ಉಕ್ರೇನ್‌ನಲ್ಲಿ ಚಳಗೇರಿಯ ನವೀನ್ ಸಾವು

ಉಕ್ರೇನ್‌ನಲ್ಲಿ ಚಳಗೇರಿಯ ನವೀನ್ ಸಾವು - Janathavaniಬೆಂಗಳೂರು, ಮಾ. 1 – ಉಕ್ರೇನ್‌ನ ಖಾರ್ಕೀವ್‌ನಲ್ಲಿದ್ದ ಹಾವೇರಿ ಜಿಲ್ಲೆಯ ನವೀನ್ ಗ್ಯಾನಗೌಡರ್ ರಷ್ಯಾದ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ರಷ್ಯಾ ನಡೆಸಿದ ದಾಳಿಯಲ್ಲಿ ಸಂಭವಿಸಿದ ಮೊದಲ ಭಾರತೀಯನ ಸಾವು ಇದಾಗಿದೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಅವರು ಕಳೆದ ನಾಲ್ಕು ವರ್ಷದಿಂದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರು. 

ಮೃತ ನವೀನ್ ಅವರ ತಂದೆ ಶೇಖರಗೌಡ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಂತ್ವನ ಹೇಳಿದ್ದಾರೆ.

ನವೀನ್ ಮೃತದೇಹವನ್ನು ಉಕ್ರೇನ್‌ನಿಂದ ತರುವ ಬಗ್ಗೆ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜೊತೆ ಮಾತನಾಡುವುದಾಗಿ ಬೊಮ್ಮಾಯಿ ತಿಳಿಸಿದ್ದಾರೆ.

ಮಗನ ಬಗ್ಗೆ ದುಃಖದಿಂದ ಮಾತನಾಡಿದ ಶೇಖರಗೌಡ ಗ್ಯಾನ ಗೌಡರ್, ಬೆಳಿಗ್ಗೆ ಮಗ ದೂರವಾಣಿ ಕರೆ ಮಾಡಿದ್ದ. ಪ್ರತಿ ದಿನ ಎರಡು ಮೂರು ಬಾರಿ ದೂರವಾಣಿ ಮಾಡಿ ಮಾತನಾಡುತ್ತಿದ್ದ ಎಂದು ಮುಖ್ಯಮಂತ್ರಿಗೆ ಹೇಳಿದ್ದಾರೆ.

ಖಾರ್ಕೀವ್‌ನಲ್ಲಿ ಮಂಗಳವಾರ ಬೆಳಗ್ಗೆ ನಡೆದ ಶೆಲ್ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬರು ಮೃತಪಟ್ಟಿರುವ ಸುದ್ದಿಯನ್ನು ಅತೀವ ದುಃಖದೊಂದಿಗೆ ಖಚಿತಪಡಿಸುತ್ತಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಇದಕ್ಕೂ ಮುಂಚೆ ಹೇಳಿದ್ದರು.

ಸಚಿವಾಲಯವು ಅವರ ಕುಟುಂಬದ ಜತೆ ಸಂಪರ್ಕದಲ್ಲಿದೆ. ಅವರ ಕುಟುಂಬಕ್ಕೆ ನಮ್ಮ ತೀವ್ರ ಸಂತಾಪಗಳು ಎಂದವರು ಹೇಳಿದ್ದರು.

error: Content is protected !!