ಹರಪನಹಳ್ಳಿಯಲ್ಲಿ ಎಸ್ಎಫ್ಐ ಪ್ರತಿಭಟನೆ
ಹರಪನಹಳ್ಳಿ, ಮಾ.3- ಸರ್ಕಾರದ ನಿಯಮಗಳನ್ನು ಸರಿಯಾಗಿ ಪಾಲಿಸದೇ ಈಜುಕೊಳ ತೆರೆದಿರುವ ನಂದಿ ವೈಟ್ ಹೌಸ್ನ ಮಾಲೀಕನ ನಿರ್ಲಕ್ಷ್ಯತನವೇ ವಿದ್ಯಾರ್ಥಿ ಸಾವಿಗೆ ಕಾರಣ ಎಂದು ಆರೋಪಿಸಿ, ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆ ಕಾರ್ಯಕರ್ತರು ಗುರುವಾರ ತಹಶೀಲ್ದಾರ್ಗೆ ಮನವಿ ಸಲ್ಲಿಸಿದ್ದಾರೆ.
ಮಾ.1 ರಂದು ಕಾಲೇಜು ರಜೆ ಇದ್ದ ಕಾರಣ ಎಸ್ಯುಜೆಎಂ ಕಾಲೇಜ್ನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಸಚಿನ್ ಮತ್ತು ಆತನ ನಾಲ್ಕು ಜನ ಸ್ನೇಹಿತರು ತಾಲ್ಲೂಕಿನ ಶೃಂಗಾರ ತೋಟದ ಕ್ರಾಸ್ ಬಳಿ ಇರುವ ನಂದಿ ವೈಟ್ ಹೌಸ್ಗೆ ತೆರಳಿ, ಅಲ್ಲಿರುವ ಈಜುಕೊಳದಲ್ಲಿ ಈಜಲು ಹೋಗಿದ್ದ ಸಂದರ್ಭದಲ್ಲಿ ಸಚಿನ್ ಎಂಬ ವಿದ್ಯಾರ್ಥಿ ಈಜುತ್ತಾ ಈಜುತ್ತಾ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ,
ನಂದಿ ವೈಟ್ ಹೌಸ್ನ ಮಾಲೀಕ ಈಜುಕೊಳವನ್ನು ನೋಡಿಕೊಳ್ಳಲು ಕೋಚರ್ ಆಗಲೀ ಅಥವಾ ವಾಚ್ಮ್ಯಾನ್ನನ್ನಾಗಲೀ ನೇಮಕ ಮಾಡಿಕೊಳ್ಳದ ಪರಿಣಾಮವೇ ವಿದ್ಯಾರ್ಥಿ ಸಾವಿಗೆ ಕಾರಣ ಎಂದು ಅವರು ದೂರಿದ್ದಾರೆ.
ಈಜುಕೊಳದ ಪರವಾನಗಿ ವಿಚಾರದಲ್ಲಿ ಅನುಮಾನ ವ್ಯಕ್ತವಾಗಿದ್ದು ಕಂದಾಯ ಇಲಾಖೆಯ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಬೇಕು ಮತ್ತು ಸಾವಿಗೀಡಾದ ಸಚಿನ್ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕೆಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆ ತಾಲ್ಲೂಕು ಕಾರ್ಯದರ್ಶಿ ವೆಂಕಟೇಶ್ ಮತ್ತು ರವಿಕುಮಾರ್, ಮಲ್ಲಿಕಾರ್ಜುನ್, ಲಕ್ಯನಾಯ್ಕ್, ಹೇಮಂತ್, ವಿಶ್ವನಾಥ್, ಮೋಹನ್, ರಾಜು, ಬಸವರಾಜ್, ನಾಗರಾಜ್, ಮಂಜುನಾಥ, ಜ್ಯೋತಿ ದೀಪಾ, ಸ್ಪಂದನ, ಸ್ಫೂರ್ತಿ, ಭೂಮಿಕಾ, ಜಾನಕಿ ಮಂಜುಳಾ, ಸೇರಿದಂತೆ ವಿದ್ಯಾರ್ಥಿಗಳಿದ್ದರು.