ಸಿರಿಗೆರೆ, ಫೆ.15-ಗುರುಶಾಂತೇಶ್ವರ ದಾಸೋಹ ಭವನದ ಮುಂಭಾಗದಲ್ಲಿ ವಿಶೇಷವಾಗಿ ನಿರ್ಮಿಸಿದ್ದ ವರ್ಣರಂಜಿತ ವೇದಿಕೆಯಲ್ಲಿ ಪ್ರದರ್ಶನಗೊಂಡ ವಿವಿಧ ಸಂಗೀತ ನೃತ್ಯ ಪ್ರಕಾರಗಳು ಪ್ರೇಕ್ಷಕರ ಚಿತ್ತಾಕರ್ಷಕವಾಗಿದ್ದವು.
ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಪ್ರಪ್ರಥಮ ಸಲ ತರಳಬಾಳು ಹುಣ್ಣಿಮೆಯ ವೇದಿಕೆಯಲ್ಲಿ ಪಿಟೀಲು ವಾದನ ನುಡಿಸಿದರು. ಶ್ರೀಗಳ ಪಿಟೀಲು ವಾದನಕ್ಕೆ ಖ್ಯಾತ ಗಾಯಕ ಶಶಿಧರ ಕೋಟೆಯವರ ವಾದ್ಯವೃಂದ ಸಾತ್ ನೀಡಿದರು. ಮಥುರ ಬೃಂದಾವನದ ಕು. ವಿಷ್ಣುಪ್ರಿಯ ಗೋಸಾಮಿಯವರ ಭಕ್ತಿಪ್ರಧಾನ ಒಡಿಸ್ಸಿ ನೃತ್ಯ ಮತ್ತು ಚೆನ್ನೈನ ಚಿತ್ರಾ ಚಂದ್ರಶೇಖರರ ಭರತನಾಟ್ಯ ಮನಸೂರೆಗೋಂಡಿತು.
ಸಿರಿಗೆರೆ ಬಾಲಕಿಯರ ಮಲ್ಲಿಹಗ್ಗದ ಕಸರತ್ತು ಮೈನವೀರೇಳಿಸುವಂತಿತ್ತು. ಶಶಿಧರ ಕೋಟೆ ವiತ್ತು ಸಂಗಡಿಗರ ಭಕ್ತಿ ಸಂಗೀತದ ರಸಧಾರೆ ಸೂಜಿಗಲ್ಲಿನಂತೆ ಸೆಳೆಯಿತು. ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ `ವೀರ ವಧೆ’ ದೊಡ್ಡಾಟ ಪ್ರೇಕ್ಷಕರ ಕರತಾಡನಕ್ಕೆ ಪಾತ್ರವಾಯಿತು.
ತರಳಬಾಳು ಹುಣ್ಣಿಮೆಯ ಎರಡನೆಯ ದಿನವಾದ ಕಾರ್ಯಕ್ರಮದಲ್ಲಿ ತಳಕಲ್ಲು ತಂಡದವರಿಂದ ಭಜನೆ ಹಾಗೂ ಬೆಂಗಳೂರು ಶಶಿಧರ ಕೋಟೆ ಮತ್ತು ತಂಡದವರಿಂದ ವಚನಗೀತೆ ಮತ್ತು ಸಂಗೀತ ಸಂಭ್ರಮ ಆರಂಭಗೊಂಡಿತು.
ಕಾರ್ಯಕ್ರಮದಲ್ಲಿ ಜಿ.ಎಚ್.ತಿಪ್ಪಾರೆಡ್ಡಿ, ಬೆಳ್ಳಿಪ್ರಕಾಶ್, ಮಾಡಾಳು ವಿರೂಪಾಕ್ಷಪ್ಪ, ಎಸ್.ವಿ.ರಾಮಚಂದ್ರಪ್ಪ, ಜಗಳೂರು ಎಚ್.ಪಿ.ರಾಜೇಶ್ ಇತರರು ಉಪಸ್ಥಿತರಿದ್ದರು.
ತರಳಬಾಳು ಹುಣ್ಣಿಮೆಯಲ್ಲಿ ಇಂದು ಸದ್ಧರ್ಮ ಸಿಂಹಾಸನಾರೋಹಣ
ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನವಾದ ಇಂದು ಬೆಳಿಗ್ಗೆ 11 ಗಂಟೆಗೆ `ವ್ಯಕ್ತಿತ್ವ ವಿಕಸನ’ ಕುರಿತ ವಿಚಾರ ಗೋಷ್ಠಿ ನಡೆಯಲಿದೆ.
ಮೈಸೂರಿನ ವ್ಯಕ್ತಿತ್ವ ವಿಕಸನ ತರಬೇತುದಾರ ಡಾ. ಆರ್.ಎ ಚೇತನ್ ರಾಮ್ ಅವರು `ವ್ಯಕ್ತಿತ್ವ ವಿಕಸನ’ ಕುರಿತು ಹಾಗೂ ಶಿಕಾರಿಪುರ ಸಾಧನಾ ಅಕಾಡೆಮಿ ಸಂಸ್ಥಾಪಕ ಬಿ. ಮಂಜುನಾಥ್ ಅವರು `ಎಸ್ಸೆಸ್ಸೆಲ್ಸಿ, ಪಿಯುಸಿ ನಂತರ ಮುಂದೇನು? ಕುರಿತು ಮಾತನಾಡಲಿದ್ದಾರೆ.
ಸಂಜೆ 6.30 ಕ್ಕೆ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಸದ್ಧರ್ಮ ಸಿಂಹಾಸನಾರೋಹಣ ಕಾರ್ಯಕ್ರಮ ನೆರವೇರಲಿದೆ.
ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ನಾರಾಯಣಸ್ವಾಮಿ, ಸಚಿವರಾದ ಬಿ.ಸಿ.ಪಾಟೀಲ್, ಜೆ.ಸಿ. ಮಾಧುಸ್ವಾಮಿ, ಸಂಸದ ಜಿ.ಎಂ. ಸಿದ್ದೇಶ್ವರ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಷಿ ಅವರನ್ನು ಸನ್ಮಾನಿಸಲಾಗುವುದು.
`ಆಧುನಿಕ ಶಿಕ್ಷಣದ ಜೊತೆಯಲಿ ಧಾರ್ಮಿಕ ಶಿಕ್ಷಣದ ಅಗತ್ಯತೆ’ ಕುರಿತು ಬೆಂಗಳೂರು ಪ್ರಜ್ಞಾ ಪ್ರವಾಹ ಸಂಯೋಜಕ ರಘುನಂದನ್ ಹಾಗೂ `ವಿಶ್ವಬಂಧು ಮರುಳಸಿದ್ಧನ ಪರಂಪರೆ’ ಕುರಿತು ಚಿಕ್ಕಮ ಗಳೂರು ಸಾಹಿತಿ ಮಹೇಶ್ ಚಟ್ನಳ್ಳಿ ಅವರು ಉಪನ್ಯಾಸ ನೀಡಲಿದ್ದಾರೆ.
ಮಧ್ಯಾಹ್ನ ಮೆರವಣಿಗೆ
ತರಳಬಾಳು ಹುಣ್ಣಿಮೆ ಮಹೋತ್ಸವದ ಪ್ರಯುಕ್ತ ಮಧ್ಯಾಹ್ನ 2.30ಕ್ಕೆ ಸಿರಿಗೆರೆಯ ಐಕ್ಯ ಮಂಟಪದಿಂದ ಸಭಾ ಕಾರ್ಯಕ್ರಮ ಏರ್ಪಾಡಾಗಿರುವ ಸ್ಥಳದವರೆಗೂ ಮೆರವಣಿಗೆ ನಡೆಯಲಿದೆ ಎಂದು ಶಿವಸೈನ್ಯ ಯುವಕರ ಸಂಘದ ಗೌರವಾಧ್ಯಕ್ಷ ಶಶಿಧರ ಹೆಮ್ಮನಬೇತೂರು ತಿಳಿಸಿದ್ದಾರೆ.
ಬೃಹನ್ಮಠದ ಗುರುಶಾಂತೇಶ್ವರ ಭವನದ ಮುಂಭಾಗದ ಆವರಣದಲ್ಲಿ ನೀರಿನ ಕಾರಂಜಿ ಮನರಂಜಿಸುತ್ತಿತ್ತು. ಗಣ್ಯರ ಹಾಗೂ ಭಕ್ತರ ಆಗಮನಕ್ಕೆ ತೆಂಗಿನ ಗರಿಗಳಿಂದ ಎಣೆದ ಚಪ್ಪರ ಆಕರ್ಷಿಸುತ್ತಿತ್ತು.
ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕಲಾವಿದರಿಂದ ಚಿತ್ರಾ ಚಂದ್ರಶೇಖರ್ ತಂಡದಿಂದ ಭರತ ನಾಟ್ಯಂ, ಉತ್ತರಪ್ರದೇಶ ಬೃಂದಾವನ ವಿಷ್ಣುಪ್ರಿಯ ಗೋಸ್ವಾಮಿ ಕಲಾವಿದರಿಂದ ಒಡಿಸ್ಸಿ ನೃತ್ಯ, ಹಾವೇರಿ ಗೊಟಗೋಡಿ ತಂಡದಿಂದ ‘ವೀರ ಅಭಿಮನ್ಯವಿನ ವಧೆ’ ದೊಡ್ಡಾಟ, ತರಳಬಾಳು ಕಲಾಸಂಘದಿಂದ ಮಲ್ಲಿಹಗ್ಗ, ನಗಾರಿ, ಬೀಸು ಕಂಸಾಳೆ ಪ್ರದರ್ಶವಿತ್ತು.