ಕರವೇ ಸಾಮಾಜಿಕ ಜಾಲತಾಣ ಕಾರ್ಯಾಗಾರದಲ್ಲಿ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಕರೆ
ದಾವಣಗೆರೆ, ಫೆ. 28 – ಕನ್ನಡ ಸುಲಿದ ಬಾಳೆ ಹಣ್ಣಿನ ರೀತಿ ಸರಳ ಹಾಗೂ ಸುಂದರ ಭಾಷೆಯಾಗಿದ್ದರೂ ಕನ್ನಡಿಗರ ನಿರುತ್ಸಾಹದಿಂದ ಭಾಷೆಗೆ ತೊಡಕಾಗುತ್ತಿದೆ ಎಂದಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ, ಕನ್ನಡವನ್ನು ಬೆಂಗಳೂರಿನಂತಹ ನಗರಗಳಲ್ಲಿ ಉಳಿಸುವಲ್ಲಿ ಕನ್ನಡಪರ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ ಎಂದಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ಗುರುಭವನದಲ್ಲಿ ನಿನ್ನೆ ಆಯೋಜಿಸಲಾಗಿದ್ದ ಸಾಮಾಜಿಕ ಜಾಲತಾಣ ಕಾರ್ಯಾಗಾರ ಹಾಗೂ ನಾಯಕತ್ವ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬೆಂಗಳೂರಿನಲ್ಲಿ ತೆಲುಗು ಹಾಗೂ ತಮಿಳು ಭಾಷೆ ಹೆಚ್ಚಾಗುತ್ತಿದೆ. ಕನ್ನಡಿಗರಲ್ಲಿ ಭಾಷೆಯ ಕಡೆಗಣನೆ ಇಲ್ಲವಾದರೂ, ನಿರುತ್ಸಾಹ ಇದೆ. ಇದನ್ನು ನಿವಾರಿಸಿ ಎದೆಯಲ್ಲಿ ಕನ್ನಡದ ಭಾಷಾಭಿಮಾನ ಪ್ರಜ್ವಲಿಸಬೇಕು. ಕನ್ನಡ ಧೀಮಂತ ಶಕ್ತಿ ಪಡೆಯಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಕನ್ನಡದ ಖಡ್ಗವನ್ನು ಕನ್ನಡಪರ ಸಂಘಟನೆಗಳಿಗೆ ನೀಡುತ್ತಿದೆ. ಈ ಖಡ್ಗವನ್ನು ಪಳಗಿಸಿ ಕನ್ನಡಿಗರಿಗೆ ಒಳ್ಳೆಯದಾಗುವ ರೀತಿ ಬಳಸಬೇಕು. ಸಿಂಹ ಗರ್ಜನೆ ಮಾಡಬೇಕು ಎಂದವರು ಕರೆ ನೀಡಿದರು.
ತಮಿಳುನಾಡಿನಲ್ಲಿ ಊರಿಗೊಂದು ತಮಿಳು ಧ್ವಜ ಇದೆ. ಕರ್ನಾಟಕದಲ್ಲೂ ಸಹ, ಪ್ರತಿ ಗ್ರಾಮ ಹಾಗೂ ಪ್ರತಿ ವಾರ್ಡಿನಲ್ಲಿ ಕನ್ನಡ ಧ್ವಜ ಹಾರಬೇಕಿದೆ. ನವೆಂಬರ್ ಒಳಗೆ ಎಲ್ಲೆಡೆ ಕನ್ನಡ ಧ್ವಜಸ್ತಂಭಗಳನ್ನು ಸ್ಥಾಪಿಸಬೇಕಿದೆ ಎಂದವರು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರವೇ ಜಿಲ್ಲಾ ಅಧ್ಯಕ್ಷ ಎಂ.ಎಸ್. ರಾಮೇಗೌಡ, ಸಂಘಟನೆಯಲ್ಲಿ ಈಗ 70 ಲಕ್ಷ ಸದಸ್ಯರಿದ್ದಾರೆ. ಯುವಕರನ್ನು ಸಂಘಟನೆಗೆ ಸೆಳೆಯಲು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಯುವ ಘಟಕಗಳನ್ನು ಆರಂಭಿಸಲಾಗುತ್ತಿದೆ. ಎಲ್ಲಾ ಜಿಲ್ಲೆಗಳಲ್ಲಿ ಜಾಲತಾಣಗಳ ತರಬೇತಿ ನೀಡಲಾಗುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕ.ರ.ವೇ. ಜಿಲ್ಲಾ ಗೌರವಾಧ್ಯಕ್ಷ ವಾಸುದೇವ ರಾಯ್ಕರ್ ವಹಿಸಿದ್ದರು.
ವೇದಿಕೆಯ ಮೇಲೆ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಗುಂಡಣ್ಣನವರ್, ಸಾಮಾಜಿಕ ಜಾಲತಾಣದ ಮುಖಂಡ ಸಜಿತ್, ರಾಜ್ಯ ಸಂಘಟನಾ ಕಾರ್ಯದರ್ಶಿ ಸಚ್ಚಿನ್ ಗಾಣಿಗೇರ್, ಶಿವಮೊಗ್ಗ ಕರವೇ ಜಿಲ್ಲಾಧ್ಯಕ್ಷ ಪ್ರಶಾಂತ್, ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಬಸಮ್ಮ ಉಪಸ್ಥಿತರಿದ್ದರು.