ಖಾಸಗಿ ಬಸ್ ನಿಲ್ದಾಣ, ಎಸ್.ಟಿ.ಪಿ.ಐ. ಉಪ ಕೇಂದ್ರ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಸಂಸದ ಜಿ.ಎಂ. ಸಿದ್ದೇಶ್ವರ
ದಾವಣಗೆರೆ, ಮಾ. 3- ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಪಿ.ಬಿ. ರಸ್ತೆಯ ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಹಾಗೂ ಕೇಂದ್ರ ಸರ್ಕಾ ರದ ವತಿಯಿಂದ ನಿರ್ಮಿಸಲಾಗುತ್ತಿ ರುವ ಎಸ್.ಟಿ.ಪಿ.ಐ. ಉಪ ಕೇಂದ್ರದ ಕಾಮಗಾರಿ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದ್ದಾರೆ.
ಎರಡೂ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ನಂತರ ಪತ್ರ ಕರ್ತರೊಂದಿಗೆ ಮಾತನಾಡಿದ ಅವರು, 2019ರಲ್ಲೇ ಬಸ್ ನಿಲ್ದಾಣದ ಕಾಮಗಾರಿ ಆರಂಭವಾಗಬೇಕಿತ್ತು. ಆದರೆ, ಅಧಿಕಾರಿಗಳು ಸಬೂಬು ಹೇಳುತ್ತಾ ಮತ್ತು ಗುತ್ತಿಗೆದಾರರ ಬೇಜವಾಬ್ದಾರಿತನದಿಂದ ಕೆಲಸ ನಿಧಾನ ಆಗಿದೆ. ಈ ಬಗ್ಗೆ ಎಚ್ಚರಿಕೆ ಕೊಟ್ಟಿದ್ದೇವೆ ಎಂದಿದ್ದಾರೆ.
ಇನ್ನು ಯಾವುದೇ ಸಬೂಬು ಹೇಳದೇ ಏಪ್ರಿಲ್ ಒಳಗೆ ಬಸ್ ನಿಲ್ದಾಣ ಉದ್ಘಾಟನೆಯಾಗುವಂತೆ ಮಾಡಬೇಕೆಂದು ಗಡುವು ನೀಡ ಲಾಗಿದೆ ಎಂದವರು ಹೇಳಿದ್ದಾರೆ.
ಬಸ್ ನಿಲ್ದಾಣದಲ್ಲಿ 15 ಬಸ್ ಗಳು ನಿಲ್ಲುವಷ್ಟು ಜಾಗ ಇರಲಿದೆ. ಅಂಗಡಿಗಳು, ಕ್ಯಾಂಟೀನ್, ವಿಶ್ರಾಂತಿ ಕೋಣೆ, ವಾಹನ ನಿಲುಗಡೆ ಸೌಲಭ್ಯ ಗಳಿರಲಿವೆ. ಮೂರು ದೊಡ್ಡ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಕಾಮಗಾರಿ ಪೂರ್ಣಗೊಂಡ ನಂತರ ನಿಲ್ದಾಣವನ್ನು ಪಾಲಿಕೆಗೆ ಹಸ್ತಾಂತರಿಸ ಲಾಗುವುದು ಎಂದು ಸಿದ್ದೇಶ್ವರ ಹೇಳಿದರು.
ಟೆಂಡರ್ ಕರೆಯುವ ಮೂಲಕ ಮಳಿಗೆಗಳನ್ನು ಹಸ್ತಾಂತರಿಸುವಂತೆ ಪಾಲಿಕೆ ಮೇಯರ್ಗೆ ಸೂಚನೆ ನೀಡಿದ್ದೇನೆ. ಜೀವನೋಪಾಯಕ್ಕೆ ಅನುಕೂಲ ಆಗುವಂತೆ ಮಳಿಗೆ ಹರಾಜು ನಡೆಯಬೇಕು ಎಂದು ಸಿದ್ದೇಶ್ವರ ಹೇಳಿದರು.
ಎಸ್.ಟಿ.ಪಿ.ಐ. ಉಪ ಕೇಂದ್ರದ ಕುರಿತು ಮಾತನಾಡಿದ ಅವರು, 2 ಕೋಟಿ ರೂ. ವೆಚ್ಚದ ಈ ಘಟಕದ ಕಾಮಗಾರಿ 3-4 ತಿಂಗಳಿನಿಂದ ನಡೆಯುತ್ತಿದೆ. ಶೇ.85ರಷ್ಟು ಕಾಮಗಾರಿ ಪೂರ್ಣಗೊಂಡಿದೆ. 2 ತಿಂಗಳಲ್ಲಿ ಕೆಲಸ ಪೂರ್ಣಗೊಂಡು ಲೋಕಾರ್ಪಣೆ ಆಗಲಿದೆ. ಉದ್ಘಾಟನೆಗಾಗಿ ಕೇಂದ್ರ ಸಚಿವರೊಬ್ಬರನ್ನು ಕರೆಸಲಾಗುವುದು ಎಂದರು.
ನಗರದಲ್ಲಿ 2 ಎಕರೆ ಜಾಗ ಕೊಟ್ಟರೆ ಎಸ್.ಟಿ.ಪಿ.ಐ. ಘಟಕಕ್ಕೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಕೇಳಿದ್ದೇನೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಹಿಡಿದು ಸಾಫ್ಟ್ವೇರ್ ಉದ್ಯಮಿಗಳವರೆಗೆ ಇದರಿಂದ ಅನುಕೂಲವಾಗಿದೆ ಎಂದು ಸಿದ್ದೇಶ್ವರ ಹೇಳಿದ್ದಾರೆ.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಉಕ್ರೇನ್ನಲ್ಲಿ ಜಿಲ್ಲೆಯ 11 ಜನ ಇದ್ದಾರೆ. ಇವರಲ್ಲಿ ಇಬ್ಬರು ವಾಪಸ್ ಬಂದಿದ್ದಾರೆ. ಉಳಿದವರು ಬರುವ ಹಾದಿಯಲ್ಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್, ದೂಡ ಅಧ್ಯಕ್ಷ ದೇವರಮನೆ ಶಿವಕುಮಾರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ, ಮಾಜಿ ಮೇಯರ್ ಎಸ್.ಟಿ. ವೀರೇಶ್, ಪಾಲಿಕೆ ಸದಸ್ಯರಾದ ಕೆ.ಎಂ. ವೀರೇಶ್, ಆರ್.ಎನ್. ಶಿವಪ್ರಕಾಶ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮುಖಂಡರಾದ ಪಿ.ಸಿ. ಶಿವಕುಮಾರ್, ಪಿ.ಸಿ. ಶ್ರೀನಿವಾಸ್, ಟಿಂಕರ್ ಮಂಜಣ್ಣ, ಎ.ವೈ. ಪ್ರಕಾಶ್, ಶಿವನಗೌಡ ಪಾಟೀಲ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಎಸ್.ಟಿ.ಪಿ.ಐ. ಹುಬ್ಬಳ್ಳಿಯ ಜಂಟಿ ನಿರ್ದೇಶಕ ವಿ. ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.