುತಿಸಿಕೊಳ್ಳುತ್ತಾಳೆ. ಆದರೆ, ಈ ಎಲ್ಲ ಪಾತ್ರಗಳನ್ನು ಮೀರಿ ಸ್ವಂತಿಕೆಯನ್ನು ಕಂಡುಕೊಳ್ಳುವುದೇ ನಿಜವಾದ ಮಹಿಳಾ ದಿನಾಚರಣೆ ಎಂದವರು ಹೇಳಿದರು.

ಕೆಲವು ಪುರುಷರು ಮೃಗಗಳಂತೆ ಹೆಣ್ಣಿನ ಮೇಲೆ ದೌರ್ಜನ್ಯ ನಡೆಸುವ ಘಟನೆಗಳೂ ನಡೆಯುತ್ತವೆ. ಇಂತಹವರಿಗೆ ತಕ್ಕ ಪಾಠ ಕಲಿಸುವ ಸಾಮರ್ಥ್ಯ ಮಹಿಳೆಗೆ ಇದೆ. ಯಾವುದೇ ದೌರ್ಜನ್ಯವನ್ನು ಸಹಿಸದೇ ಇಂಥವರಿಗೆ ಪಾಠ ಕಲಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಮನೆ ಕೆಲಸದಿಂದ ಹಿಡಿದು ಎಲ್ಲ ವಲಯಗಳಲ್ಲಿ ಮಹಿಳೆ ಪ್ರತಿದಿನ ಕೊಡುಗೆ ನೀಡುತ್ತಾಳೆ. ಒಂದು ಮಗು ಉತ್ತಮವಾಗಿ ಬೆಳೆದಿದೆ ಎಂದರೆ ಅದರ ಶ್ರೇಯ ತಾಯಿಗೆ ಸಲ್ಲಬೇಕು. ತಾಯಿಗೆ ಕುಟುಂಬವನ್ನು ಸಲಹುವ, ಮಾರ್ಗದರ್ಶನ ಮಾಡುವ ಕಲೆ ಗೊತ್ತಿದೆ ಎಂದು ಹೇಳಿದರು.

ಜೀವನವನ್ನು ಸಮೃದ್ಧಗೊಳಿಸುವುದೇ ಮಹಿಳೆ. ಕುಟುಂಬದಲ್ಲಿ ಆತ್ಮೀಯತೆ ಹಾಗೂ ಕಾಳಜಿ ತೋರುವಲ್ಲಿ ಮಹಿಳೆಯೇ ಮುಂದಿರುತ್ತಾಳೆ. ಕುಟುಂಬದಲ್ಲಿ ಎದುರಾಗುವ ವಿವಿಧ ಪರಿಸ್ಥಿತಿಗಳನ್ನು ನಿಭಾಯಿಸುವ ಕಲೆ ಮಹಿಳೆಯರಲ್ಲಿ ಮಾತ್ರ ಕಂಡು ಬರುತ್ತದೆ ಎಂದವರು ಹೇಳಿದರು.

ಈ ಸಂದರ್ಭದಲ್ಲಿ §ಘನತೆಯ ಬದುಕು¬ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ವೇದಿಕೆಯ ಮೇಲೆ ಮೇಯರ್ ಜಯಮ್ಮ ಗೋಪಿನಾಯ್ಕ್, ಉಪಮೇಯರ್ ಗಾಯತ್ರಿ ಬಾಯಿ, ಭೂ ದಾಖಲೆಗಳ ಇಲಾಖೆಯ ನಿರ್ದೇಶಕಿ ಭಾವನ ಬಸವರಾಜ್, ಡಿಯುಡಿಸಿ ಸಂಯೋಜನಾಧಿಕಾರಿ ನಜ್ಮಾ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ವಿಜಯ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರೇಷ್ಮ ಕೌಸರ್, ದಾವಣಗೆರೆ ನೂತನ ತಹಶೀಲ್ದಾರ್ ಬಸವನಗೌಡ ಮತ್ತಿತರರು ಉಪಸ್ಥಿತರಿದ್ದರು.

error: Content is protected !!