ಸಚಿವ ಈಶ್ವರಪ್ಪ ರಾಜೀನಾಮೆಗೆ ಜಗಳೂರಿನ ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಆಗ್ರಹ
ಜಗಳೂರು, ಫೆ.21- ದೆಹಲಿ ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಸಚಿವ ಈಶ್ವರಪ್ಪ ಅವರ ದೇಶದ್ರೋಹಿ ಹೇಳಿಕೆ ಖಂಡನೀಯ. ಕೂಡಲೇ ಕ್ಷಮೆ ಯಾಚಿಸಬೇಕು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ನೂರಾರು ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು, ಮಹಾತ್ಮಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿ ಸಚಿವ ಈಶ್ವರಪ್ಪ ಅವರ ವಿರುದ್ಧ ಘೋಷಣೆ ಕೂಗಿ ನಂತರ ತಹಶೀಲ್ದಾರ್ಗೆ ಲಿಖಿತ ಮನವಿ ಸಲ್ಲಿಸಿದರು.
ದೇಶದಲ್ಲಿ ಸಂವಿಧಾನ ಬದ್ಧ ಪ್ರಜಾಪ್ರಭುತ್ವದ ಹಕ್ಕುಗಳಿವೆ. ರಾಷ್ಟ್ರ ಧ್ವಜ ದೇಶದ ಐಕ್ಯತೆ, ಅಖಂಡತೆಯ ಆಸ್ಮಿತೆಯ ಸಂಕೇತ. ಇದನ್ನು ಅರಿಯದ ಬಿಜೆಪಿಯ ಹಿರಿಯ ನಾಯಕ ಈಶ್ವರಪ್ಪ ಅವರು, ಜನತೆಯ ಭಾವನೆಗಳಿಗೆ ದಕ್ಕೆ ಉಂಟು ಮಾಡಿ, ಧರ್ಮ – ಜಾತಿಗಳ ಸಾಮರಸ್ಯಕ್ಕೆ ಮಾರಕ ವಾಗಿರುವ ಹೇಳಿಕೆಗಳನ್ನು ನೀಡಿರುವುದು ಖಂಡನೀಯ ಎಂದು ಹೇಳಿದರು.
ಕೆಪಿಸಿಸಿ ತಾಲ್ಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ, ದೇಶಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಕೊಡುಗೆಯಿಂದ ವೈವಿಧ್ಯತೆಯಲ್ಲಿ ಏಕತೆ ಸಾರಿದೆ. ಬಿಜೆಪಿ ಸಚಿವರುಗಳು ಆರ್ಎಸ್ಎಸ್ನ ಧರ್ಮಾಂಧತೆಯ ಹೇಳಿಕೆಗಳಿಂದ ದೇಶದ ಜನತೆಯ ಮೇಲೆ ಭಾವನಾತ್ಮಕ ಹಲ್ಲೆ ನಡೆಸುತ್ತಿರುವುದು ಸರಿಯಲ್ಲ ಎಂದು ವಿರೋಧಿಸಿದರು.
ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮಾತನಾಡಿ, ಸ್ವಾತಂತ್ರ್ಯದ ನಂತರ ತ್ರಿವರ್ಣ ಧ್ವಜಕ್ಕೆ ಭಾರತೀಯರು ಗೌರವ ಸಲ್ಲಿಸುತ್ತಾ ಬಂದಿದ್ದೇವೆ. ಇದು ಯಾರೊಬ್ಬರ ಆಸ್ತಿಯಲ್ಲ. ಸರ್ವಧರ್ಮಗಳ ಆಸ್ತಿ. ಸಚಿವ ಈಶ್ವರಪ್ಪ ಕೇಸರಿ ಧ್ವಜ ಹಾರಿಸುವ ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ತಾ.ಪಂ. ಮಾಜಿ ಸದಸ್ಯ ಕುಬೇಂದ್ರಪ್ಪ, ಪ.ಪಂ ಸದಸ್ಯ ಶಕೀಲ್ ಅಹಮ್ಮದ್, ಮುಖಂಡರಾದ ಸಿ.ತಿಪ್ಪೇಸ್ವಾಮಿ, ಬಿ.ಲೋಕೇಶ್, ಬಸವಾಪುರ ರವಿಚಂದ್ರ, ರೇವಣ್ಣ, ತಿಮ್ಮಣ್ಣ, ಸಿದ್ದಪ್ಪ, ಅಹಮ್ಮದ್ ಅಲಿ, ಮಹೇಶ್, ಮಹಿಳಾ ಘಟಕದ ಕೆಂಚಮ್ಮ, ತಿಪ್ಪೇಸ್ವಾಮಿ, ಶ್ರೀನಿವಾಸ್, ರಮೇಶ್ ಗೊಲ್ಲರಹಟ್ಟಿ ಮುಂತಾದವರು ಭಾಗವಹಿಸಿದ್ದರು.