ಹರಪನಹಳ್ಳಿ, ಫೆ. 16- ‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಂಪಾದಿತಲೇ ಪರಾಕ್…’ ಇದು ಪಟ್ಟಣದ ಹೊಳಲು ರಸ್ತೆಯಲ್ಲಿರುವ ದೊಡ್ಡ ಮೈಲಾರದ ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರೆಯ ಈ ಬಾರಿಯ ಕಾರಣಿಕದ ಉಕ್ತಿ.
ಬುಧವಾರ ಭರತ ಹುಣ್ಣಿಮೆ ಅಂಗವಾಗಿ ಇಲ್ಲಿನ ಮೈಲಾರ ಲಿಂಗೇಶ್ವರಸ್ವಾಮಿ ಜಾತ್ರೆ ಪ್ರತಿ ವರ್ಷ ವೈಭವವಾಗಿ ನಡೆಯುತ್ತಿದೆ. ಆದರೆ, ಈ ಬಾರಿ ಕೋವಿಡ್-19 ಸಾಂಕ್ರಾಮಿಕ ರೂಪಾಂತರಿ ವೈರಸ್ ಹರಡುವಿಕೆಯ ನಿಯಂತ್ರಣದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸರಳ ಹಾಗೂ ಸಾಂಕೇತಿಕ ಆಚರಣೆಗೆ ಅವಕಾಶ ನೀಡಿದ್ದು, ಭಕ್ತರ ಸೇರುವಿಕೆಯ ಮೇಲೆ ನಿರ್ಬಂಧ ವಿಧಿಸಿದೆ.
ಆದರೂ, ಭಕ್ತರು ತಮ್ಮ ಆರಾಧ್ಯ ದೈವನ ದೈವವಾಣಿ ಆಲಿಸುವ ಹಾಗೂ ಮೈಲಾರ ಲಿಂಗೇಶ್ವರ ದರ್ಶನದ ಹಿನ್ನೆಲೆಯಲ್ಲಿ ನಿರ್ಬಂಧದ ನಡುವೆಯೂ
ಸಹಸ್ರಾರು ಭಕ್ತರು ನೆರೆದಿದ್ದರು.
ಸಹಸ್ರಾರು ಭಕ್ತಾದಿಗಳ ನಡುವೆ ಬಿಲ್ಲನ್ನೇರಿದ ಮೈಲಾರಲಿಂಗನ ಗೊರವ ಕೋಟೆಪ್ಪ ‘ಸದ್ದಲೇ…’ ಎನ್ನುತ್ತಿದ್ದಂತೆಯೇ ಎಲ್ಲವೂ ಕ್ಷಣಕಾಲ ನಿಶ್ಯಬ್ಧವಾಯಿತು. ನಂತರ ಕಾರಣಿಕದ ಉಕ್ತಿಯನ್ನು ನುಡಿದ ಗೊರವಪ್ಪ ಕೆಳಗೆ ಬೀಳುವ ದೃಶ್ಯ ಸ್ವಾಮಿಯ ಪವಾಡದಂತೆ ಗೋಚರಿಸಿತು ಎಂಬುದು ಭಕ್ತರ ಉವಾಚ.
ಪಟ್ಟಣಕ್ಕೆ ಹೊಂದಿಕೊಂಡಿರುವ ಎರಡು ಗುಡ್ಡಗಳ ನಡುವೆ ನೆಲೆಸಿರುವ ಮೈಲಾರಲಿಂಗ, ಭರತ ಹುಣ್ಣಿಮೆ ಯಂದು ನಡೆಯುವ ಜಾತ್ರೆಗೂ ಮುನ್ನ ಮಣಿಯನ್ನು ಸಂಹಾರ ಮಾಡಲು ಬೆನ್ನಟ್ಟಿದ್ದ ಬೆಟ್ಟ ಏರುತ್ತಾನೆ. ದೇವರ ಗದ್ದುಗೆಯ ಪಾದತಲದಲ್ಲಿದ್ದ ಗೊರವರು ಒಂಬತ್ತು ದಿನಗಳ ಕಾಲ ಉಪವಾಸದ ಕಠಿಣ ವ್ರತ ಆಚರಿಸಿ, ಸ್ವಾಮಿಗೆ ಹರಕೆ ಸಲ್ಲಿಸುವ ಸಂಪ್ರದಾಯ ಇಂದಿಗೂ ನಡೆದುಬಂದಿದೆ.
ಕಾರಣಿಕ ಪ್ರಸಕ್ತ ವರ್ಷದ ಮಳೆ, ಬೆಳೆ, ರಾಜಕೀಯ, ಆರ್ಥಿಕ, ಸಾಮಾಜಿಕ ಬದುಕಿನ ಭವಿಷ್ಯದ ಚಿತ್ರಣದ ದಿಕ್ಸೂಚಿ ಎಂಬುದು ಭಕ್ತರ ಅಭಿಮತ.
ಹಾಗೇ ಈ ಬಾರಿಯ ಕಾರಣಿಕವೂ ಸಹ ಒಳ್ಳೆಯ ಶುಭ ಸಂಕೇತವಾಗಿದೆ ಎಂಬುದು ನೆರೆದ ಭಕ್ತರ ಬಾಯಲ್ಲಿ ಹರಿದಾಡಿದ ವಿಶ್ಲೇಷಣೆ.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಧರ್ಮದರ್ಶಿ ಪಿ. ದತ್ತಾತ್ರೇಯರಾವ್, ವಂಶ ಪಾರಂಪರಿಕ ಧರ್ಮಕರ್ತರಾದ ನಾಗೇಶ್ವರರಾವ್, ಮಾರ್ತಂಡರಾವ್, ಕೋಟೇಶ್ವರರಾವ್, ಪುರಸಭಾ ಸದಸ್ಯ ಕಿರಣ್ ಶ್ಯಾನಬಾಗ್, ಮಾಜಿ ಸದಸ್ಯ ಬೂದಿ ಕೆಂಚಪ್ಪ ಹಾಗೂ ಇತರರು ಇದ್ದರು.