ಜಗಳೂರು, ಮಾ.6- ಜಗಳೂರು ಕ್ಷೇತ್ರದ 57 ಕೆರೆಗಳಿಗೆ ದೀಟೂರಿನಿಂದ 660 ಕೋಟಿ ರೂ. ವೆಚ್ಚದ ನೀರು ತುಂಬಿಸುವ ಯೋಜನೆ ಕಾಮಗಾರಿ ತುಪ್ಪದಹಳ್ಳಿ ಕೆರೆಯವರೆಗೆ ಬಹುತೇಕ ಪೂರ್ಣಗೊಂಡಿದ್ದು, ಉಳಿದ ಕೆರೆಗಳ ಪೈಪ್‌ಲೈನ್ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದು ರಾಜ್ಯ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ್ ಗುಂಗೆ ಹೇಳಿದರು.
ತಾಲ್ಲೂಕಿನ ತುಪ್ಪದಹಳ್ಳಿ ಕೆರೆಯ ಹತ್ತಿರ ನಡೆಯುವ ಕಾಮಗಾರಿ ಹಾಗೂ ಕೆರೆ ಏರಿಯನ್ನು ಶನಿವಾರ ಸಂಜೆ ವೀಕ್ಷಿಸಿ ನಂತರ ಅವರು ಮಾತನಾಡಿದರು.
ಭರಮಸಾಗರ ಮಾದರಿಯಲ್ಲಿ ಸಿರಿಗೆರೆ ಶ್ರೀಗಳ ಆಶಯದಂತೆ ತುಪ್ಪದಹಳ್ಳಿ ಕೆರೆಗೆ ಸುಸಜ್ಜಿತವಾದ ಕಾರಂಜಿ ನಿರ್ಮಿಸಲು ಸ್ಥಳ ಪರಿಶೀಲನೆ ಮಾಡಲಾಗಿದೆ. ತುಪ್ಪದಹಳ್ಳಿ ಕೆರೆಯು 1200 ಎಕರೆ ವಿಸ್ತೀರ್ಣ ಹೊಂದಿರುವ ನೂರು ವರ್ಷಕ್ಕೂ ಹಳೆಯದಾದ ಕೆರೆಯಾಗಿದ್ದು, ಕೆರೆಯ ಏರಿಯು ಸದೃಢವಾಗಿದೆ. ಜಗಳೂರು ತಾಲ್ಲೂಕಿನ ಕಡೆ ಗ್ಯಾಸ್ ಪೈಪ್‌ಲೈನ್ ಹತ್ತಿರ ಹಾದು ಹೋಗುವ ಸ್ಥಳದಲ್ಲಿ ಪೈಪ್‍ಲೈನ್ ಕಾಮಗಾರಿಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಾರ್ಚ್ ಅಂತ್ಯದೊಳಗೆ ತುಪ್ಪದಹಳ್ಳಿ ಕೆರೆಗೆ ನೀರು : ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಸಿರಿಗೆರೆ ಶ್ರೀಗಳ ಮಾರ್ಗದರ್ಶನದಲ್ಲಿ ರೈತರ ಆಶಯದಂತೆ ಈಗಾಗಲೇ ದೀಟೂರಿನಿಂದ ಚಟ್ನಹಳ್ಳಿ ಗುಡ್ಡದವರೆಗೆ ಹಾಗೂ ತುಪ್ಪದಹಳ್ಳಿ ಕೆರೆಯವರೆಗೆ ಪೈಪ್‌ಲೈನ್ ಕಾಮಗಾರಿ ಮುಗಿದಿದ್ದು, ಮಾರ್ಚ್ ಅಂತ್ಯದೊಳಗೆ ತುಪ್ಪದಹಳ್ಳಿ ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಕೆರೆ ಅಭಿವೃದ್ಧಿಗೆ 8 ಕೋಟಿ ರೂ.ಅನುದಾನ : ತುಪ್ಪದಹಳ್ಳಿ ಕೆರೆ ಏರಿ ಅಭಿವೃದ್ಧಿ, ಜಂಗಲ್ ಕಟ್ಟಿಂಗ್, ಹೂಳು ತೆಗೆಯಲು 8 ಕೋಟಿ ರೂ. ಅನುದಾನದ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಕಾಮಗಾರಿ ನಡೆಯಲಿದೆ. ಬರುವ ಮುಂಗಾರಿನ ಹೊತ್ತಿಗೆ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್ ಶಿವಾನಂದ ಬಣಕಾರ್, ಎಇ ಶ್ರೀಧರ್, ಇಇ ಎಸ್.ಬಿ.ಮಲ್ಲಪ್ಪ, ಗುತ್ತಿಗೆದಾರ ದಯಾನಂದ, ಬಿಜೆಪಿ ಮಂಡಲ ಅಧ್ಯಕ್ಷ ಹೆಚ್.ಸಿ.ಮಹೇಶ್, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ, ಜಿಲ್ಲಾ ರೈತ ಮೋರ್ಚಾದ ಕಾರ್ಯದರ್ಶಿ ಶಿವಪ್ರಕಾಶ್, ಜಿ.ಪಂ. ಮಾಜಿ ಸದಸ್ಯರಾದ ಸೊಕ್ಕೆ ನಾಗರಾಜ್, ಬಿಜೆಪಿ ಯುವ ಘಟಕದ ಅಧ್ಯಕ್ಷ ಸೂರ್ಯಕಿರಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.