ಹೊನ್ನಾಳಿ, ಫೆ.17 – ಈ ಭಾಗದಲ್ಲಿ ಅತಿ ಹೆಚ್ಚು ಮೆಕ್ಕೆಜೋಳ ಬೆಳೆ ಬೆಳೆಯಲಾಗುತ್ತಿದ್ದು, ಬೆಳಗಾರರಿಂದ ನೇರವಾಗಿ ಮೆಕ್ಕೆ ಜೋಳ ಖರೀದಿಗಾಗಿ ಇದೀಗ ಎ.ಪಿ.ಎಂ.ಸಿ. ಪ್ರಾಂಗಣದಲ್ಲಿ ಇ-ಟೆಂಡರ್ ಮೂಲಕ ಬೆಳೆ ಖರೀದಿಸುವ ವ್ಯವಸ್ಥೆ ಮಾಡಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಎ.ಪಿ.ಎಂ.ಸಿ. ಜಿಲ್ಲಾ ಸಹಾಯಕ ನಿರ್ದೇಶಕ ಹಾಗೂ ಹೊನ್ನಾಳಿ ಎ.ಪಿ.ಎಂ.ಸಿ. ಪ್ರಧಾನ ಕಾರ್ಯದರ್ಶಿ ಜೆ. ಪ್ರಭು ಹೇಳಿದರು.
ಅವರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಇ-ಟೆಂಡರ್ ಮೂಲಕ ಮೆಕ್ಕೆಜೋಳ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು. ಪ್ರಥಮವಾಗಿ ವಾಸವಿ ಟ್ರೇಡರ್ ಮಾಲೀಕರಾದ ವಿನಾ ಯಕ ಶೆಟ್ಟಿ ಅವರು ಇ-ಟೆಂಡರ್ ಮೂಲಕ ಮೆಕ್ಕೆಜೋಳ ಖರೀದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆ.ಪ್ರಭು, ಈ ಹಿಂದೆ ರೈತರಿಂದ ಕೆಲವಾರು ವರ್ತಕರು ಅವರ ಹಳ್ಳಿಗೆ ಹೋಗಿ ರೈತರ ಬೆಳೆ ಖರೀದಿ ಮಾಡುತ್ತಿದ್ದರು. ಈ ಹಂತದಲ್ಲಿ ರೈತರಿಗೆ ನ್ಯಾಯವಾದ ಬೆಲೆ ಹಾಗೂ ಸಕಾಲದಲ್ಲಿ ಹಣ ದೊರೆಯದೇ ಹಲವಾರು ಸಂದರ್ಭದಲ್ಲಿ ಮೋಸ ಹೋದ ಪ್ರಕರಣಗಳು ಇವೆ ಎಂದರು.
ಕೃಷಿ ಕಾಯ್ದೆ ತಿದ್ದುಪಡಿಯ ಫಲವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಉಪ ಮಾರುಕಟ್ಟೆ ಪ್ರಾಂಗಣಕ್ಕೆ ಖರೀದಿ ವಹಿವಾಟು ಸೀಮಿತ ವಾಗಿರುವುದರಿಂದ ಇಲ್ಲಿ ನಡೆಯುವ ವ್ಯವಹಾರದ ಮೇಲೆ ನಿಯಂತ್ರಣ ವಿರುತ್ತದೆ ಎಂದರು. ಇದರಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆ, ನಿಖರವಾದ ತೂಕ ಹಾಗೂ ಸಕಾಲದಲ್ಲಿ ಹಣ ಪಾವತಿ ಸೌಲಭ್ಯ ದೊರೆಯಲಿದೆ. ಇದರಿಂದ ದಲಾಲರಿಗೆ ಕಮೀಷನ್, ಹಮಾಲರಿಗೆ ಕೂಲಿ ಹಾಗೂ ಮಾರುಕಟ್ಟೆ ಸಮಿತಿಗೂ ಕೂಡ ಆದಾಯವಾಗಲಿದೆ ಎಂದು ವಿವರಿಸಿದರು.
ಈಗಾಗಲೇ ದಾವಣಗೆರೆಯಲ್ಲಿ ಇ-ಟೆಂಡರ್ ಆರಂಭವಾಗಿರುವು ದರಿಂದ 1500 ರೂ. ಆಗಿದ್ದ ಮೆಕ್ಕಜೋಳ ಪ್ರತಿ ಕ್ವಿಂಟಾಲ್ಗೆ ರೂ. 2 ಸಾವಿರ ದಾಟಿದೆ. ಇದನ್ನು ಮನಗಂಡು ಮಾರುಕಟ್ಟೆ ರಾಜ್ಯ ನಿರ್ದೇಶಕ ಕರೇಗೌಡ ಅವರು ಕೃಷಿ ಮಾರುಕಟ್ಟೆ ನಿರ್ದೇಶಕರ ಸಭೆ ನಡೆಸಿ, ಇ- ಟೆಂಡರ್ ವ್ಯವಸ್ಥೆಯನ್ನು ರಾಜ್ಯ ವ್ಯಾಪ್ತಿ ವಿಸ್ತರಿಸಿದ್ದಾರೆ ಎಂದು ತಿಳಿಸಿದರು.
ಹೊನ್ನಾಳಿ ಕೃಷಿ ಮಾರುಕಟ್ಟೆಯಲ್ಲಿ ಇ- ಟೆಂಡರ್ ಜಾರಿಯಾದ ಮೊದಲ ದಿನವೇ ಮೆಕ್ಕೆಜೋಳ ಕ್ವಿಂಟಾಲ್ಗೆ 1950 ರೂ.ನಂತೆ ಮಾರಾಟವಾಗಿದ್ದು, ರೈತರು ಬೆಳೆದ ಮೆಕ್ಕೆಜೋಳವನ್ನು ಇ. ಟೆಂಡರ್ ಮೂಲಕವೇ ಮಾರಾಟ ಮಾಡಲು ಮುಂದೆ ಬರಬೇಕೆಂದು ಹೇಳಿದರು. ಇದರ ಜೊತೆಗೆ ದರ ಆಯ್ಕೆ ಅವಕಾಶ ರೈತರಿಗೆ ಲಭ್ಯವಿದೆ. ತನ್ನ ಬೆಳೆಗೆ ನಿರೀಕ್ಷಿತ ಬೆಲೆ ಸಿಗದಿದ್ದರೆ ಆ ದಿನದ ಇ -ಟೆಂಡರ್ ರದ್ದು ಪಡಿಸುವ ಅಧಿಕಾರ ರೈತರಿಗಿದೆ ಎಂದು ಹೇಳಿದರು.
ಎ.ಪಿ.ಎಂ.ಸಿ. ಅಧ್ಯಕ್ಷ ಜಿ.ವಿ.ಎಂ. ರಾಜು, ಉಪಾಧ್ಯಕ್ಷ ಹನುಮಂತಪ್ಪ, ಮಾಜಿ ಅಧ್ಯಕ್ಷ ಎಸ್.ಎಸ್. ಬೀರಪ್ಪ, ಎ.ಜಿ.ಪ್ರಕಾಶ್, ಸುರೇಶ್, ಸದಸ್ಯ ಕೆ.ಪಿ. ಕುಬೇಂದ್ರಪ್ಪ, ಕೃಷ್ಣನಾಯ್ಕ, ಗಣೇಶಪ್ಪ, ಕಾಯಿ ಬಸಣ್ಣ, ಬಿ.ಎಚ್.ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.