ದೂರದೃಷ್ಟಿ, ಸಮಗ್ರತೆಯ ನೋಟದ ಕೊರತೆಯಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ

ಕುಣೆಬೆಳಕೆರೆ ದೇವಸ್ಥಾನದ ಕಾರ್ಯಕ್ರಮದಲ್ಲಿ ರಂಭಾಪುರಿ ಜಗದ್ಗುರುಗಳ ಬೇಸರ

ಮಲೇಬೆನ್ನೂರು, ಫೆ.25- ಜನರ ಮನಸ್ಸುಗಳು ಮೊದಲಿನಂತಿಲ್ಲ. ದೂರದೃಷ್ಟಿ, ಸಮಗ್ರತೆಯ ನೋಟದ ಕೊರತೆಯಿಂದಾಗಿ ಪ್ರಸ್ತುತ ನಾವು ಬಹಳ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ. ಶ್ರೀ ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಕುಣೆಬೆಳಕೆರೆ ಗ್ರಾಮದಲ್ಲಿ ಇಂದು ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಮಹಾದ್ವಾರ ಉದ್ಘಾಟನೆ ಮತ್ತು ಗೋಪುರದ ಕಳಸಾರೋಹಣ ನೆರವೇರಿಸಿ, ನಂತರ ಗ್ರಾಮಸ್ಥರು ಹಮ್ಮಿಕೊಂಡಿದ್ದ ಜನ ಜಾಗೃತಿ ಧಾರ್ಮಿಕ ಸಮಾರಂಭದ ದಿವ್ಯ ನೇತೃತ್ವ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಇತ್ತೀಚಿನ ದಿನಗಳಲ್ಲಿ ರಾಜಕೀಯ ರಂಗದ ಜೊತೆಗೆ ಧಾರ್ಮಿಕ ರಂಗವೂ ಕುಲಷಿತಗೊಂಡಿದೆ ಎಂದರೆ ತಪ್ಪಾಗಲಾರದು.

ಯಾವುದೇ ಸಂಘರ್ಷ ಹುಟ್ಟುಹಾಕು ವುದು ಧರ್ಮದ ಕೆಲಸವಲ್ಲ. ಜಾತಿಗಳನ್ನು ಬೆಳೆಸುವುದಕ್ಕಿಂತ ಧರ್ಮದ ಸಾತ್ವಿಕತೆ ಬೆಳೆಸಿದರೆ ನಾವೆಲ್ಲರೂ ಸೇರಿ ಉತ್ತಮ ಸಮಾಜ ಕಟ್ಟುವುದಕ್ಕೆ ಸಾಧ್ಯವಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.

ಬಸವಣ್ಣ ಸೇರಿದಂತೆ ಎಲ್ಲಾ ಧರ್ಮಗಳ ಪಿತಾಮಹರು ಮಾನವ ಧರ್ಮಕ್ಕೆ ಲೇಸನ್ನೇ ಬಯಸಿದ್ದಾರೆ. ಆದರೆ, ಇತ್ತೀಚೆಗೆ ಅತಿಯಾದ ವೈಚಾರಿಕತೆ ಮತ್ತು ಅತಿಯಾದ ಬುದ್ದಿವಂತಿಕೆಯಿಂದಾಗಿ ದೇಶದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ಬಹಳ ಓದಿದವರಿಂದ ದೇಶಕ್ಕೆ ಒಳ್ಳೆಯದಾ ಗುತ್ತದೆ ಎಂದು ನಾವು ಭಾವಿಸಿದ್ದೇವೆ. ಆದರೆ, ಕೆಲವು ಬುದ್ದಿವಂತರು ಕಲುಷಿತ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆಂದು ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ರಂಭಾಪುರಿ ಪೀಠದ ಧರ್ಮ ಪರಂಪರೆಯಲ್ಲಿ ಹಾಲುಮತ ಸಮಾಜಕ್ಕೆ ವಿಶೇಷ ಸಂಬಂಧವಿದೆ. ಇಂತಹ ಸಂಬಂಧಕ್ಕೆ ಕೆಲವರು ಕಲ್ಲು ಹಾಕುವ ಕೆಲಸ ಮಾಡಿದರು. ಆದರೂ ಹಾಲುಮತ ಸಮಾಜದ ಭಕ್ತರು ಮಾತ್ರ ರೇವಣ ಸಿದ್ದೇಶ್ವರರ ಕಾಲದಿಂದಲೂ ನಮ್ಮೊಂದಿಗೆ ಅವಿನಾಭಾವ ಸಂಬಂಧ ಮುಂದುವರೆಸಿ ಕೊಂಡು ಹೋಗುತ್ತಿರುವುದು ನಮಗೆ ಅತೀವ ಸಂತಸ ತಂದಿದೆ.

ಹಾಲುಮತ ಸಮಾಜದವರು ನಮ್ಮ ಉತ್ಸವಗಳಲ್ಲಿ ಡೊಳ್ಳು ಭಾರಿಸಿದರೆ ರಂಭಾಪುರಿ ಪೀಠಕ್ಕೆ ಮಳೆ ಬಂದಂತೆ ಎಂದು ಸ್ವಾಮೀಜಿ ಬಣ್ಣಿಸಿದರು.

ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಧರ್ಮದ ಹಾದಿಯಲ್ಲಿ ನಮ್ಮ ಬದುಕು ಕಟ್ಟಿಕೊಂಡರೆ ನಿತ್ಯವು ಇದೇ ರೀತಿ ಸಂತೋಷ, ನೆಮ್ಮದಿಯಿಂದ ಇರಬಹುದು. ಶ್ರೀಮಂತಿಕೆ, ಸಂಪತ್ತಿನಿಂದ ಸಮಾಧಾನ, ಸಂತೋಷ ಸಿಗುವುದಿಲ್ಲ ಎಂದರು.

ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಮನಸ್ಸುಗಳು ಕೊಳೆಯಾದಾಗ ತೊಳೆದುಕೊಳ್ಳುವುದಕ್ಕೆ ಮತ್ತು ಆರೋಗ್ಯ ಪೂರ್ಣ ಬದುಕು ಕಟ್ಟಿಕೊಳ್ಳಲು ಇಂತಹ ಧಾರ್ಮಿಕ ಸಭೆಗಳು ಔಚಿತ್ಯ ಪೂರ್ಣವಾಗಿವೆ ಎಂದು ಪ್ರತಿಪಾದಿಸಿದರು.

ಸಮಾರಂಭವನ್ನು ದೀಪ ಬೆಳಗಿಸಿ, ಉದ್ಘಾಟಿಸಿದ ಮಾಜಿ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಹಿಂದೂ ಧರ್ಮಕ್ಕೆ ಧಕ್ಕೆ ಉಂಟಾದರೆ ನಾವಿದ್ದೇವೆ ಎಂಬ ರಂಭಾಪುರಿ ಶ್ರೀಗಳ ಹೇಳಿಕೆ ಸ್ವಾಗತಾರ್ಹ. ಧರ್ಮಗಳ ನಡುವೆ ನಡೆಯುತ್ತಿರುವ ಸಂಘರ್ಷಗಳು ನಿಲ್ಲಬೇಕು. ಎಲ್ಲರೂ ಪ್ರೀತಿ – ವಿಶ್ವಾಸದಿಂದ ಹೊಗೋಣ ಎಂದರು.

ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಮಾತನಾಡಿ, ಗ್ರಾಮದ ಎಲ್ಲಾ ದೇವರಗಳೂ ರಂಭಾಪುರಿ ಶ್ರೀಗಳ ಆಶೀರ್ವಾದ ಬೇಡಿವೆ. ಶ್ರೀಗಳ ಪಾದಸ್ಪರ್ಶದಿಂದ ಗ್ರಾಮದಲ್ಲಿ ಮಹಾಬೆಳಕು ಮೂಡಲಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ರಾಮಪ್ಪ ಮಾತನಾಡಿ, ಕುಣೆಬೆಳಕೆರೆ ಗ್ರಾಮದ ಅಭಿವೃದ್ಧಿಗೆ ಇದುವರೆಗೆ ಸುಮಾರು 1 ಕೋಟಿ ರೂ. ಅನುದಾನ ನೀಡಿದ್ದೇನೆಂದರು.  

ಧರ್ಮ, ಧರ್ಮಗಳ ನಡುವೆ ಗಲಾಟೆ ಮಾಡಿಸಿ, ಲಾಭ ಪಡೆಯುವ ಸಂಕುಚಿತ ಬುದ್ದಿ ಬಿಟ್ಟು, ಬದುಕಿರುವಷ್ಟು ದಿನ ಎಲ್ಲರೂ ಪ್ರೀತಿ, ವಿಶ್ವಾಸದಿಂದ ಹೊಗೋಣ ಮತ್ತು ಗ್ರಾಮಗಳಲ್ಲಿ ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡಿ, ನಂತರ ಎಲ್ಲರೂ ಒಂದಾಗಿ ಹೋಗಿ ಎಂದು ರಾಮಪ್ಪ ಮನವಿ ಮಾಡಿದರು. 

ಲಿಂಗದಹಳ್ಳಿ ಹಿರೇಮಠದ
ಶ್ರೀ ವೀರಭದ್ರೇಶ್ವರ ಶಿವಾಚಾರ್ಯ
ಸ್ವಾಮೀಜಿ, ಕಡೇನಂದಿಹಳ್ಳಿಯ
ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಜಿ.ಪಂ. ಮಾಜಿ ಸದಸ್ಯ ಎಂ.ನಾಗೇಂದ್ರಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಕುಣೆಬೆಳಕೆರೆ ದೇವೇಂದ್ರಪ್ಪ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ.ಪರಮೇಶ್ವರಪ್ಪ, ಐರಣಿ ಅಣ್ಣಪ್ಪ, ಬೆಳ್ಳೂಡಿ ಮಂಜುಳಮ್ಮ, ಗ್ರಾ.ಪಂ. ಅಧ್ಯಕ್ಷೆ ಚಂದ್ರಮ್ಮ ಬೀರಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ರೈಸ್ ಮಿಲ್‌ ಮಾಲೀಕರಾದ ಕುಂಬಳೂರು ವಿರೂಪಾಕ್ಷಪ್ಪ, ಯಕ್ಕನಹಳ್ಳಿ ಬಸವರಾಜಪ್ಪ, ದೇವಸ್ಥಾನ ಸಮಿತಿಯ ಅಧ್ಯಕ್ಷ ಭೋವಿ ಅಂಜಿನಪ್ಪ, ಗೌಡ್ರ ಚನ್ನಪ್ಪ, ಸುಂಕದರ ನಿಂಗಪ್ಪ, ಮಡಿವಾಳರ ಮಲ್ಲೇಶಪ್ಪ, ಎಪಿಎಂಸಿ ಮಾಜಿ ಸದಸ್ಯ ರುದ್ರಪ್ಪ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ನಿವೃತ್ತ ಪ್ರಾಧ್ಯಾಪಕ ಬಿ.ಎಂ.ಸದಾಶಿವಯ್ಯ ಸ್ವಾಗತಿಸಿದರು. ಶಿಕ್ಷಕ ವಿ.ಬಿ.ಕೊಟ್ರೇಶಪ್ಪ ನಿರೂಪಿಸಿ, ವಂದಿಸಿದರು.

ಶಿಕ್ಷಕ ಶಿವಾನಂದಪ್ಪ, ಭಾನುವಳ್ಳಿಯ ಪರಮೇಶ್ವರಪ್ಪ, ಮೌನೇಶ್ವರಾಚಾರಿ, ನಂದಿ ಗಾವಿ ಈಶ್ವರಪ್ಪ, ಹಲಗೇರಿ ಗುಡ್ಡರಾಜ ಮತ್ತಿತರರು ಹಾಡುಗಳನ್ನು ಹಾಡಿದರು.

error: Content is protected !!