ಜೆ.ಎಂ.ಇಮಾಮ್ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕುಂ.ವೀರಭದ್ರಪ್ಪ ಕಳವಳ
ಜಗಳೂರು, ಫೆ.18- ಭಾರತ ದೇಶ 138 ಕೋಟಿ ಜನರ ದೇಶ, ಕೇವಲ ಒಂದೂವರೆ ಪರ್ಸೆಂಟ್ ಜನರ ಭಾರತವಲ್ಲ. ಸರ್ಕಾರ ಪ್ರಜಾಪ್ರಭುತ್ವದ ಹಕ್ಕುಗಳನ್ನು ಹಂತ ಹಂತವಾಗಿ ಕಸಿದುಕೊಂಡು ಫ್ಯಾಸಿಸ್ಟ್ ಹಿಟ್ಲರ್ ವಾತಾವರಣ ರೂಪುಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಕುಂ.ವೀರಭದ್ರಪ್ಪ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಇಮಾಂ ಶಾಲೆ ಆವರಣದಲ್ಲಿ ಇಂದು ಜೆ.ಎಂ.ಇಮಾಂ ಟ್ರಸ್ಟ್( ರಿ) ವತಿಯಿಂದ ಹಮ್ಮಿಕೊಂಡಿದ್ದ ಮಹಮ್ಮದ್ ಇಮಾಂ ಸ್ಮಾರಕ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವೈವಿಧ್ಯತೆಯಲ್ಲಿ ಏಕತೆ ಇರುವ ಎಲ್ಲಾ ಧರ್ಮಗಳ ದೇಶ ಭಾರತ. ಯಾವುದೇ ಒಬ್ಬರ ಜಹಗೀರು ಅಲ್ಲ. ದೇಶದ ಇತಿಹಾಸ ತಿಳಿಯದವರನ್ನು ರಾಜಕಾರಣಿಗಳನ್ನಾಗಿ ಆಯ್ಕೆ ಮಾಡಿದ್ದೇವೆ .ರಾಷ್ಟ್ರ ಧ್ವಜ, ಸಂವಿಧಾನಗಳ ಬಗ್ಗೆ ಅಸಹ್ಯಕರ ಹೇಳಿಕೆಗಳ ಬಗ್ಗೆ ಕಮಲ ಹಾಸನ್ ರಂತಹ ಸಿನಿಮಾ ನಟರು ಪ್ರತಿಭಟಿಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಸಿನಿ ತಾರೆಯರ ಮೌನ ಖೇದಕರ ಸಂಗತಿ ಎಂದರು.
ದೆಹಲಿಯ ಇಂಡಿಯಾ ಗೇಟ್ ಮೇಲೆ ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದವರ ಹೆಸರುಗಳಿವೆ. ಇದರಲ್ಲಿ ಶೇ.68 ರಷ್ಟು ಮುಸ್ಲಿಮರ ಹೆಸರುಗಳಿವೆ. ರಾಜಕಾರಣಿಗಳು ದೇಶದ ಇತಿಹಾಸ ತಿಳಿದುಕೊಳ್ಳಬೇಕು ಎಂದರು.
ಸ್ವಾತಂತ್ರ್ಯಪೂರ್ವದಲ್ಲಿ ಜಗಳೂರು ನಾಡಿಗೆ ಕೆರೆಗಳನ್ನು ನಿರ್ಮಿಸಿ, ಶಿಕ್ಷಣ ಸಂಸ್ಥೆ ಸ್ಥಾಪಿಸಿ, ಅಪಾರ ಅಭಿವೃದ್ದಿ ಕನಸು ಹೊತ್ತು ಮಹಾರಾಜರನ್ನು ಕರೆಸಿಕೊಂಡಿದ್ದ ಇಮಾಂ ಸಾಹೇಬರಂತಹ ಮುತ್ಸದ್ದಿ ರಾಜಕಾರಣಿಯ ಇತಿಹಾಸವನ್ನು ಇಂದಿನ ರಾಜಕಾರಣಿಗಳು ತಿಳಿದು ನಡೆಯಬೇಕು ಎಂದರು.
ಪಟ್ಟಣದಲ್ಲಿ ಇಮಾಂ ಸಾಹೇಬರ ವಾಸದ ಮನೆ ಪಾಳುಬಿದ್ದಿದೆ .ಕನಿಷ್ಠ ಪಕ್ಷ ಅವರ ಹೆಸರಿನಲ್ಲಿ ಒಂದು ರಸ್ತೆ ಬದಿ ನಾಮಫಲಕವಿಲ್ಲ. ಅವರ ಪ್ರತಿಮೆಯೂ ಇಲ್ಲದಿರುವುದು ಬೇಸರ ತಂದಿದೆ.ಅವರ ಜನ್ಮ ದಿನದ ಕಾರ್ಯಕ್ರಮಗಳು, ವಿಚಾರಗೋಷ್ಠಿಗಳು ಇಮಾಂ ಸಾಹೇಬರ ಮತ್ತೆ ಮತ್ತೆ ಅವಿಸ್ಮರಣೀಯಗೊಳಿಸುತ್ತವೆ ಎಂದು ಹೇಳಿದ ಕುಂ.ವೀ., ಇಮಾಂ ಸಾಹೇಬರ ಸಾಧನೆ ಬಗ್ಗೆ ಕಿರು ಪುಸ್ತಕಗಳನ್ನು ಉಚಿತವಾಗಿ ನೀಡಬೇಕು ಎಂದು ಸಲಹೆ ನೀಡಿದರು.
ಹಿಜಾಬ್ ವಿಷಯದಲ್ಲಿ ಮಕ್ಕಳ ಹಕ್ಕಿನ ಜೊತೆ ರಾಜಕೀಯ ಕೆಸರಾಟ ಸರಿಯಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ದಿ.ಇಮಾಂ ಸಾಹೇಬರು ತಾಲ್ಲೂಕಿನ ಮರೇನಹಳ್ಳಿ ಕುಗ್ರಾಮದಲ್ಲಿ ಜನಿಸಿ ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿ ಸೇವೆಸಲ್ಲಿಸಿ ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಸಾಧನೆಗೈಯುವುದಲ್ಲದೆ ಕೆರೆಗಳನ್ನು ನಿರ್ಮಿಸಿದ ಕೀರ್ತಿ ಸಲ್ಲುತ್ತದೆ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತೆ ಸೂಲಗಿತ್ತಿ ಸುಲ್ತಾನ್ ಬಿ., ನಿವೃತ್ತ ಪ್ರಾಂಶುಪಾಲ ಎಂ,ಬಸವಪ್ಪ, ಸಾಹಿತಿಗಳಾದ ಎನ್.ಟಿ.ಎರ್ರಿಸ್ವಾಮಿ, ಎಂ.ಎಸ್, ಬಸವೇಶ್ ಸಿ.ಎಂ.ಹೊಳೆ, ಕೆ. ರವಿಕುಮಾರ್, ರಂಗಕರ್ಮಿ ಪಿ.ಅಬ್ದುಲ್ಲಾ, ಹೊಸಪೇಟೆ, ಅವರುಗಳಿಗೆ ವಾರ್ಷಿಕ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಇಮಾಂ ಟ್ರಸ್ಟ್ ಅಧ್ಯಕ್ಷ ಹುಸೇನ್ ಮಿಯ್ಯಾ, ಶ್ರೀಮತಿ ನೂರ್ ಫಾತಿಮಾ ದಂಪತಿಗಳ 55 ನೇ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಲಾಯಿತು.
ಸಮಾರಂಭದಲ್ಲಿ ರಾಜ್ಯ ಪಿಂಜಾರ್ ನದಾಫ್ ಸಂಘದ ಅಧ್ಯಕ್ಷ ಜಲೀಲ್ ಸಾಬ್, ಹೆಚ್.ಇ.ದಾದಾ ಖಲಂದರ್, ಇಮಾಂ ಟ್ರಸ್ಟ್ ಸದಸ್ಯರಾದ ಖಾಸಿಂ ಅಲಿ ಸಾಬ್, ಖಲೀಲ್ ಸಾಬ್, ಮಹಮ್ಮದ್ ಷರೀಫ್, ಮಸ್ತಾನ್ ಸಾಬ್, ಮಹಮದ್ ಹುಸೇನ್, ಕಸಾಪ ಸುಜಾತ, ನಿವೃತ್ತ ಉಪನ್ಯಾಸಕ ಡಿ.ಸಿ. ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.