ಹೊನ್ನಾಳಿ, ಮಾ. 7- ಉಕ್ರೇನ್‍ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ತೆರಳಿದ್ದ ಕುಂದೂರು ಗ್ರಾಮದ ವೈದ್ಯಕೀಯ ವಿದ್ಯಾರ್ಥಿನಿ ಪ್ರಿಯಾ ಅವರ ಮನೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ನಿನ್ನೆ ಭೇಟಿ ನೀಡಿ ಯುವತಿಯ ಯೋಗ-ಕ್ಷೇಮ ವಿಚಾರಿಸಿದರು.
ಉಕ್ರೇನ್‍ನ ಪರಿಸ್ಥಿತಿಯ ಬಗ್ಗೆ ವಿದ್ಯಾರ್ಥಿನಿಯೊಂದಿಗೆ ಸಮಾಲೋಚನೆ ನಡೆಸಿದರು. ಪ್ರಿಯಾ ತಂದೆ ಜ್ಞಾನೇಶ್ವರ್ ಹಾಗೂ ತಾಯಿ ನೇತ್ರಾವತಿ ಅವರಿಗೆ ಧೈರ್ಯ ಹೇಳಿದರು.
ಯುದ್ಧದ ಕಾರಣದಿಂದ ವೈದ್ಯಕೀಯ ಶಿಕ್ಷಣವನ್ನು ಅರ್ಧಕ್ಕೇ ಬಿಟ್ಟುಬಂದಿರುವ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳು ಶೀಘ್ರದಲ್ಲೇ ನೀತಿಯೊಂ ದನ್ನು ರೂಪಿಸಲಿವೆ. ರಾಷ್ಟ್ರೀಯ ಆರೋಗ್ಯ ಶಿಕ್ಷಣ ನೀತಿಯಡಿ ವೈದ್ಯಕೀಯ ಶಿಕ್ಷಣ ನೀಡಲು ಚಿಂತನೆ ನಡೆಸಲಾಗುವುದು ಎಂದು ರೇಣುಕಾಚಾರ್ಯ ತಿಳಿಸಿದರು.
ವಿದ್ಯಾರ್ಥಿನಿ ಪ್ರಿಯಾ ಮಾತನಾಡಿ, ನಾನು ಸುರಕ್ಷಿತವಾಗಿ ವಾಪಸ್ ಬರುತ್ತೇನೆ ಎಂಬ ನಂಬಿಕೆಯೇ ಇರಲಿಲ್ಲ. ಉಕ್ರೇನ್‍ನಲ್ಲಿ ಎರಡನೇ ವರ್ಷದ ಎಂಬಿಬಿಎಸ್ ಪದವಿ ಓದುತ್ತಿದ್ದೆ. ಯುದ್ಧ ಆರಂಭ ವಾಗುತ್ತಿದ್ದಂತೆ ಭಾರತದ ರಾಯಭಾರಿ ಕಚೇರಿಯಿಂದ ದೂರವಾಣಿ ಕೆರೆಗಳು ಬರಲಾರಂಭಿಸಿದವು. ನಾನು ಗಡಿ ತಲುಪಿದ ಮೇಲೆ ನೆಮ್ಮದಿಯ ನಿಟ್ಟುಸಿರು ಬಿಟ್ಟೆ. ನನ್ನನ್ನು ಸುರಕ್ಷಿತ ವಾಗಿ ಮನೆಗೆ ತಲುಪಿಸಿದ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಸಾಂತ್ವನ: ಯುದ್ಧಪೀಡಿತ ಉಕ್ರೇನ್‍ನಲ್ಲಿ ಮೃತಪಟ್ಟ ರಾಣೇಬೆನ್ನೂರಿನ ಚಳ ಗೇರಿ ಗ್ರಾಮದ ಯುವಕ ನವೀನ್ ಎಸ್.ಗ್ಯಾನಗೌಡರ್ ಅವರ ಮನೆಗೆ ಎಂ.ಪಿ. ರೇಣುಕಾಚಾರ್ಯ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ವೈಯಕ್ತಿಕವಾಗಿ 1 ಲಕ್ಷ ರೂ. ಪರಿಹಾರ ವಿತರಿಸಿದರು.
ಸುಮಾ ರೇಣುಕಾಚಾರ್ಯ, ಮಲೆಕುಂಬಳೂರು ಗ್ರಾಪಂ ಅಧ್ಯಕ್ಷ ಎಸ್.ಎಚ್. ವಿಕಾಸ್, ಕುಂದೂರು ಗ್ರಾಪಂ ಸದಸ್ಯರಾದ ಪ್ರಸನ್ನ, ರಹಮತ್ ಉಲ್ಲಾ, ಧನಂಜಯ, ಆಂಜನೇಯ, ಮುಖಂಡರಾದ ಹಾಲೇಶ್, ಉಮಾಪತಿ, ಬಸಣ್ಣ ಇತರರು ಇದ್ದರು.