ಅಧಿಕಾರಿ, ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ

ದಾವಣಗೆರೆ, ಫೆ.17- ಅಧಿಕಾರಿ ಮತ್ತು ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡಿದರೆ ಮಾತ್ರ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಸಹಕಾರ ತೋಟಗಾರಿಕೆ ಮಹಾಮಂಡಳದ ಅಧ್ಯಕ್ಷರೂ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾದ ಡಾ. ಬಿ.ಡಿ. ಭೂಕಾಂತ್ ಹೇಳಿದರು.

ನಗರದ ಬಾಪೂಜಿ ಎಂಬಿಎ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕುಗಳ ಒಕ್ಕೂಟ ಇವರ ಸಂಯುಕ್ತಾಶ್ರ ಯದಲ್ಲಿ ನಡೆದ ರಾಜ್ಯಮಟ್ಟದ `ವಿಶೇಷ ಕಾರ್ಯದಕ್ಷತೆ’ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಶಿಕ್ಷಣ ಮತ್ತು ತರಬೇತಿ ಇದ್ದರೆ ಬದ್ಧತೆಯಿಂದ ಕೆಲಸ ನಿರ್ವಹಿಸಲು ಸಾಧ್ಯ ಎಂದರು.

ರಾಜ್ಯದ ಎಲ್ಲಾ 29 ಯೂನಿಯನ್‌ಗಳ ಮುಖಾಂತರ ಅಧಿಕಾರಿ ವರ್ಗದವರಿಗೆ, ಸಹಕಾರಿ ಸಂಘದ ಸದಸ್ಯರುಗಳಿಗೆ ಸಹಕಾರ ಕಾಯಿದೆ, ಉಪ ನಿಯಮ ಇನ್ನಿತರೆ ವಿಷಯಗಳ ಬಗ್ಗೆ ಕಾರ್ಯಾಗಾರಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ-ಹರಿಹರ ಅರ್ಬನ್ ಕೋ-ಆಪ್ ಬ್ಯಾಂಕಿನ ಅಧ್ಯಕ್ಷರೂ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರೂ ಆದ ಎನ್.ಎ. ಮುರುಗೇಶ್ ಮಾತನಾಡಿ, ಆರ್‌ಬಿಐ ಸೂಚನೆಯ ಮೇರೆಗೆ ಎಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳ ಸಹ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕಡ್ಡಾಯ ವಾಗಿ ಅಳವಡಿಸಿಕೊಳ್ಳಬೇಕೆಂದು ಸುತ್ತೋಲೆ ಯನ್ನು ನೀಡಿರುವುದರ ಮೇರೆಗೆ ಎಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳು ಸಹ ವ್ಯವಹಾರಗಳನ್ನು ಆನ್‌ಲೈನ್ (ಕೋರ್ ಬ್ಯಾಂಕಿಂಗ್) ವ್ಯವಸ್ಥೆಯಡಿಯಲ್ಲಿ ತಂದಿರುತ್ತದೆ ಎಂದರು.

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಜೆ.ಎಸ್. ವೇಣುಗೋಪಾಲ್ ರೆಡ್ಡಿ ಮಾತನಾಡಿ, ಗಣಕೀಕರಣ ವ್ಯವಸ್ಥೆಯಿಂದ ಸಹಕಾರ ಸಂಘಗಳನ್ನು ಪಾರದರ್ಶಕವಾಗಿ, ಪರಿಣಾಮಕಾರಿಯಾಗಿ ನಡೆಸಿಕೊಂಡು ಹೋ ಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕನಕ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಲೋಕಿಕೆರೆ ಸಿದ್ಧಪ್ಪ ಮಾತನಾಡಿ, ಬ್ಯಾಂಕುಗಳು ಗ್ರಾಹಕರಿಗೆ ಸಾಲ ನೀಡುವ ಸಂದರ್ಭದಲ್ಲಿ ಸಹಕಾರ ಕಾಯ್ದೆ ಮತ್ತು ಬ್ಯಾಂಕಿನ ಉಪ ವಿಧಿಗಳ ರೀತ್ಯಾ ದಾಖಲಾತಿಗಳನ್ನು ಸಂಗ್ರಹಿಸಿ ಸಾಲ ವಿತರಿಸಿದರೆ ಸಾಲ ಮರುಪಾವತಿ ಸುಲಭ ಸಾಧ್ಯವಾಗುತ್ತದೆ ಎಂದು ಹೇಳಿದರು.

ದಾವಣಗೆರೆ ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಅಂದನೂರು ಮುಪ್ಪಣ್ಣ ಮಾತನಾಡಿ, ದಾವಣಗೆರೆ ಜಿಲ್ಲೆಯ 11 ಪಟ್ಟಣ ಸಹಕಾರ ಬ್ಯಾಂಕುಗಳು ನಿಯಮಾವಳಿಯ ಪ್ರಕಾರ ಸದಸ್ಯರಿಗೆ ಸಾಲ-ಸೌಲಭ್ಯಗಳನ್ನು ನೀಡಿದ್ದರಿಂದ  ಬ್ಯಾಂಕು ಉತ್ತಮ ಸ್ಥಿತಿಯಲ್ಲಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಶ್ರೀ ಕನ್ನಿಕಾ ಪರಮೇಶ್ವರಿ ಕೋ-ಆಪರೇಟೀವ್ ಬ್ಯಾಂಕಿನ ಅಧ್ಯಕ್ಷ ಆರ್.ಜಿ. ಶ್ರೀನಿವಾಸಮೂರ್ತಿ, ಸಿಟಿ ಕೋ-ಆಪರೇಟೀವ್ ಬ್ಯಾಂಕಿನ ನಿರ್ದೇಶಕ ಪರಶುರಾಮಪ್ಪ ಮಾತನಾಡಿದರು. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಬಿ. ಶೇಖರಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಹೆಚ್. ಬಸವರಾಜಪ್ಪ, ಸಿರಿಗೆರೆ ರಾಜಣ್ಣ ಮತ್ತಿತರರು ಭಾಗವಹಿಸಿದ್ದರು.

ಸಂಗೀತ ರಾಘವೇಂದ್ರ ಪ್ರಾರ್ಥಿಸಿದರು. ಕೆ.ಹೆಚ್. ಸಂತೋಷ್ ಕುಮಾರ್ ಸ್ವಾಗತಿಸಿ ದರು. ಕೆ.ಎಂ. ಜಗದೀಶ್ ವಂದಿಸಿದರು.

error: Content is protected !!