ಮಹಿಳೆಯರ ಬೆಳವಣಿಗೆಗೆ ತಕ್ಕಂತೆ ಹಕ್ಕುಗಳು ಸಿಗುತ್ತಿಲ್ಲ

ಹರಿಹರದಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಚುಕ್ಕಿ ನಂಜುಂಡಸ್ವಾಮಿ

ಹರಿಹರ, ಮಾ. 8 – ಮಹಿಳೆಯರು ಎಲ್ಲಾ ರಂಗಗಳಲ್ಲಿ ಜವಾಬ್ದಾರಿಯುತವಾಗಿ  ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದರೂ, ಮಹಿಳೆಯರಿಗೆ ಸಮಾಜದಲ್ಲಿ ಹಕ್ಕುಗಳು, ಗೌರವ, ಸ್ಥಾನಮಾನಗಳು ಸರಿಯಾದ ರೀತಿಯಲ್ಲಿ ದೊರೆಯುತ್ತಿಲ್ಲ ಎಂದು ರೈತ ಸಂಘದ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.

ನಗರದ ಹೆಚ್.ಕೆ. ವೀರಪ್ಪ ಕಲ್ಯಾಣ ಮಂಟದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.

ಮಹಿಳೆಯರು ಸಮಾಜದಲ್ಲಿ ಕುಟುಂಬದ ನಿರ್ವಹಣೆ, ಸಮಾಜದ ಉನ್ನತಿಗೆ ತೊಡಗಿಸಿಕೊಳ್ಳುವುದು, ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ಸೇರಿದಂತೆ ಅನೇಕ ರಂಗದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು, ತಮ್ಮ ಕಾರ್ಯವನ್ನು ಮಾಡುತ್ತಾರೆ. ಆದರೆ, ಮಹಿಳೆಯರ ಬೆಳವಣಿಗೆಗೆ ತಕ್ಕಂತೆ ಸಮಾಜದಲ್ಲಿ ಗೌರವ, ಹಕ್ಕುಗಳು, ಸ್ಥಾನಮಾನಗಳು, ಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯುತ್ತಿಲ್ಲ ಎಂದು ವಿಷಾದಿಸಿದರು.

ಕೃಷಿ ಕ್ಷೇತ್ರ ಜಾಗತೀಕರಣದಿಂದ ಬದಲಾಗಿದೆ. ಆದರೆ, ರೈತರ ಸಂಕಷ್ಟಗಳು ಬಹಳ ದೊಡ್ಡಮಟ್ಟದಲ್ಲಿವೆ. ದಿನದಿಂದ ದಿನಕ್ಕೆ ಸಾಲದ ಹೊರೆ ಹೆಚ್ಚಾಗುತ್ತಿದೆ. ಜಮೀನು ಕೆಲಸವನ್ನು ಮಾಡುವ ಪುರುಷರಿಂದ ಹಿಡಿದು ಕುಟುಂಬದ ಸದಸ್ಯರೂ ಸಹಾ ಸಾಲದ ಸುಳಿಯಲ್ಲಿ ಬದುಕುತ್ತಿದ್ದಾರೆ. ಇದನ್ನು ಹೋಗಲಾಡಿಸಲು ಸರ್ಕಾರ ರೈತ ಪರವಾಗಿ ಯೋಜನೆಗಳನ್ನು ರೂಪಿಸಿ, ಅವುಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ತರುವುದಕ್ಕೆ ಮುಂದಾಗಬೇಕಾಗಿದೆ ಎಂದು ಹೇಳಿದರು.

ಸಂಘಟನೆ ಗಟ್ಟಿಯಾಗಿ ಇದ್ದರೆ ರೈತ ಕುಟುಂಬದ ಯಾವುದೇ ಸಮಸ್ಯೆಗಳು ಬಂದಾಗ ಹೋರಾಟದ ಮೂಲಕ ನಮ್ಮ ಹಕ್ಕು ಮತ್ತು ಗೌರವ ಪಡೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಸಂಘಟನಾ ಶಕ್ತಿಯನ್ನು ಹೆಚ್ಚಿಸಬೇಕು ಎಂದು ಹೇಳಿದರು.

ರಾಮನಗರದ ಹಿರಿಯ ರೈತ ಮಹಿಳಾ ಮುಖಂಡರಾದ ಅನಸೂಯಮ್ಮ ಮಾತನಾಡಿ, ಕೃಷಿ ಕ್ಷೇತ್ರವನ್ನು ಕಂಡುಹಿಡಿದವರು ಮಹಿಳೆಯರು. ಪುರುಷರು ಮನೆಯಲ್ಲಿ ಜೀವನ ನಡೆಸುವುದಕ್ಕೆ, ಬೇಟೆಯಾಡಲು ಕಾಡಿಗೆ ಹೋದ ಸಮಯದಲ್ಲಿ ಮಹಿಳೆಯರು ಕುರಿ, ಕೋಳಿ, ರೇಷ್ಮೆ ಸೇರಿದಂತೆ ಹಲವಾರು ವಿಧಾನದ ಮೂಲಕ ಕೃಷಿ ಕೆಲಸಕ್ಕೆ ಮುಂದಾದರು. ಇದು ಕ್ರಮೇಣ ಹೆಚ್ಚಾಗುತ್ತಿದ್ದಂತೆ, ಪುರುಷರು ಇದನ್ನು ನಿಭಾಯಿಸಲು ಮುಂದಾದರು ಎಂದು ಹೇಳಿದರು.

ಆದರೆ, ಇದುವರೆಗೂ ಸಹ ಮಹಿಳೆಯರು ಪುರುಷರಿಗೆ ಸಮಕಾಲೀನರು ಎಂದು ಯಾರೂ ಕರೆಯುತ್ತಿಲ್ಲ. ಹಗಲು, ರಾತ್ರಿ ಎನ್ನದೆ ಶ್ರಮ ವಹಿಸಿ ಕೆಲಸ ಮಾಡುವ ಮಹಿಳೆಯರಿಗೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ವಿಷಾದಿಸಿದರು.

ಈ ಸಂದರ್ಭದಲ್ಲಿ ಕೋಲಾರದ ನಳನಿಗೌಡ, ದಾವಣಗೆರೆ ಸುನಿತಾ ಶಂಕರಗೌಡ, ಸರೋಜಮ್ಮ , ಮಂಡ್ಯ ನಂದಿನಿ ಜಯರಾಮ್, ಬೈಲಹೊಂಗಲ ಸುರೇಖಾ ಕಂಬೋಜಿ, ಬೆಳಗಾವಿ ಪಾರ್ವತಿ, ರೇಖಾ, ಸುರೇಶ್ ಬಾಬು ಪಾಟೀಲ್, ಕೆ.ಟಿ. ಗಂಗಾಧರ್, ರಾಮಣ್ಣ, ಮಲ್ಲಿಕಾರ್ಜುನ ಬಳ್ಳಾರಿ, ತಾಪಂ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಕೆ.ಜಿ. ಸಿರಿಗೆರೆ ಕೊಟ್ರೇಶ್, ನಂದಿತಾವರೆ ಶಂಭುಲಿಂಗಪ್ಪ, ನಂದಿತಾವರೆ ನಂದೀಶ, ಭಾನುವಳ್ಳಿ ಕೊಟ್ರೇಶ್, ಮಹೇಶಪ್ಪ ದೊಗ್ಗಳಿ, ಗರಡಿಮನೆ ಬಸವರಾಜ್ ಉಪಸ್ಥಿತರಿದ್ದರು.

error: Content is protected !!