ಜಗಳೂರು, ಫೆ.28- ವಿಧಾನ ಸಭೆ ಅಧಿವೇಶನದ ಸಮಯದಲ್ಲಿ ಕಾಂಗ್ರೆಸ್ನ ಅಹೋರಾತ್ರಿ ಧರಣಿ ಮತ್ತು ಜನ ವಿರೋಧಿ ನೀತಿಗ ಳಿಂದ ರಾಜ್ಯದ ಅಭಿವೃದ್ಧಿ ಚರ್ಚೆಗಳಿಗೆ ಹಿನ್ನಡೆ ಯಾಗಿದೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಆರೋಪಿಸಿದರು.
ಕಾಂಗ್ರೆಸ್ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ವತಿಯಿಂದ ಇಂದು ಹಮ್ಮಿಕೊಂಡಿದ್ದ ಪ್ರತಿಭಟನೆ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟು ಕಾಂಗ್ರೆಸ್ ಪಕ್ಷ ಹಾಗೂ ಪಕ್ಷದ ನಾಯಕರ ವಿರುದ್ಧ ದಿಕ್ಕಾರ ಕೂಗುತ್ತಾ ಮಹಾತ್ಮ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ತಹಶೀಲ್ದಾರ್ ಕಛೇರಿ ಮುಂಭಾಗ ಜಮಾಯಿಸಿ ನಂತರ ನಡೆದ ಬಹಿರಂಗ ಸಭೆಯಲ್ಲಿ ಶಾಸಕರು ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಕಾಂಗ್ರೆಸ್ ಪಕ್ಷದ ಯಾವುದೇ ಪಾತ್ರ ಶೂನ್ಯ:
ಕನಸಿನ ಯೋಜನೆ ಭದ್ರಾ ಮೇಲ್ದಂಡೆ ಯೋಜನೆ ನನ್ನ ಮತ್ತು ಬಿಜೆಪಿ ಪಕ್ಷದ ಶ್ರಮದ ಕೊಡುಗೆ. ಇದರಲ್ಲಿ ಕಾಂಗ್ರೆಸ್ ಪಾತ್ರ ಶೂನ್ಯ ಎಂದು ಶಾಸಕರು ತಿಳಿಸಿದರು.
ಮಾಜಿ ಶಾಸಕರು ತಮ್ಮ ಅಧಿಕಾರವಧಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಏನೂ ಮಾಡಲಿಲ್ಲ.
ಪುನಃ ನಾನು ಶಾಸಕನಾದ ನಂತರ ಯೋಜನೆ ಜಾರಿಗೆ ಶ್ರಮಿಸಿದ್ದೇನೆ. ಅನವಶ್ಯಕವಾಗಿ ಟೀಕೆ ಮಾಡುವ ಬದಲು ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡಲಿ ಎಂದರು.
ಜಗಳೂರು ಶಾಖಾ ಕಾಲುವೆ ಕಾತ್ರಾಳುನಿಂದ ಸಂಗೇನಹಳ್ಳಿ ಮಾರ್ಗ ಬದಲಾವಣೆಗೆ ಮಾಜಿ ಮುಖ್ಯಮಂತ್ರಿ ಆಡಳಿತ ಅವಧಿಯಲ್ಲಿ ಹರಸಾಹಸ ಪಟ್ಟಿರುವೆ. ಅಲ್ಲದೆ ಹಲವು ವರ್ಷಗಳಿಂದ ವಿವಿಧ ಸಂಘಟನೆಗಳ ಮತ್ತು ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ ಅವರ ನಿರಂತರ ಹೋರಾಟದ ಶ್ರಮವಿದೆ. ಬಿಜೆಪಿ ಆಡಳಿತದ ಸರ್ಕಾರ ಯೋಜನೆ ಸಾಕಾರಗೊಳಿಸಿದೆ. ರಾಷ್ಟ್ರೀಯ ಯೋಜನೆಗೆ ಹೈ ಪವರ್ ಸಮಿತಿ ಅನುಮೋದನೆ ನೀಡಿದೆ.ಮಾರ್ಚ್ 2022 ರ ಮಾಹೆಯೊಳಗೆ ಮುಖ್ಯಮಂತ್ರಿ ಸಮ್ಮುಖದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು. ಪ್ರಯತ್ನದಲ್ಲಿ ಕಾಂಗ್ರೆಸ್ ಕೊಡುಗೆ ಶೂನ್ಯ. ನಿರಂತರ ಹೋರಾಟ ನಡೆಸಿದ ಎಲ್ಲಾ ಸಂಘ-ಸಂಸ್ಥೆಗಳಿಗೆ ಅಭಿನಂದನೆಗಳು ಎಂದು ರಾಮಚಂದ್ರ ಹೇಳಿದರು.
ಕೆರೆ ತುಂಬಿಸುವ ಯೋಜನೆ ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ಪೈಪ್ ಲೈನ್ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಇನ್ನೂ 15 ದಿನಗಳಲ್ಲಿ ಪ್ರಾಯೋಗಿಕವಾಗಿ ತುಪ್ಪದಹಳ್ಳಿ ಕೆರೆಗೆ ನೀರು ಹರಿಸುವೆ. ಇದರ ಸಾಧನೆ ಸಿರಿಗೆರೆ ಶ್ರೀಗಳಿಗೆ ಅರ್ಪಣೆಯಾಗಬೇಕಿದೆ. ನನ್ನದು ಎಂದು ಯಾವತ್ತೂ ಹೇಳಿಕೊಂ ಡಿಲ್ಲ. ಇದರಲ್ಲಿ ನನ್ನ ಸಾಧನೆ ಶೂನ್ಯ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರು ಪದೇ ಪದೇ ಹೇಳುತ್ತಿರುವುದು ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ವಿ.ನಾಗಪ್ಪ, ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್, ಪ.ಪಂ ಅಧ್ಯಕ್ಷ ಸಿದ್ದಪ್ಪ, ಸದಸ್ಯ ಪಾಪಲಿಂಗಪ್ಪ, ದೇವರಾಜ್, ಆರ್. ತಿಪ್ಪೇಸ್ವಾಮಿ, ತಾ.ಪಂ ಮಾಜಿ ಸದಸ್ಯ ಸಿದ್ದೇಶ್, ವಿಎಸ್ಎಸ್ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು, ಮುಖಂಡರಾದ ಕೃಷ್ಣಮೂರ್ತಿ, ಶಿವಕುಮಾರ್ ಸ್ವಾಮಿ, ಕಾಂತರಾಜ್, ಜೆ.ವಿ.ನಾಗರಾಜ್, ಇಂದ್ರೇಶ್,ಬಿ.ರವಿಕುಮಾರ್, ಕಿರಣ್, ಕಾನನಕಟ್ಟೆ ಪ್ರಭು, ಬಾಲೇನಹಳ್ಳಿ ಕೆಂಚನಗೌಡ, ಮಂಜುನಾಥಯ್ಯ, ಮಹಾದೇವಪ್ಪ, ಭರಮನಗೌಡ ಸೇರಿದಂತೆ, ಇತರರು ಭಾಗವಹಿಸಿದ್ದರು.