ಶಿವಮೊಗ್ಗದಲ್ಲಿ ಭಜರಂಗ ದಳದ ಕಾರ್ಯಕರ್ತನ ಹತ್ಯೆ

ಶಿವಮೊಗ್ಗ, ಫೆ.21- ನಗರದಲ್ಲಿ ನಿನ್ನೆ ರಾತ್ರಿ  ಹರ್ಷ ಎಂಬ ಭಜರಂಗದಳ ಕಾರ್ಯಕರ್ತನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ. 

ಇಲ್ಲಿನ ಭಾರತಿ ಕಾಲೋನಿ ಬಳಿ ಕಾರ್ ನಲ್ಲಿ ಬಂದಿದ್ದ ಯುವಕರ ಗುಂಪು ಹರ್ಷನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಹೊಟ್ಟೆ, ತಲೆ ಭಾಗಕ್ಕೆ ಗಂಭೀರ ಗಾಯವಾಗಿದೆ.  ರಕ್ತದ ಮಡುವಿನಲ್ಲಿ ಬಿದ್ದಿದ್ದ ಹರ್ಷನನ್ನು  ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಈ ವಿಷಯ ತಿಳಿಯುತ್ತಲೇ ನಗರದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಕಲ್ಲು ತೂರಾಟ ನಡೆಸಲಾಗಿದೆ. ತಕ್ಷಣ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. 

ಹಿಂಸಾಚಾರ:  ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಸಂಸ್ಕಾರಕ್ಕೂ ಮುನ್ನ ಮೆರವಣಿಗೆ ನಡೆಸುವಾಗ ಕಲ್ಲುತೂರಾಟ ನಡೆದಿದೆ.

ಶಿವಮೊಗ್ಗ ನಗರದ ಸೀಗೆಹಟ್ಟಿ, ಇಮಾಮ್ ಬಡಾ, ಆಜಾದ್ ನಗರ ಮುಂತಾದ ಕಡೆ  ದ್ವಿಚಕ್ರವಾಹನಗಳು, ಕಾರುಗಳು, ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಅಲ್ಲದೆ ಘಟನೆಯಲ್ಲಿ ಇಬ್ಬರು ಪತ್ರಕರ್ತರು, ನಾಲ್ವರು ಪೊಲೀಸರು ತೀವ್ರ ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದರು.

 ಬೆಳಿಗ್ಗೆ ಮೆಗ್ಗಾನ್ ಶವಾಗಾರದ ಬಳಿ ನೂರಾರು ಸಂಖ್ಯೆಯ ಜನ ಸೇರಿದ್ದು, ಮರಣೋತ್ತರ ಪರೀಕ್ಷೆ ನಂತರ ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸಲಾಯಿತು. ಮೆಗ್ಗಾನ್ ನಿಂದ ಎನ್.ಟಿ. ರಸ್ತೆ ಮೂಲಕ ನೂರಾರು ಸಂಖ್ಯೆಯ ಹಿಂದೂ ಸಂಘಟನೆ ಕಾರ್ಯಕರ್ತರು ಸೀಗೆಹಟ್ಟಿಯಲ್ಲಿರುವ ಹರ್ಷನ ಮನೆಗೆ ತೆರಳುವಾಗ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇಬ್ಬರು ಮಹಿಳೆಯರು, ನಾಲ್ವರು ಯುವಕರು ಸೇರಿದಂತೆ ಹಲವರು ಗಾಯಗೊಂಡು ಹತ್ತಾರು ವಾಹನಗಳು ಹಾನಿಗೊಂಡಿವೆ. ಶಿವಮೊಗ್ಗ ನಗರದ ವಿವಿಧೆಡೆ ಬಿಗುವಿನ ವಾತಾವರಣ ಉಂಟಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ.

ನಿಷೇಧಾಜ್ಞೆ ಜಾರಿ: ನಗರದಲ್ಲಿ ಬಿಗುವಿನ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಫೆ.23ರ ರಾತ್ರಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ, ಆದೇಶ ಹೊರಡಿಸಿದ್ದಾರೆ. ನಿಷೇಧಾಜ್ಞೆ ಜಾರಿ ಅವಧಿಯಲ್ಲಿ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ದ್ವಿಚಕ್ರ ವಾಹನ ಸಂಚಾರ ನಿಷೇಧಿಸಲಾಗಿದೆ. ತುರ್ತು ಸಂದರ್ಭದಲ್ಲಿ ದ್ವಿಚಕ್ರ ವಾಹನಗಳಲ್ಲಿ ಸಂಚಾರ ಮಾಡುವವರು ಪೊಲೀಸ್ ಇಲಾಖೆಯಿಂದ ಪ್ರತ್ಯೇಕ ಪಾಸ್ ಪಡೆಯಬೇಕು.  ಎಲ್ಲಾ ಅಂಗಡಿಗಳ ಬಾಗಿಲನ್ನು ರಾತ್ರಿ 9 ಗಂಟೆಯೊಳಗೆ ಮುಚ್ಚಬೇಕು.  ಚಿತ್ರಮಂದಿರಗಳಲ್ಲಿ ರಾತ್ರಿ 9 ಗಂಟೆ ನಂತರ ಪ್ರದರ್ಶನ ನಿಷೇಧಿಸಲಾಗಿದೆ.  ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಸೋದರಿ ಅಳಲು: ಸೋದರ ಹರ್ಷ ಯಾರಿಗೂ ತೊಂದರೆ ಮಾಡಿದವನಲ್ಲ. ಜೈ ಶ್ರೀರಾಮ ಅಂದುಕೊಂಡೆ ಹೋದ. ಹತ್ಯೆ ಮಾಡಿದವರು ಯಾರು ಅನ್ನುವುದು ನಮಗೆ ಗೊತ್ತಿಲ್ಲ. ನಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸಿ ಎಂದು ಹರ್ಷನ ಸಹೋದರಿ ಅಶ್ವಿನಿ ಅಳಲು ತೋಡಿಕೊಂಡಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹರ್ಷ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.  ಈ ಸಂದರ್ಭ ತಮ್ಮ ಸಹೋದರನ ಸಾವಿಗೆ ನ್ಯಾಯ ಕೊಡಿಸುವಂತೆ ಅಶ್ವಿನಿ ಅವರು ಮನವಿ ಮಾಡಿದರು.

error: Content is protected !!