ಪಂಚ ರಾಜ್ಯಗಳಲ್ಲಿ ಬಿಜೆಪಿಗೆ ಸಿಂಹ ಪಾಲು, ಮುಂದಿನ ಚುನಾವಣೆಗೆ ದಿಕ್ಸೂಚಿ

ಹರಪನಹಳ್ಳಿ, ಮಾ. 10- ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ 4 ರಾಜ್ಯಗಳಲ್ಲಿ ಜಯಭೇರಿ ಬಾರಿಸಿದ ಹಿನ್ನೆಲೆ ರಾಜ್ಯ ಸಹಕಾರ ಪ್ರಕೋಷ್ಟದ ಸಹ ಸಂಚಾಲಕ ಜಿ. ನಂಜನಗೌಡರ ನೇತೃತ್ವದಲ್ಲಿ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ನಂತರ ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಾಚರಣೆ ನಡೆಸಲಾಯಿತು.

ಈ ವೇಳೆ ರಾಜ್ಯ ಸಹಕಾರ ಪ್ರಕೋಷ್ಟದ ಸಹ ಸಂಚಾಲಕ ಜಿ. ನಂಜನಗೌಡ ಮಾತ ನಾಡಿ, ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ 4 ರಾಜ್ಯಗಳಲ್ಲಿ ಜಯಭೇರಿ ಬಾರಿಸಿದ್ದನ್ನು ನೋಡಿದರೆ ಮುಂದೆ ಕಾಂಗ್ರೆಸ್ ಮುಕ್ತ ಭಾರತವಾಗುವುದರಲ್ಲಿ ಅನುಮಾನವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಕೇಂದ್ರದಲ್ಲಿ ನಾಯಕರ ಕೊರತೆ ಇದ್ದರೆ, ರಾಜ್ಯದಲ್ಲಿ ಸ್ವಯಂ ಘೋಷಿತ ನಾಯಕರಿದ್ದು, ಸಿದ್ದರಾಮಯ್ಯನವರಿಂದ ಕಾಂಗ್ರೆಸ್ ಪಕ್ಷ ಗೆಲ್ಲಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಗೆಲುವು ಶತ ಸಿದ್ಧ ಎಂದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಡಾ. ರಮೇಶ್ ಮಾತನಾಡಿ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರು ಮಾಡಿದ ಜನಪರ ಕೆಲಸಗಳನ್ನು ನೋಡಿ ಇವತ್ತು ಪಂಚ ರಾಜ್ಯಗಳಲ್ಲಿ ಬಿಜೆಪಿಗೆ ಸಿಂಹ ಪಾಲು ಬಂದಿದೆ. ಈ ಗೆಲುವು ಮುಂದಿನ ಚುನಾ ವಣೆಯ ದಿಕ್ಸೂಚಿಯಾಗಲಿದೆ ಎಂದರು.

ವಿಜಯನಗರ ಜಿಲ್ಲೆಯ ಬಿಜೆಪಿ ಮಹಿಳಾ ಅಧ್ಯಕ್ಷರಾದ ಆರುಂಡಿ ಸುವರ್ಣ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಜಿಯವರು ಎಲ್ಲಾ ವರ್ಗದ ಜನರ ಪರವಾಗಿ ಕೆಲಸ ಮಾಡಿದ್ದಾರೆ. ಅದರಲ್ಲಿ ಮಹಿಳೆಯರಿಗೆ ತ್ರಿವಳಿ ತಲಾಕ್ ಸೇರಿದಂತೆ ಅನೇಕ ಜನಪರ ಕೆಲಸಗಳನ್ನು ಮಾಡಿದ್ದರ ಫಲವಾಗಿ ಇಂದು ಮಹಿಳೆಯರು ಸಬಲರಾಗುತ್ತಿದ್ದಾರೆ. ಮುಂದೆಯೂ ಸಹ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಬಹುಮತ ಬರುತ್ತದೆ ಎಂದರು.

ಈ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೂಜಾರ್ ಚಂದ್ರಶೇಖರ್, ಮುಖಂಡರಾದ ಚನ್ನನಗೌಡ, ಸುವರ್ಣಮ್ಮ, ಪುರಸಭೆ ಮಾಜಿ ಸದಸ್ಯರಾದ ವಿಜಯಲಕ್ಷ್ಮಿ, ಯಂಕಮ್ಮ ಉಪಸ್ಥಿತರಿದ್ದರು.

error: Content is protected !!