ಗುಣಮಟ್ಟದ ಅಂಬೇಡ್ಕರ್ ಭವನ ನಿರ್ಮಾಣ

ಜಗಳೂರು: ಅಂಬೇಡ್ಕರ್ ಭವನಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ರಾಮಚಂದ್ರ

ಜಗಳೂರು, ಫೆ. 16- ತಾಲ್ಲೂಕಿನಾದ್ಯಂತ ಮಂಜೂರಾಗಿರುವ ಅಂಬೇಡ್ಕರ್ ಭವನಗಳನ್ನು ಸುಸಜ್ಜಿತ ಹಾಗೂ ಗುಣಮಟ್ಟದಿಂದ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದು ಶಾಸಕ ಎಸ್.ವಿ.ರಾಮಚಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ತುಪ್ಪದಹಳ್ಳಿ, ಪಲ್ಲಾಗಟ್ಟೆ, ಸೂರಡ್ಡಿಹಳ್ಳಿ, ಉರ್ಲಕಟ್ಟೆ, ತಾರೇಹಳ್ಳಿ, ಕಸವನಹಳ್ಳಿ ಗ್ರಾಮಗಳಲ್ಲಿ 60 ಲಕ್ಷ ವೆಚ್ಚದಲ್ಲಿ  ಅಂಬೇಡ್ಕರ್  ಭವನಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ನನ್ನ ಆಡಳಿತಾವಧಿಯಲ್ಲಿ ದಲಿತ ಸಮುದಾಯದವರಿಗೆ ಅಂಬೇಡ್ಕರ್ ಭವನಗಳು ಗುರುತರ ಹೆಜ್ಜೆಗಳಾಗಲಿದ್ದು, ಆಯಾ ಗ್ರಾಮಗಳಲ್ಲಿ ದಲಿತರು ವಿವಾಹ, ಸಭೆ, ಸಮಾರಂಭದಂತಹ ಕಲ್ಯಾಣ ಕಾರ್ಯಕ್ರಮಗಳಿಗೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ಮಶಾನ ಹಾಗೂ ಸಿಸಿ ರಸ್ತೆ ಮಂಜೂರು: ತಾಲ್ಲೂಕಿನ ತುಪ್ಪದಹಳ್ಳಿ, ಪಲ್ಲಾಗಟ್ಟೆ ಸೇರಿದಂತೆ ಒಟ್ಟು 16 ಗ್ರಾಮಗಳಲ್ಲಿ ತಲಾ  47 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಸ್ಮಶಾನ ನಿರ್ಮಾಣ ಹಾಗೂ ವಿವಿಧ ಗ್ರಾಮಗಳಲ್ಲಿ 2 ಕೋಟಿ ರೂ.ವೆಚ್ಚದ ಸಿಸಿ ರಸ್ತೆಗಳಿಗೆ ಜನವರಿ 22 ರಂದು ಸಂಸದ ಸಿದ್ದೇಶ್ವರ ಅವರ ಸಮ್ಮುಖದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹೇಳಿದರು.

ಶೀಘ್ರ 57 ಕೆರೆ ತುಂಬಿಸುವ ಯೋಜನೆ ನೀರು ಭರ್ತಿ: ದೀಟೂರಿನಿಂದ 18 ಕಿ.ಮೀ ದೂರ ಪೈಪ್ ಲೈನ್‌ ಕಾಮಗಾರಿ ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಂಡು ನೀರು ಹರಿಯುತ್ತಿದೆ. ಉಳಿದಂತೆ 10‌ ರಿಂದ 12 ದಿನಗಳ ಒಳಗಾಗಿ ತಾಲ್ಲೂಕಿನ ತುಪ್ಪದಹಳ್ಳಿ ಕೆರೆಗೆ ಪ್ರಾಯೋಗಿಕ ನೀರು ಹರಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಮಾತನಾಡಿ, ತಾಲ್ಲೂಕಿನ  ಕೆಲ ಗ್ರಾಮಗಳಲ್ಲಿ ದಲಿತ ಸಮುದಾಯಗಳು ಹಲವು ವರ್ಷಗಳಿಂದ ಸ್ಮಶಾನಗಳಿಲ್ಲದೆ ಅಂತ್ಯಸಂಸ್ಕಾರಕ್ಕೆ ಸಾಕಷ್ಟು ಹರಸಾಹಸಪಡುವಂತಾಗಿತ್ತು. 

ಕಾಂಪೌಂಡ್, ನೀರಿನ ಸೌಕರ್ಯದೊಂದಿಗೆ ಸುಸಜ್ಜಿತ ಸ್ಮಶಾನ ನಿರ್ಮಾಣಗೊಳ್ಳಲಿವೆ ಎಂದು ತಿಳಿಸಿದರು.

ತಾ.ಪಂ ಇಓ ಲಕ್ಷ್ಮಿಪತಿ ಮಾತನಾಡಿ, ಜಿಲ್ಲಾಧಿಕಾರಿ ಹಾಗೂ ಶಾಸಕರು ಪ್ರತಿ ತಿಂಗಳಿಗೊಮ್ಮೆ ಒಂದು ಗ್ರಾಮ ವಾಸ್ತವ್ಯ ಹೂಡಲು ನಿರ್ದೇಶಿಸಿದ್ದು, ಇದೇ ಶನಿವಾರ ಹಾಲೇಕಲ್ಲು ಗ್ರಾಮದಲ್ಲಿ ಮೊದಲ ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಮಾರಂಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್, ತಹಶೀಲ್ದಾರ್ ಜಿ.ಸಂತೋಷ್ ಕುಮಾರ್, ಭೂ ಸೇನಾ ನಿಗಮದ ಎಇಇ ಚಂದ್ರಶೇಖರ್, ಎಇಇ ಭಾರತಿ, ಎಇ ಶಿವರಾಜ್, ಡಿಎಸ್ ಎಸ್ ಸಂಘಟನೆ ಮುಖಂಡರಾದ ಪೂಜಾರ್ ಸಿದ್ದಪ್ಪ, ವಕೀಲ ಹನುಮಂತಪ್ಪ, ಓಬಣ್ಣ, ಕುಬೇಂದ್ರಪ್ಪ, ಹನುಮಂತಪ್ಪ, ಸತೀಶ್, ಶಿವಮೂರ್ತಿ ಮುಂತಾದವರು ಭಾಗವಹಿಸಿದ್ದರು.

error: Content is protected !!