ದುರ್ಗಾಂಬಿಕಾ ದೇವಿ ಜಾತ್ರೆ ಸಿದ್ಧತೆ ಪರಿಶೀಲಿಸಿದ ವಿಪಕ್ಷ ನಾಯಕ

ದಾವಣಗೆರೆ, ಮಾ. 8 – ಇದೇ ದಿನಾಂಕ 14 ಮತ್ತು 15ರಂದು ನಡೆಯಲಿರುವ ನಗರ ದೇವತೆ ಶ್ರೀ ದುಗ್ಗಮ್ಮ ಜಾತ್ರೆ ಹಿನ್ನೆಲೆಯಲ್ಲಿ ಮಾಡಿಕೊಂಡಿರುವ ಸಿದ್ಧತೆ ಬಗ್ಗೆ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ನೇತೃತ್ವದ ತಂಡ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿತು.

ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಮಂಜುನಾಥ್, ನಿಗದಿತ ವೇಳೆಯಲ್ಲಿ ಕೆಲ ಕೆಲಸ ಆಗದ ಕಾರಣ   ಅಸಮಾಧಾನ ಹೊರಹಾಕಿದರು. 

ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸು ತ್ತಾರೆ.   ಯಾವುದೇ ರೀತಿಯ ಸಮಸ್ಯೆಗಳು ಜನರು ಹಾಗೂ ಭಕ್ತರಿಗೆ ಆಗಬಾರದು. ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ತರಾ ಟೆಗೆ ತೆಗೆದುಕೊಂಡ ಅವರು, ಎಲ್ಲೆಂದರಲ್ಲಿ ಗುಂಡಿ ಬಿದ್ದಿವೆ. ಮುಚ್ಚುವ ಕಾರ್ಯ ನಡೆಯು ತ್ತಲೇ ಇದೆ. ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಜನರು ಬರುತ್ತಿದ್ದು, ಏನಾದರೂ ಅನಾಹುತವಾದರೆ ಯಾರು ಹೊಣೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ವೇಗವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಅಲ್ಲಲ್ಲಿ ಬಿದ್ದಿರುವ ಗುಂಡಿಗಳು, ಅಗೆದು ಮಣ್ಣು ತೆಗೆದಿರುವ ಜಾಗದಲ್ಲಿ ಕಾಮಗಾರಿ ಬೇಗ ಪೂರ್ಣಗೊಳಿಸಿ, ಅದರ ಫೋಟೋ ಕಳುಹಿಸಿ ಕೊಡಬೇಕೆಂದು ಸೂಚಿಸಿದರು‌. 

ಸ್ವಚ್ಚತಾ ಕಾರ್ಯಕ್ಕೆ 20 ಕಾರ್ಮಿಕರನ್ನು ನಿಯೋಜಿಸಲಾಗಿದೆ. ಅದೇ ರೀತಿಯಲ್ಲಿ ಐದು ತಂಡಗಳಾಗಿ ಕಾರ್ಯನಿರ್ವಹಿಸಲಿದ್ದು, ಸ್ವಚ್ಛತೆಗೆ ಹಾಗೂ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಕೆಲವೆಡೆ ಕಾಂಕ್ರಿಟ್ ರಸ್ತೆಯಾಗಿಲ್ಲ. ಅರ್ಧಂಬರ್ಧ ಕೆಲಸ ಆಗಿದೆ. ನಿರ್ಲಕ್ಷ್ಯ ವಹಿಸದೇ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. 

ಗಾಂಧಿನಗರದ ಕೆಲ ಪ್ರದೇಶಗಳಿಗೆ ಭೇಟಿ ನೀಡಿದ ಮಂಜುನಾಥ್, ಈ ಭಾಗದ ಪಾಲಿಕೆ ಸದಸ್ಯರುಗಳಾದ  ಎಲ್.ಡಿ. ಗೋಣೆಪ್ಪ,  ಜಿ. ಡಿ. ಪ್ರಕಾಶ್ ಅವರುಗಳ ವಾರ್ಡುಗಳಿಗೆ ಭೇಟಿ ನೀಡಿ ಸಿದ್ಧತೆ ಅವಲೋಕಿಸಿದರು. 

ಈ ವೇಳೆ ಮಹಾನಗರ ಪಾಲಿಕೆಯ ಸದಸ್ಯರಾದ ಜಿ. ಡಿ. ಪ್ರಕಾಶ್, ಉದಯ ಕುಮಾರ್, ವಿನಾಯಕ ಪೈಲ್ವಾನ್, ಇಟ್ಟಿಗುಡಿ ಮಂಜುನಾಥ್, ಚಮನ್ ಸಾಬ್, ನಗರ ಸಭೆ ಮಾಜಿ ಸದಸ್ಯ ಮಲ್ಲಿಕಾರ್ಜುನ್, ಎಇಇ ರವಿ, ಎಕ್ಸಿಕ್ಯೂಟಿವ್ ಎಂಜಿನಿಯರ್ ಉದಯಕುಮಾರ, ಎಇಗಳಾದ ಪ್ರವೀಣ್ ಕುಮಾರ್, ಯೂಸೂಫ್ ಆಲಿ, ಆರೋಗ್ಯ ನಿರೀಕ್ಷಕ ಮದನ ಮತ್ತಿತರರು ಹಾಜರಿದ್ದರು.

error: Content is protected !!