ಜಗಳೂರು ಶಾಸಕ ಎಸ್.ವಿ. ರಾಮಚಂದ್ರ
ಜಗಳೂರು, ಮಾ.2- ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಠಡಿಗಳ ಹಾಗೂ ಕುಡಿಯುವ ನೀರಿಗೆ 50 ಲಕ್ಷ ಸೇರಿ ದಂತೆ ಮೂಲಸೌಕರ್ಯಕ್ಕಾಗಿ 2.76 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ತಿಳಿಸಿದ್ದಾರೆ.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡಾ, ಎನ್ ಎಸ್ಎಸ್, ಯುವ ರೆಡ್ ಕ್ರಾಸ್, ರೋವರ್ಸ್ ಹಾಗೂ 1.20 ಕೋಟಿ ರೂ. ವೆಚ್ಚದ ನೂತನ ಕಟ್ಟಡಗಳ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಸರ್ಕಾರಿ ಕಾಲೇಜು ವರದಾನವಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಭೌತಿಕ ತರಗತಿಗಳಿಲ್ಲದೆ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಿತ್ತು. ಆದರೆ ಕೋವಿಡ್ ಮಧ್ಯೆ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಉತ್ಸಾಹ ಶ್ಲಾಘನೀಯ ಎಂದರು.
ಪ್ರಾಧ್ಯಾಪಕರು ವೈಮನಸ್ಸುಗಳನ್ನು ತೊರೆದು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು. ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಬದಿಗಿಟ್ಟು ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸವಹಿಬೇಕು ಎಂದ ಶಾಸಕರು, ಶೈಕ್ಷಣಿಕ ವರ್ಷದಲ್ಲಿ ಪ್ರತಿ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಒಬ್ಬರಿಗೆ 25 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು ಎಂದರು.
ವಿದ್ಯಾರ್ಥಿಗಳಿಂದ ಸರ್ಕಾರಿ ಬಸ್ ಸೌಕರ್ಯ ಸಮಸ್ಯೆ, ಖಾಯಂ ಉಪನ್ಯಾಸಕರು ಇಲ್ಲದಿರುವುದು ಹಾಗೂ ಎರಡು ವರ್ಷಗಳಿಂದ ವಿದ್ಯಾರ್ಥಿ ವೇತನ ಬಾರದಿರುವ ಸಮಸ್ಯೆಗಳನ್ನು ಆಲಿಸಿದರು.
ಈಗಾಗಲೇ ಕೆ.ಎಸ್.ಆರ್.ಟಿ.ಸಿ ಡಿಪೋ ನಿರ್ಮಾಣಕ್ಕೆ ಮರೇನಹಳ್ಳಿ ರಸ್ತೆಯಲ್ಲಿ 4 ಎಕರೆ ಜಮೀನು ನಿಗದಿಯಾಗಿದ್ದು, ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು. ನಂತರ 30 ಸರ್ಕಾರಿ ಬಸ್ಗಳನ್ನು ವಿವಿಧ ಮಾರ್ಗಗಳಲ್ಲಿ ಹಳ್ಳಿಗಳಿಗೆ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗು ವುದು ಎಂದರು.
ಪಟ್ಟಣ ಪಂಚಾಯಿತಿಯಿಂದ 25 ಲಕ್ಷ ವೆಚ್ಚದಲ್ಲಿ ನೀರಿನ ಸಂಪ್ ನಿರ್ಮಿಸಿ ಕಾಲೇಜಿಗೆ ನೀರು ಪೂರೈಕೆ ಮಾಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
15 ದಿನಗಳಲ್ಲಿ ತುಪ್ಪದಹಳ್ಳಿ ಕೆರೆಗೆ ನೀರು : ತುಪ್ಪದಹಳ್ಳಿ ಕೆರೆಗೆ 15 ದಿನಗಳಲ್ಲಿ ಪ್ರಾಯೋ ಗಿಕವಾಗಿ ನೀರು ಹರಿಸಲಾಗುವುದು. ನೀರಿನ ಮೂಲಗಳಿಲ್ಲದ ಜಗಳೂರಿಗೆ ಹೆಣ್ಣು ಮಕ್ಕಳನ್ನು ವಿವಾಹ ಮಾಡಿಕೊಡಲು ಹಿಂಜರಿಯುತ್ತಿದ್ದರು. ಆದರೆ 57 ಕೆರೆತುಂಬಿಸುವ ಯೋಜನೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳ ಸಾಕಾರಗೊಂಡಿದ್ದರಿಂದ ಮುಂದಿನ ದಿನಗಳಲ್ಲಿ ಬರದನಾಡು ಹಸಿರು ನಾಡಾಗಿ ಸಮೃದ್ಧಿ ಜೀವನ ಸಾಗಿಸುವ ಕಾಲ ಸನ್ನಿಹಿತವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಬಿಎಸ್ಸಿ ವಿಭಾಗದಲ್ಲಿ 8 ನೇ ರಾಂಕ್ ಪಡೆದ ಎಂ.ಎಸ್. ಷಹನಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಸಕ ರಾಮಚಂದ್ರ ಅವರು ವೈಯಕ್ತಿಕವಾಗಿ 20 ಸಾವಿರ ನಗದು ವಿತರಿಸಿ ಶುಭ ಹಾರೈಸಿದರು.
ರಾಷ್ಟ್ರೀಯ ಕ್ರೀಡಾಪಟು ಎ.ಎಚ್. ಸಾಗರ್ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ಸಿದ್ದಪ್ಪ, ಸದಸ್ಯರಾದ ನವೀನ್, ದೇವರಾಜ್, ಪಾಪಲಿಂಗಪ್ಪ, ವಿಎಸ್ಎಸ್ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು, ಪ್ರಾಂಶುಪಾಲ ಬಿ.ಕೆ.ಬಸವರಾಜ್, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ವಕೀಲ ಹನುಮಂತಪ್ಪ, ಪಿ.ಎಸ್.ಅರವಿಂದ್, ಫಾತಿಮಾ, ಸಹಾಯಕ ಪ್ರಾಧ್ಯಾಪ ಕರುಗಳಾದ ಲಾಲ್ ಸಿಂಗ್ ನಾಯ್ಕ, ಸಲ್ಮಾ ತಾಜ್, ಅಮರೇಶ್, ಪುಷ್ಪಲತಾ, ಮಲ್ಲಿ ಕಾರ್ಜುನ ಕಪ್ಪಿ, ವೈ. ವೆಂಕಟೇಶ್, ಗುತ್ತಿಗೆದಾರ ಪಿ.ಎಂ.ಮೋಹನ್ ಸೇರಿದಂತೆ ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.