ದಾವಣಗೆರೆ, ಫೆ.28- ವಿಜ್ಞಾನವು ಸಂಶೋ ಧನೆಯ ಮಾರ್ಗವಾಗಿರುವುದರಿಂದ, ಅದು ಜೀವನ ದಲ್ಲಿ ಯಾವಾಗಲೂ ನವಚೈತನ್ಯ ತುಂಬುತ್ತದೆ ಎಂದು ದಾವಣಗೆರೆ ವಿ.ವಿ. ಆಡಳಿತಾಂಗದ ಕುಲಸ ಚಿವರಾದ ಡಾ. ಗಾಯತ್ರಿ ದೇವರಾಜ್ ಹೇಳಿದರು.
ನಗರದ ಎ.ವಿ.ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ‘ರಾಷ್ಟ್ರೀಯ ವಿಜ್ಞಾನ ದಿನ’ ಮತ್ತು ರಾಂಕ್ ಪಡೆದ ವಿದ್ಯಾರ್ಥಿನಿಯರಿಗೆ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್ಚು ಅಂಕ ಗಳಿಸುವುದನ್ನು ಗುರಿಯಾಗಿಟ್ಟುಕೊಳ್ಳದೆ, ಮೆದುಳನ್ನು ಎಲ್ಲಾ ರೀತಿಯಲ್ಲಿ ಕ್ರಿಯಾಶೀಲವಾಗಿಟ್ಟುಕೊಂಡು, ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮೊಬೈಲನ್ನು ಜ್ಞಾನಾರ್ಜನೆಗೆ ಉಪಯೋಗವಾಗುವಂತೆ ಬಳಸಿಕೊಳ್ಳಬೇಕೇ ಹೊರತು, ಕಾಲಹರಣಕ್ಕೆ ಬಳಸಬಾರದು. ಒಬ್ಬ ವಿದ್ಯಾರ್ಥಿಯನ್ನು ಜವಾಬ್ದಾರಿಯುತ ವ್ಯಕ್ತಿಯನ್ನಾಗಿ ಸಮಾಜಕ್ಕೆ ನೀಡುವಲ್ಲಿ ಪಾಲಕರು, ಗುರುಗಳು, ಸರ್ಕಾರ ಸೇರಿದಂತೆ ಎಲ್ಲರ ಪ್ರಯತ್ನವೂ ಇರುತ್ತದೆ. ಹಾಗೆಯೇ ಓದಿದ ನಂತರ ನೀವೂ ಸಹ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು. ಅದೇ ನಿಮ್ಮ ಜೀವನದ ಗುರಿಯಾಗಿರಬೇಕು ಎಂದು ಹೇಳಿದರು.
ಕೀಳರಿಮೆಯಿಂದ ಹೊರಬನ್ನಿ, ಪ್ರತಿಯೊಬ್ಬ ರಲ್ಲಿಯೂ ಒಂದಲ್ಲಾ ಒಂದು ವಿಶೇಷ ಜ್ಞಾನ ಅಡಗಿ ರುತ್ತದೆ. ಅದನ್ನು ಅವಿರತ ಪ್ರಯತ್ನ, ಯೋಚನೆಗಳು, ಯೋಜನೆಗಳ ಮೂಲಕ ಸಾಕಾರಗೊಳಿಸಿಕೊಳ್ಳಿ. ಜ್ಞಾನಿಗಳಗೆ, ಪ್ರಾಮಾಣಿಕರಿಗೆ ಮತ್ತು ಕಷ್ಟಪಟ್ಟು ಏಳ್ಗೆಯಾಗುವ ವ್ಯಕ್ತಿಗಳಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನಗಳಿವೆ. ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಹೊಸ ವಿಷಯಗಳ ಕುರಿತು ನಿರಂತರ ಸಂಶೋಧನೆ, ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಹೊಸ ಹೊಸ ಕೊಡುಗೆಗಳನ್ನು ವಿಜ್ಞಾನದ ಮೂಲಕ ನೀಡಬೇಕೆಂದು ಎಂದು ಹುರಿದುಂಬಿಸಿದರು.
ಕಿರಿಯರಿಗೆ ಹಿರಿಯರ ಕಿವಿ ಮಾತು
ತಂದೆ ತೀರಿಕೊಂಡಾಗ ಜೀವನ ನಡೆಸುವುದೇ ಕಷ್ಟವಾಯಿತು. ಓದುವುದು ಸಾಧ್ಯವೇ ಇಲ್ಲವೆಂ ದಾಗ ಕಾಲೇಜಿನ ಮೇಡಂ ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು. ಎಷ್ಟು ಖರ್ಚಾದರೂ ನಾನೇ ಓದಿ ಸುತ್ತೇನೆ ಎಂದರು. ಅವರಿಂದಾಗಿಯೇ ಇಂದು ನಾನು ಇಲ್ಲಿ ನಿಂತು ಮಾತನಾಡುವಂತಾಗಿದೆ.
ತಾಯಿಯ ಆರೋಗ್ಯ ಹದಗೆಟ್ಟಾಗ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿರಬೇಕಾಯಿತು. ಆಗ ಕಾಲೇಜಿನ ಮೇಡಂಗೆ ಫೋನ್ ಮಾಡಿ ವಿಷಯ ತಿಳಿಸಿದೆ. ನೀನೇನು ಚಿಂತಿಸಬೇಡ. ತಾಯಿಯ ಆರೋಗ್ಯ ನೋಡಿಕೋ ಎಂದು ಧೈರ್ಯ ತುಂಬಿದರು. ಪರೀಕ್ಷೆ ಬರೆಯುವ ವೇಳೆ ನಿನಗೆ ತಿಳಿದಷ್ಟನ್ನೇ ಬರೆ ಚಿಂತಿಸಬೇಡ ಎಂದು ಧೈರ್ಯ ತುಂಬಿದರು.
2020-21ನೇ ಸಾಲಿನ ದಾವಣಗೆರೆ ವಿವಿಯಿಂದ ರಾಂಕ್ ಪಡೆದ ಕಾಲೇಜಿನ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. ಈ ವೇಳೆ ಅವರು ಕಿರಿಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಮಾತುಗಳಿವು.
ವಿದ್ಯಾರ್ಥಿನಿಯರ ಮಾತುಗಳು ಭಾವುಕತೆಯಿಂದ ತುಂಬಿದ್ದರೆ, ಕಿರಿಯರ ಕಣ್ಣಂಚಿನಲ್ಲೂ ನೀರಿತ್ತು. ಸಾಧನೆಯ ಹಿಂದಿನ ಗುರುಗಳನ್ನು ಸ್ಮರಿಸಿದ ವಿದ್ಯಾರ್ಥಿನಿಯರು, ತಮ್ಮ ಕಷ್ಟಗಳನ್ನು ಹೇಳಿಕೊಂಡು, ಕಷ್ಟಪಟ್ಟು ಓದುವಂತೆ ಕಿರಿಯರಿಗೆ ಕಿವಿ ಮಾತು ಹೇಳಿದರು.
ಪ್ರಾಂಶುಪಾಲ ಡಾ. ಬಿ.ಪಿ ಕುಮಾರ್ ಅವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ದೇಶದಲ್ಲಿನ ಬಂಜರು ಭೂಮಿಯನ್ನು ಫಲವತ್ತತೆಗೊಳಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕು. ಔಷಧೀಯ ಸಸ್ಯಗಳನ್ನು ಉಳಿಸಿಕೊಳ್ಳುವ ಜೊತೆಗೆ ಅದರ ಬಗ್ಗೆ ಜನತೆಗೆ ಅರಿವು ಮೂಡಿಸಬೇಕು. ತಂತ್ರಜ್ಞಾನ ಬಳಸಿಕೊಂಡು ಮಲಿನಗೊಂಡಿರುವ 250ಕ್ಕೂ ಹೆಚ್ಚು ನದಿಗಳನ್ನು ಶುದ್ದೀಕರಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮನಃಶ್ಯಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಪಾಲಾಕ್ಷ, ಆಂಗ್ಲ ವಿಭಾಗದ ಮುಖ್ಯಸ್ಥರಾದ ಡಾ. ಅನುರಾಧ ಪಿ.ಎಂ., ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ನೀಲಾಂಬಿಕ ಜಿ.ಸಿ., ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಪ್ರಭಾವತಿ ಎಸ್. ಹೊರಡಿ, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರುದ್ರೇಶ್ ಬಿ.ಜೆ, ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ದಿವ್ಯಶ್ರೀ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಸ್ನೇಹ ಎಸ್, ವಿಜ್ಞಾನ ನಿಕಾಯದ ಕಾರ್ಯದರ್ಶಿ ರಕ್ಷಿತಾ ಬಿ.ಕೆ ಭಾಗವಹಿಸಿದ್ದರು. ನವ್ಯ ರಾಯ್ಕರ್ ಸಂಗಡಿ ಗರು ಪ್ರಾರ್ಥಿಸಿದರು, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶಿವಕುಮಾರ್ ಆರ್.ಆರ್ ಸ್ವಾಗತಿಸಿದರು. ಅಮೂಲ್ಯ ಎಸ್.ಎಮ್, ಸುಮಿಯ ಖಾನಂ ನಿರೂಪಿಸಿದರು. ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಗುರುರಾಜ್ ವಂದಿಸಿದರು.