ಮಲೇಬೆನ್ನೂರು, ಫೆ.24- ಸಕ್ಕರೆ, ಬಿಪಿ ಕಾಯಿಲೆ ಪ್ರಮಾಣ ಮತ್ತು ರಕ್ತದಲ್ಲಿನ ಕಬ್ಬಿಣ ಅಂಶ ಹೆಚ್ಚಾಗುವುದರಿಂದ ಹೃದಯಾಘಾತ ಸಂಭವಿಸಲಿದೆ ಎಂದು ದಾವಣಗೆರೆಯ ಎಸ್.ಎಸ್.ನಾರಾಯಣ ಹಾರ್ಟ್ ಸೆಂಟರ್‌ನ ಹೃದಯ ರೋಗ ತಜ್ಞ ಡಾ. ಗುರುರಾಜ್ ಹೇಳಿದರು.
ಅವರು ಗುರುವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಕ್ಲಬ್ (ಮಲೇಬೆನ್ನೂರು) ಮತ್ತು ಹರಿಹರ ತಾ. ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಎಸ್.ಎಸ್.ನಾರಾಯಣ ಹಾರ್ಟ್ ಸೆಂಟರ್ (ದಾವಣಗೆರೆ) ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಹೃದಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಧೂಮಪಾನದಿಂದ ದೂರವಿದ್ದು, ನಿಯಮಿತವಾಗಿ ಆಹಾರ ಸೇವನೆ ಹಾಗೂ ವ್ಯಾಯಾಮ ಮಾಡುವುದರಿಂದ ಹೃದಯಾಘಾತದಿಂದ ದೂರು ಇರಬಹುದೆಂದ ಡಾ. ಗುರುರಾಜ್ ಅವರು, ಎದೆ ಉರಿ, ನೋವು ಬಂದರೆ ನಿರ್ಲಕ್ಷ್ಯ ಮಾಡದೇ ಸಮೀಪದ ವೈದ್ಯರ ಬಳಿ ತಪಾಸಣೆಗೆ ಒಳಗಾಗಿ ಎಂದು ಮನವಿ ಮಾಡಿದರು.
ಕಣ್ಣು, ಕಿವಿ, ಕೈ-ಕಾಲು ಇಲ್ಲದಿದ್ದರೂ ಮನುಷ್ಯ ಹೇಗೋ ಜೀವನ ನಡೆಸುತ್ತಾನೆ. ಆದರೆ, ಹೃದಯ ಬಡಿತ ನಿಂತು ಹೋದರೆ ಮನುಷ್ಯ ಒಂದು ಕ್ಷಣವೂ ಬದುಕುವುದಿಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಂಡು ಹೃದಯ ಕಾಯಿಲೆ ಬರದಂತೆ ಜಾಗೃತಿ ವಹಿಸಬೇಕೆಂದು ಲಯನ್ಸ್ ಮಾಜಿ ಗೌವರ್ನರ್ ಡಾ. ಟಿ.ಬಸವರಾಜ್ ತಿಳಿಸಿದರು.
ತಾ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಉಮ್ಮಣ್ಣ ಮಾತನಾಡಿ, ಮಲೇಬೆನ್ನೂರು ಲಯನ್ಸ್ ಕ್ಲಬ್ ಈ ಭಾಗದ ಜನರಿಗೆ ಅಗತ್ಯ ಸೌಲಭ್ಯ ಹಾಗೂ ವಿಶೇಷವಾಗಿ ಆರೋಗ್ಯದ ಅರಿವಿನ ಬಗ್ಗೆ ಹೆಚ್ಚಿನ ಒತ್ತು ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ರೋಹಿಣಿ ಜಗದೀಶ್ವರ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಶ್ರೀಮತಿ ರೂಪಾ ಪಾಟೀಲ್, ಖಜಾಂಚಿ ಶ್ರೀಮತಿ ಪಾರ್ವತಮ್ಮ ಮರುಳಸಿದ್ದಪ್ಪ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ಓ.ಜಿ.ರುದ್ರಗೌಡ್ರು, ಎನ್.ಜಿ.ಶಿವಾಜಿ ಪಾಟೀಲ್, ಡಾ. ಹೆಚ್.ಜೆ.ಚಂದ್ರಕಾಂತ್, ಬಿ.ಎಂ.ಜಗದೀಶ್ವರ ಸ್ವಾಮಿ, ಹೆಚ್.ಜಿ.ಚಂದ್ರಶೇಖರ್, ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಬಿ.ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು. ಶಿಬಿರದಲ್ಲಿ 300 ಕ್ಕೂ ಹೆಚ್ಚು ಜನ ಹೃದಯ ತಪಾಸಣೆಗೆ ಒಳಗಾದರು.