ಶಿವರಾತ್ರಿಗೆ ಸಂಭ್ರಮದ ಸಿದ್ಧತೆ

ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಹಣ್ಣುಗಳ ವ್ಯಾಪಾರ ಜೋರು

ದಾವಣಗೆರೆ, ಫೆ.28- ಶಿವರಾತ್ರಿ ಆಚರಣೆಗೆ ದೇವನಗರಿ ಸೇರಿದಂತೆ ಜಿಲ್ಲೆಯಾದ್ಯಂತ ಭರದ ಸಿದ್ಧತೆಗಳು ನಡೆದಿವೆ. ಶಿವನ ಮಂದಿರಗಳಲ್ಲಿ ಅದ್ಧೂರಿ ತಯಾರಿಗಳು ನಡೆದಿದ್ದು, ಮಾರುಕಟ್ಟೆಯಲ್ಲಿ  ಹಣ್ಣು ಹಂಪಲಗಳ ಖರೀದಿಯೂ ಭರದಿಂದ ನಡೆದಿದೆ.

ನಗರದ ಶಿವಾಲಯಗಳು ತಳಿರು ತೋರಣ, ವಿದ್ಯುತ್ ದೀಪಾಲಂಕಾರಗಳಿಂದ ಝಗಮಗಿಸುತ್ತಿವೆ.  ಶುಕ್ರವಾರ ಮುಂಜಾನೆಯಿಂದಲೇ ವಿಶೇಷ ಪೂಜೆ, ಅಭಿಷೇಕ, ಭಜನ, ಪ್ರವಚನ ಕಾರ್ಯಕ್ರಮಗಳು ನಡೆಯಲಿವೆ. ಶಿವರಾತ್ರಿ ಅಂಗವಾಗಿ ನಗರದ ಕೆ.ಆರ್. ಮಾರುಕಟ್ಟೆ, ಗಡಿಯಾರ ಕಂಬ, ಜಯದೇವ ವೃತ್ತ, ಪಿ.ಬಿ. ರಸ್ತೆ, ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನ, ಹೊಂಡದ ವೃತ್ತ ಸೇರಿದಂತೆ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ವಿವಿಧ ಹಣ್ಣುಗಳ ಮತ್ತು ಹೂವಿನ ವ್ಯಾಪಾರ ಭರ್ಜರಿಯಾಗಿದೆ. ರಸ್ತೆಯುದ್ದಕ್ಕೂ ಕಲ್ಲಂಗಡಿ ಹಣ್ಣುಗಳ ರಾಶಿಯೇ ಕಾಣಿಸುತ್ತಿತ್ತು. ಇದರೊಟ್ಟಿಗೆ ಖರ್ಜೂರ, ದ್ರಾಕ್ಷಿ, ಕರಬೂಜ, ಬಾಳೆಹಣ್ಣು ಹೀಗೆ ವಿವಿಧ ಹಣ್ಣುಗಳ ಖರೀದಿ ಜೋರಾಗಿತ್ತು. 

error: Content is protected !!