ರಾಣೇಬೆನ್ನೂರು, ಮಾ. 2- ಯುಕ್ರೇನ್ನಲ್ಲಿ ಸಿಲುಕಿರುವ ಭಾರತದ ಕೊನೆಯ ಪ್ರಜೆಯನ್ನು ಕರೆ ತರುವವರೆಗೂ ಸರ್ಕಾರ ಪ್ರಯತ್ನ ನಡೆಸುತ್ತಿರುತ್ತದೆ. ಈ ಕಾರ್ಯದಲ್ಲಿ ನಾಲ್ವರು ಸಚಿವರು ಹಾಗೂ ಅಧಿಕಾರಿಗಳ ತಂಡ ಸಂಪೂರ್ಣ ತೊಡಗಿಕೊಂಡಿದೆ. ಪ್ರತಿ ನಿಮಿಷ ಸಹ ಮಹತ್ವದಿಂದ ಕೂಡಿದ್ದು, ಕಟ್ಟೆಚ್ಚರದಿಂದ ಕಾರ್ಯ ನಡೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.
ಅವರು ನಿನ್ನೆ ರಷ್ಯಾ-ಯುಕ್ರೇನ್ ಸಂಘರ್ಷದಲ್ಲಿ ಬಲಿಯಾದ ವೈದ್ಯಕೀಯ ವಿದ್ಯಾರ್ಥಿ ಚಳಗೇರಿಯ ನವೀನ್ ಮನೆಗೆ ಆಗಮಿಸಿ, ಪಾಲಕರಿಗೆ ಸಾಂತ್ವನ ಹೇಳಿ ಮಾಧ್ಯಮಗೋಷ್ಠಿ ನಡೆಸಿದರು.
ಕುಟುಂಬದವರಿಗೆ ಕಿರಿಕಿರಿ
ಬಡತನದಲ್ಲಿಯೇ ಬೆಳೆದು ಬದುಕು ಕಟ್ಟಿಕೊಳ್ಳಲು ಪ್ರಯತ್ನ ನಡೆಸಿದ ಮಗ ನವೀನ್ ನನ್ನು ಕಳೆದ ಕೊಂಡ ತಂದೆ ಶೇಖರಗೌಡ, ತಾಯಿ ವಿಜಯಲಕ್ಷ್ಮಿ, ಸಹೋದರ ಹರ್ಷ ಇವರುಗಳು ದುಃಖದಲ್ಲಿ ಮುಳುಗಿದ್ದರೂ ಸಹ ಸಾಂತ್ವನ ಹೇಳಲು ಬರುವ ಅಧಿಕಾರಸ್ಥರ, ಅವರ ಜೊತೆಗಾರರ, ಹಿರಿಕಿರಿ ರಾಜಕಾರಿಣಿಗಳ, ಅದನ್ನು ಸೆರೆಹಿಡಿಯಲು ಪ್ರಯತ್ನ ನಡೆಸುವ ವಿವಿಧ ಮಾಧ್ಯಮದವರು ಊಟ ಮಾಡಲು, ಚಹಾ ಸೇವಿಸಲು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಅದು ಅವರಿಗೆ ಕಿರಿಕಿರಿ ಉಂಟು ಮಾಡಿದೆ. ಇದು ಕಡಿಮೆ ಆಗಬೇಕು ಎನ್ನುವ ಕಳಕಳಿ ಜಿಲ್ಲಾಧಿಕಾರಿ ಶೆಟ್ಟೆಣ್ಣನವರಿಂದ ಕೇಳಿಬಂದಿತು.
ಕಳೇಬರ ತರಲು ವಿಮಾನ ಕಳಿಸುವೆ..
ನವೀನ್ ಕಳೇಬರ ಹಾಗೂ ಅಲ್ಲಿರುವ ನನ್ನ ತಾಲ್ಲೂಕಿನ ಆರು ವಿದ್ಯಾರ್ಥಿಗಳನ್ನು ಕರೆತರಲು ಕೇಂದ್ರ ಸರ್ಕಾರ ಅನುಮತಿ ನೀಡಿದರೆ, ನನ್ನದೇ ವಿಮಾನ ತೆಗೆದುಕೊಂಡು ಹೋಗುವೆ. ಮುಖ್ಯಮಂತ್ರಿಗಳು ಅನುಮತಿ ಕೊಡಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕೋಳಿವಾಡ ಮನವಿ ಮಾಡಿದರು.
ಬಡವರ ಮನೆಯಲ್ಲಿ ಪ್ರತಿಭೆಗಳು ಹುಟ್ಟಬಾರದು…
ಭಾರತದಲ್ಲಿ ಅದು ನಮ್ಮಂತಹ ಬಡವರ ಮನೆಯಲ್ಲಿ ಪ್ರತಿಭೆಗಳು ಹುಟ್ಟಬಾರದು. ಇಲ್ಲಿ ಕೇವಲ ಹಣಕ್ಕೆ ಬೆಲೆ ಇದೆ. ಪ್ರತಿಭಾವಂತರಿಗೆ ಬೆಲೆ ಇಲ್ಲ. ನಮ್ಮ ಮಗನಿಗೆ ಕೋಟಿಗಟ್ಟಲೆ ಹಣಕೊಟ್ಟು ಓದಿಸಲು ಸಾಧ್ಯವಾಗದಿದ್ದರಿಂದ ಅವನನ್ನು ಉಕ್ರೇನ್ಗೆ ಕಳಿಸಿದೆವು ಎಂದು ನವೀನ್ ತಾಯಿ ವಿಜಯಲಕ್ಷ್ಮಿ, ಸಚಿವ ಜೋಷಿ ಎದುರು ಕಣ್ಣೀರು ಸುರಿಸಿದರು.
ಭಾರತದಲ್ಲಿ ಬಡವರು ಓದಲು, ಬದುಕಲು ಬಿಡಿ. ಮಂತ್ರಿ ಮಹೋದಯರ ವಿದ್ಯಾಸಂಸ್ಥೆಗಳಿವೆ. ಅವುಗಳಲ್ಲಿ ಹಣವೇ ಪ್ರಧಾನವಾಗಿದೆ. ನೀವು ಪ್ರಧಾನಿಗಳ ಪಕ್ಕ ದಲ್ಲಿಯೇ ಇರುತ್ತೀರಿ. ಈ ವ್ಯವಸ್ಥೆ ಬದಲಾಯಿಸಿ ಎಂದು ಇನ್ನೊಬ್ಬ ವಿದ್ಯಾರ್ಥಿಯ ತಂದೆ ಸಚಿವರಿಗೆ ಹೇಳಿದರು.
ಹಾರ್ಕಿವ್ ಬಂಕರ್ನಲ್ಲಿರುವ ವಿದ್ಯಾರ್ಥಿಗಳು ಹಾಗೂ ಇತರರು ರೈಲ್ವೆ ಮೂಲಕ ಗಡಿ ಪ್ರದೇಶಕ್ಕೆ ಬರಲು ವ್ಯವಸ್ಥೆ ಆಗಿದೆ. 20 ತಾಸುಗಳ ಪ್ರಯಾಣದ ನಂತರ ವಿಮಾನದಲ್ಲಿ ಭಾರತಕ್ಕೆ ಬರುವ ಬಗ್ಗೆ ಮಾಹಿತಿ ಇದೆ. ಇನ್ಮುಂದೆ ಭಾರತೀಯನ ಜೀವಕ್ಕೂ ತೊಂದರೆ ಆಗದಂತೆ ಸರ್ಕಾರ ಎಚ್ಚರ ವಹಿಸುತ್ತದೆ ಎಂದು ಸಚಿವ ಜೋಷಿ ಹೇಳಿದರು.
ಪಾಲಕರ ಬೇಡಿಕೆಯಂತೆ ಅವರ ಮಗನ ಕಳೇಬರ ಹಾಗೂ ಇತರೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಹಾಗೂ ಅವರ ವಿದ್ಯಾರ್ಜನೆಯಲ್ಲಿ ತೊಡಕು ಬಾರದಂತೆ, ನವೀನ್ ಸಹೋದರ ಹರ್ಷನಿಗೆ ಯೋಗ್ಯ ನೌಕರಿ ಕೊಡಿಸುವ ಮುಂತಾದವುಗಳ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಪ್ರಧಾನಿಗಳ ಜೊತೆ ಚರ್ಚಿಸು ವುದಾಗಿ ಸಚಿವ ಜೋಷಿ ವಿವರಿಸಿದರು.
ಶಾಸಕರಾದ ಅರುಣಕುಮಾರ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಸಚಿವ ಕಾಂಗ್ರೆಸ್ನ ಬಸವರಾಜ ಶಿವಣ್ಣನವರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕೋಳಿವಾಡ, ಬಿಜೆಪಿ, ಕಾಂಗ್ರೆಸ್ನ ಜಿಲ್ಲೆಯ ವಿವಿಧ ಪದಾಧಿಕಾರಿಗಳು, ಜಿಲ್ಲಾಧಿಕಾರಿ ಶೆಟ್ಟೆಣ್ಣನವರ ಮತ್ತಿತರರು ನವೀನ್ ಪಾಲಕರಿಗೆ ಸಾಂತ್ವನ ಹೇಳಿದರು.