ಹರಪನಹಳ್ಳಿ, ಫೆ.20- ವ್ಯಕ್ತಿಯ ಅಧಿಕಾರ, ಸ್ವಪ್ರತಿಷ್ಠೆಯನ್ನು ನಿರ್ಮೂಲನೆ ಮಾಡಿ ಸಮಾಜದಲ್ಲಿ ಜ್ಞಾನಾರ್ಜನೆಯನ್ನು ಬಿತ್ತುವ ದೈವತ್ವವಾಗಿರುವ ಜಾನಪದ ಕಲೆ ಉಳಿಸಿ, ಬೆಳೆಸುವ ಕೆಲಸವನ್ನು ಸರ್ಕಾರಗಳು ಮಾಡಬೇಕಿದೆ ಎಂದು ಅರಸೀಕೆರೆ ಕೋಲ ಶಾಂತೇಶ್ವರ ಮಠದ ಶ್ರೀ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಅರಸಿಕೇರಿ ಗ್ರಾಮದ ಕೋಲ ಶಾಂತೇಶ್ವರ ಪದವಿ ಕಾಲೇಜಿನಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ವತಿಯಿಂದ ನಡೆದ ಪದಾಧಿಕಾರಿಗಳ ಆಯ್ಕೆ ಹಾಗೂ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಸರ್ಕಾರದಿಂದ ಕಲಾವಿದರಿಗೆ ಸೂಕ್ತ ಮಾನ್ಯತೆ, ಪ್ರೋತ್ಸಾಹ ಸಿಗದಿರುವುದರಿಂದ ಕೌಟುಂಬಿಕವಾಗಿ ಬಳುವಳಿಯಾಗಿ ಸಿಗುತ್ತಿದ್ದ ಕಲೆ ನಶಿಸುವಂತಾಗಿದೆ. ಈ ದಿಸೆಯಲ್ಲಿ ಬುಡಬುಡಿಕೆ, ಎಣ್ಣೆ ಜೋಗಿ, ಪರ್ವತ ಮಲ್ಲಯ್ಯ, ಕೋಲೆ ಬಸವದಂತಹ ಕಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ಜನಪದ ಸಾಹಿತ್ಯ ಅವನತಿಗೆ ತುತ್ತಾ ಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಕಲೆಗಾರರು ತಮ್ಮ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸದೇ, ಆಧುನಿಕ ಯುಗದಲ್ಲಿ ಹಣ ಸಂಪಾದನೆಗೆ ಇರುವ ದಾರಿಯನ್ನು ಹುಡುಕುವಂ ತಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ತೊಟ್ಟಿಲಿ ನಲ್ಲಿ ಹಾಕಿ ಲಾಲಿ ಹಾಡುವ ಮೂಲಕ ಜಾನಪದ ಸಾಹಿತ್ಯದ ಬೀಜ ಬಿತ್ತನೆ ಮಾಡಲಾಗುತ್ತಿತ್ತು. ಆದರೆ ಇಂದು ಲಾಲಿ… ಲಾಲಿ… ಅನ್ನುವುದು ಬಿಟ್ಟರೆ ಏನು ಉಳಿದಿಲ್ಲ ಎಂದರು.
ಸಂಗೀತಕ್ಕೆ ವಿಶೇಷ ಶಕ್ತಿ ಇದೆ. ಸಕಲ ನೋವು, ದುಃಖಗಳನ್ನು ಮರೆಸುತ್ತದೆ. ಸಂಗೀತದ ಅರಿವೇ ಇಲ್ಲದಿರುವ ಕೂಸಿಗೂ ನಿದ್ದೆ ತರಿಸುವ ದೈವತ್ವದ ಶಕ್ತಿ ಸಂಗೀತಕ್ಕಿದೆ. ಗ್ರಾಮೀಣ ಜಾನ ಪದ ಕಲೆಗಳು ನಶಿಸುತ್ತಿದ್ದು, ಇಂತಹ ಕಲೆಗಳನ್ನು ಉಳಿಸಿ, ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.
ವಿಜಯನಗರ ಜಿಲ್ಲಾಧ್ಯಕ್ಷ ರಮೇಶ್ ಹಂಚಿನಮನೆ ಮಾತನಾಡಿ, ಕಲಾವಿದರಿಗೆ ಸಿಗುವ ವಿಮೆ, ಮಾಸಾಶನ ಹಾಗೂ ನಾಟಕಗಳಿಗೆ ಹೆಚ್ಚಿನ ಪ್ರೋತ್ಸಾಹ ಧನ ನೀಡುವಂತೆ ಒತ್ತಾಯಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ತಾಲ್ಲೂಕು ಅಧ್ಯಕ್ಷರಾಗಿ ನಿಚ್ಚವ್ವನಹಳ್ಳಿ ಭೀಮಪ್ಪ, ಪ್ರಧಾನ ಕಾರ್ಯದರ್ಶಿ ಪಿ. ಕರಿಬಸಪ್ಪ ಅವರನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಹಗರಿಬೊ ಮ್ಮನಹಳ್ಳಿ ತಾಲ್ಲೂಕು ಅಧ್ಯಕ್ಷ ಉಮಾ ಶಂಕರ್, ಹಡಗಲಿ ತಾಲ್ಲೂಕು ಅಧ್ಯಕ್ಷ ಬನ್ನೆಪ್ಪ ಉತ್ತಂಗಿ, ರಂಗ ಕಲಾವಿದೆ ನಾಗರತ್ನ ಸೋಗಿ, ಮುಖಂಡ ರಾದ ಮೋತಿ ಮಾರುತಿ, ಮಲ್ಲಿಕಾರ್ಜುನ್ ಗೌಡ, ನಾಗರಾಜ ತಿಮ್ಲಾಪುರ, ಪೂಜಾರ್ ಚಂದ್ರಪ್ಪ, ಕೊಟ್ರೇಶಪ್ಪ, ಕೆ.ಬಿ. ಷಣ್ಮುಖಪ್ಪ, ಕೆ. ಕೊಟ್ರಯ್ಯ, ಗೋಪಾಲ ಗೋಂದಲಿ, ನರೇಂದ್ರ ಗೋರಪ್ಪ ಸೇರಿದಂತೆ ಕಲಾವಿದರು ಇದ್ದರು.