ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯನ್ನು ಗೆಲ್ಲಿಸಿ

ಹರಪನಹಳ್ಳಿ ಕಾರ್ಯಕ್ರಮದಲ್ಲಿ ನೀಲಗುಂದ ಗುಡ್ಡದ ವಿರಕ್ತ ಮಠದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮೀಜಿ ಆಶಯ

ಹರಪನಹಳ್ಳಿ, ಮಾ. 8- ಇಲ್ಲಿಯವರೆಗೂ ಪುರುಷರು ಆಳ್ವಿಕೆ ಮಾಡುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಗಾರಿಕೆಯನ್ನು ಈ ಮಹಿಳಾ ದಿನಾಚರಣೆ ಮೂಲಕ ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ಮಹಿಳೆಯರು ಪಣ ತೊಡಬೇಕು ಎಂದು ನೀಲಗುಂದ ಗುಡ್ಡದ ವಿರಕ್ತ ಮಠದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮೀಜಿ ಕರೆ ನೀಡಿದ್ದಾರೆ.

ತಾಲ್ಲೂಕಿನ ಬಾಗಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ವತಿ ಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಇಂದು ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಲೆ, ಸಾಂಸ್ಕೃತಿಕ, ಸಾಹಿತ್ಯ, ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಎಂ.ಪಿ. ಪ್ರಕಾಶ್ ಅವರ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇದ್ದಾರೆ ಎಂಬುದಕ್ಕೆ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರ ಪತ್ನಿ ರುದ್ರಾಂಭ ಸಾಕ್ಷಿಯಾಗಿದ್ದಾರೆ. ಇಂದು ಸಮಾಜದಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ. ಸಮಾಜದಲ್ಲಿ ಬೇರೂರಿದ್ದ ಬಾಲ್ಯ ವಿವಾಹ, ಸತಿ ಸಹಗಮನ, ಮೂಢನಂಬಿಕೆ ಹಾಗೂ ಕಂದಾಚಾರಗಳನ್ನು ಬದಿಗಿಟ್ಟು, ಮಹಿಳೆ ಮುಖ್ಯವಾಹಿನಿಗೆ ಬರಬೇಕಾಗಿದೆ. ಮಕ್ಕಳಿಗೆ ಶಿಕ್ಷಣಕ್ಕಿಂತ ಉತ್ತಮ ಸಂಸ್ಕಾರವಂತರನ್ನಾಗಿ ಮಾಡುವ ಹೊಣೆಗಾರಿಕೆ ಮಹಿಳೆಯರ ಮೇಲಿದೆ ಎಂದರು.

ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಎಂ.ಪಿ. ವೀಣಾ ಮಹಾಂತೇಶ್ ಮಾತನಾಡಿ, ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಸಹ ಅತ್ಯಾಚಾರ, ದೌರ್ಜನ್ಯಗಳು ಆಗುತ್ತಿದ್ದು, ಮಹಿಳೆಯರು ಸ್ವ ರಕ್ಷಣೆಗಾಗಿ ಕರಾಟೆ, ಕುಂಗ್‌ಫೂನಂತಹ ಕಲೆಗಳನ್ನು ಕಲಿತುಕೊಳ್ಳಬೇಕಿದೆ. ಮಹಿಳೆ ಪುರುಷರಿಗೆ ಪೈಪೋಟಿಯಲ್ಲಿ ಸಮಾನಳು. ಅಲ್ಪಬುದ್ಧಿಯ ಹೆಣ್ಣು ಎಂದು ಹೀಯಾಳಿಸುವವರಿಗೆ ಸಾಧನೆಯಿಂದ ಸಾಬೀತು ಮಾಡಿರುವ ಮಹಿಳೆ, ಒಲೆಯ ಮುಂದಕ್ಕೆ ಮಾತ್ರ ಸೀಮಿತವಾಗದೇ ವೇದಿಕೆಗೆ ಬರಬೇಕು ಎನ್ನುವ ಉದ್ದೇಶದಿಂದ ಟ್ರಸ್ಟ್ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಪುರುಷ ಪ್ರಧಾನ ಸಮಾಜದಲ್ಲಿ ಹೊಗಳಿಕೆಯಿಂದ ಮಹಿಳೆಯರನ್ನು ಅಧೋಗತಿಗೆ ತಳ್ಳುವಂತಹ ಸ್ಥಿತಿಯಲ್ಲಿ ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದಿರಲಿ ಎಂದು ಆಶಯ ವ್ಯಕ್ತಪಡಿಸಿದರು.

ರುದ್ರಾಂಬ ಎಂ.ಪಿ. ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪುರಸಭೆ ಮಾಜಿ ಅಧ್ಯಕ್ಷ ಕವಿತಾ ವಾಗೀಶ್, ವೈದ್ಯರಾದ ಡಾ. ನಾಗವೇಣಿ, ಮುಖ್ಯ ಶಿಕ್ಷಕಿ ಸುಭದ್ರಮ್ಮ, ಗಾಯತ್ರಮ್ಮ, ನಿವೃತ್ತ ಕ್ಷೇತ್ರ ದೈಹಿಕ ಶಿಕ್ಷಣಾಧಿಕಾರಿ ಕೆಂಚಮ್ಮ ಟಿ., ನಿವೃತ್ತ ಸೈನಿಕ ಮಂಜಪ್ಪ, ಗ್ರಾ.ಪಂ. ಅಧ್ಯಕ್ಷರಾದ ಕೊಟ್ರಮ್ಮ, ಉಪಾಧ್ಯಕ್ಷರಾದ ಗೀತಮ್ಮ, ಹೆಚ್.ಎಂ. ಲಲಿತಮ್ಮ, ಮಮ್ತಾಜ್ ಬೇಗಂ, ಮಾಲ್ದಾರ್ ಪಾತೀಮಾ ಬೀ, ವೆಂಕಟಮ್ಮ, ಸೂಲಗಿತ್ತಿ ಪೂಜಾರ್ ಹನುಮವ್ವ, ತಾಲ್ಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ದಾದಾಪೀರ್, ಬಸವರಾಜ್ ಉಪಸ್ಥಿತರಿದ್ದರು.

error: Content is protected !!