ಸೀತಮ್ಮ ಕಾಲೇಜಿನ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್
ದಾವಣಗೆರೆ, ಮಾ.1- ಪೋಕ್ಸೋ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳು ಸಂಖ್ಯೆ ಹೆಚ್ಚಾಗುತ್ತಿವೆ. ಶಾಲಾ ಮಟ್ಟದಲ್ಲಿ ವಿದ್ಯಾರ್ಥಿ ಗಳಿಗೆ ಕಾಯ್ದೆಯ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಹೇಳಿದರು.
ನಗರದ ರಾಜನಹಳ್ಳಿ ಸೀತಮ್ಮ ಬಾಲಕಿ ಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ ಹೆಣ್ಣು ಮಕ್ಕಳಿಗೆ ವಿವಿಧ ಇಲಾಖೆಗಳ ಹಾಗೂ ಸರ್ಕಾರದಿಂದ ದೊರೆಯಬಹುದಾದ ಕಾನೂನಾತ್ಮಕ ಅವಕಾಶಗಳ ಬಗ್ಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ತಾವು ಸರ್ಕಾರಿ ಶಾಲೆ ಯಲ್ಲಿ ಓದುತ್ತಿದ್ದೇನೆ ಎಂಬ ಕೀಳರಿಮೆ ಬರಬಾ ರದು. ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಅನೇಕ ಸವಲತ್ತುಗಳು ಖಾಸಗಿ ವಲಯದಲ್ಲಿ ದೊರೆಯುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಸರ್ಕಾರ ತಮಗೆ ನೀಡುವ ಅನೇಕ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಣ ಹಾಗೂ ಹಕ್ಕುಗಳಿಗೆ ಸಂಬಂಧಿಸಿ ದಂತೆ ಯಾವುದೇ ತೊಂದರೆಯಾದಲ್ಲಿ ಕಾನೂನು ಸೇವಾ ಪ್ರಾಧಿಕಾರ ಹಾಗೂ ಸಖಿ ಒನ್ ಸ್ಟಾಪ್ ಸೆಂಟರ್ ನಿಂದ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಸಲಹೆ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಿ ವೈ.ಎಸ್ ಶಿಲ್ಪಾ ಮಾತನಾಡಿ, ಹಲ ವಾರು ಮಕ್ಕಳು ಮೊಬೈಲ್ನಲ್ಲಿ ಬರುವಂತಹ ಆಕರ್ಷಣೀಯ ಜಾಹೀರಾತುಗಳಿಂದ ತಪ್ಪು ನಿರ್ಧಾರ ತೆಗೆದುಕೊಂಡು ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ, ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ನಿಮ್ಮ ಸ್ನೇಹಿತರು, ಅಕ್ಕಪಕ್ಕದಲ್ಲಿ ಬಾಲ್ಯವಿವಾಹ ನಡೆಯುತ್ತಿದ್ದರೆ ತಕ್ಷಣ ಡಿಸಿಪಿ ಅವರಿಗೆ ಅಥವಾ ಮಕ್ಕಳ ಸಹಾಯವಾಣಿಗೆ ಕರೆಮಾಡಿ ತಿಳಿಸಿ ರಕ್ಷಣೆ ಮಾಡಿ ಎಂದು ಮಕ್ಕಳಲ್ಲಿ ಅರಿವು ಮೂಡಿಸಿದರು.
ಹಿರಿಯ ವಕೀಲ ಎಲ್.ಹೆಚ್ ಅರುಣ್ಕುಮಾರ್ ವಿಶೇಷ ಉಪನ್ಯಾಸ ನೀಡುತ್ತಾ, ಇಂದು ಪ್ರಪಂಚದಲ್ಲೇ ನಮ್ಮ ದೇಶದ ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ಮುಂದೆ ಬರುತ್ತಿದ್ದಾರೆ. ಸಂವಿಧಾನದ ಆಶಯದಲ್ಲಿಯೂ ಸಹ ಮಹಿಳೆಯರ ಶಿಕ್ಷಣಕ್ಕೆ ಹಾಗೂ ಪ್ರಗತಿಗೆ ಅನೇಕ ಅನುಚ್ಛೇದಗಳನ್ನು ಸೇರಿಸಿದ್ದಾರೆ. ಹೆಣ್ಣುಮಕ್ಕಳನ್ನು ಸಮಾಜದಲ್ಲಿ ಮುಂದೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಇವುಗಳೆಲ್ಲವೂ ಸಂವಿಧಾನದಿಂದ ಬಂದಿವೆ ಎಂದು ತಿಳಿಸಿದರು.
ಮೊಬೈಲ್ಗಳನ್ನು ಬರೀ ಪಠ್ಯಕ್ಕೆ ಹಾಗೂ ಕಲಿಕೆಗೆ ಉಪಯೋಗವಾಗುವಂತಹ ಮಾಹಿತಿಗಾಗಿ ಮಾತ್ರ ಬಳಸಿಕೊಳ್ಳಬೇಕು. ಸರ್ಕಾರಿ ಶಾಲೆಯಲ್ಲಿ ಓದಿದವರು ದೇಶವನ್ನೇ ಆಳಿದ್ದಾರೆ, ದೊಡ್ಡ ವ್ಯಕ್ತಿಗಳಾಗಿದ್ದಾರೆ ಎಂದು ಹೇಳಿದರು.
ಸಖಿ ಒನ್ ಸೆಂಟರ್ನ ಉಪಯೋಗಗಳ ಬಗ್ಗೆ ಮಧುರ ತಿಳಿಸಿದರು. ಪೊಲೀಸ್ ಉಪ ಅಧೀಕ್ಷಕ ನರಸಿಂಹ ತಾಮ್ರಧ್ವಜ, ಶಾಲೆಯ ಉಪ ಪ್ರಾಚಾರ್ಯ ಎ.ಆರ್ ಮಂಜಪ್ಪ ಮಾತನಾಡಿದರು. ತ್ರಿವೇಣಿ ಪ್ರಾರ್ಥಿಸಿದರು. ಪ್ರಕಾಶ್ ಬಿ.ಎಸ್ ಸ್ವಾಗತಿಸಿದರು. ಹಾಲೇಶ್ ವಂದಿಸಿದರು.