ಶಿಕ್ಷಣದ ಜೊತೆಗೆ ಆರೋಗ್ಯದ ಕಡೆಗೂ ನಿಗಾವಹಿಸಿ

ಜಗಳಿ : ಮಕ್ಕಳ ಉಚಿತ ಆರೋಗ್ಯ ತಪಾಸಣೆಯಲ್ಲಿ ಡಾ.ಶ್ರೀನಿವಾಸ್ ಸಲಹೆ

ಮಲೇಬೆನ್ನೂರು, ಫೆ.25 – ಮಕ್ಕಳು ಶಿಕ್ಷಣದ ಜೊತೆಗೆ ಆರೋಗ್ಯದ ಕಡೆಗೂ ನಿಗಾವಹಿಸಬೇಕೆಂದು ಆದಿತ್ಯ ಚೈಲ್ಡ್‍ ಕೇರ್ ಸೆಂಟರ್‍ನ ಮಕ್ಕಳ ತಜ್ಞ ಡಾ. ಶ್ರೀನಿವಾಸ್ ಹೇಳಿದರು.

ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಹಮ್ಮಿಕೊಂಡಿದ್ದ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಮತ್ತು ಮಕ್ಕಳ ಆರೋಗ್ಯ ಕುರಿತ ಅರಿವು ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. 

ಮಕ್ಕಳು ಸ್ವಚ್ಫತೆ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಹಣ್ಣು, ಹಾಲು, ತರಕಾರಿ, ಕಾಳುಗಳನ್ನು ಹೆಚ್ಚು ಬಳಸಬೇಕು, ಕ್ರೀಡೆಗಳಲ್ಲೂ ಭಾಗವಹಿಸಿಬೇಕೆಂದ ಅವರು ಟಿ.ವಿ., ಮೊಬೈಲ್‌ನಿಂದ ದೂರವಿರಿ. ದುಶ್ಚಟಗಳ ಕಡೆಗೆ ತಿರುಗಿಯೂ ನೋಡಬೇಡಿ ಎಂದು ಡಾ. ಶ್ರೀನಿವಾಸ್ ಕಿವಿ ಮಾತು ಹೇಳಿದರು.

ಭಾರತೀಯ ವೈದ್ಯಕೀಯ ಸಂಘದ ಮಲೇಬೆನ್ನೂರು ಶಾಖೆಯ ಅಧ್ಯಕ್ಷರೂ ಆದ  ವೈದ್ಯ ಡಾ||  ಬಿ. ಚಂದ್ರಶೇಖರ್ ಮಾತನಾಡಿ, ನಾವು ಓದುವಾಗ ಊಟಕ್ಕೂ ಕಷ್ಟ ಇತ್ತು. ಆದರೆ ಈಗ ಸರ್ಕಾರ ನಿಮಗೆ ಉಚಿತ ಶಿಕ್ಷಣ, ಬಟ್ಟೆ ಜೊತೆಗೆ ಸೈಕಲ್, ಬಿಸಿಯೂಟ, ಹಾಲು, ಮೊಟ್ಟೆ ಎಲ್ಲಾ ನೀಡುತ್ತದೆ. ಜೊತೆಗೆ ನಮ್ಮ ಡಾ. ಶ್ರೀನಿವಾಸ್ ಅವರು ನಿಮ್ಮ ಆರೋಗ್ಯದ ಬಗ್ಗೆ ಆಸಕ್ತಿ ತೋರಿಸಿದ್ದಾರೆಂದು ಮಕ್ಕಳನ್ನು ಹುರಿದುಂಬಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ ಮಾತನಾಡಿ, ಮಕ್ಕಳು ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಯಬೇಕು. ಬೆಳಿಗ್ಗೆ ಎದ್ದ ತಕ್ಷಣ ತಂದೆ-ತಾಯಿಗಳ ಕಾಲಿಗೆ ನಮಸ್ಕರಿಸಿ, ಹಿರಿಯರನ್ನು ಗೌರವಿಸಿ ಎಂದರು.

ಹಿರಿಯ ವೈದ್ಯ ಡಾ. ಟಿ. ಬಸವರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ ಮಾತನಾಡಿದರು. ಗ್ರಾಮದ ವೈದ್ಯ ಡಾ.ಎನ್. ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕ ಕರಿಬಸಪ್ಪ ಅಧ್ಯಕ್ಷತೆ ವಹಿಸಿದ್ದರು. 

ಎಸ್‍ಡಿಎಂಸಿ ಸದಸ್ಯ ಗಂಗಾಧರಾಚಾರಿ, ಧರ್ಮಸ್ಥಳ ಯೋಜನೆಯ ಮಲೇಬೆನ್ನೂರು ಮೇಲ್ವಿಚಾರಕ ಸಂತೋಷ್, `ಜನತಾವಾಣಿ’ ವರದಿಗಾರ ಜಿಗಳಿ ಪ್ರಕಾಶ್, ಶಿಕ್ಷಕರಾದ ಮಲ್ಲಿಕಾರ್ಜುನ್, ಲಿಂಗರಾಜ್, ಲೋಕೇಶ್, ದೀಪಾ, ವೀಣಾ, ಜಯಶ್ರೀ ಭಾಗವಹಿಸಿದ್ದರು. ದೈಹಿಕ ಶಿಕ್ಷಕ ಶ್ರೀನಿವಾಸ್ ರೆಡ್ಡಿ ನಿರೂಪಿಸಿದರು. ಶಿಕ್ಷಕ ನಾಗೇಶ್ ಸ್ವಾಗತಿಸಿದರು. ಶಿಕ್ಷಕಿ ಕುಸುಮಾ ವಂದಿಸಿದರು.  

error: Content is protected !!