ಇಬ್ರಾಹಿಂ ಸುತಾರರಿಗೆ ಮರಣೋತ್ತರ `ಕರ್ನಾಟಕ ರತ್ನ’ ಪ್ರಶಸ್ತಿ ನೀಡಲು ಆಗ್ರಹ

ಹರಿಹರ ಕಸಾಪದಿಂದ ಲತಾ ಮಂಗೇಶ್ಕರ್, ಇಬ್ರಾಹಿಂ ಸುತಾರರಿಗೆ ನುಡಿ ನಮನ

ಹರಿಹರ,ಫೆ.15-  ಕೋಟ್ಯಾಂತರ ಭಾರತೀ ಯರ ಮನಸ್ಸಿನಲ್ಲಿ ರಾಷ್ಟ್ರಭಕ್ತಿಯ ಕಿಚ್ಚು ಮೂಡಿಸಿದ, ಸಂಗೀತ ಪ್ರಿಯರ ಕಣ್ಣಲ್ಲಿ ನೀರು ತರಿಸಿದ ಗಾಯಕಿ ಲತಾ ಮಂಗೇಶ್ಕರ್ ಅವರ ಅಗಲಿಕೆ ಭಾರತೀಯ ಸಂಗೀತ ಲೋಕಕ್ಕೆ ತುಂಬಲಾಗದ ನಷ್ಟ ಎಂದು ಸಾಹಿತಿ ಪ್ರೊ.ಹೆಚ್.ಎ.ಭಿಕ್ಷಾವರ್ತಿಮಠ ನುಡಿದರು. 

ನಗರದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆಯಲ್ಲಿ  ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಹಮ್ಮಿಕೊಂಡಿದ್ದ ಲತಾ ಮಂಗೇಶ್ಕರ್ ಮತ್ತು ಇಬ್ರಾಹಿಂ ಸುತಾರ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದ ಎಲ್ಲಾ ಭಾಷೆಗಳಲ್ಲಿ ಹಾಡಿರುವ ಲತಾ ಅವರ ಇಂಪಾದ ಧ್ವನಿ ಮತ್ತು ಮಧುರವಾದ ಗಾಯನವೇ ಅವರ ಜನಪ್ರಿಯತೆಗೆ ಕಾರಣವಾಗಿತ್ತು. ವಿಶ್ವದಲ್ಲಿ ಅವರು ತಮ್ಮದೇ ಛಾಪು ಮೂಡಿಸಿ ಹೋಗಿದ್ದಾರೆ. ಅವರ ಹಾಡಿನ ಧ್ವನಿ ಕೇಳುವುದರ ಮೂಲಕ ನಾವು ಅವರನ್ನು ಸ್ಮರಿಸಿಕೊಂಡು, ನಮ್ಮ ಮುಂದಿನ ಜೀವನ ನಡೆಸಬೇಕಿದೆ ಎಂದರು.

ಇನ್ನು ಕರ್ನಾಟಕದ ಕಬೀರ ಇಬ್ರಾಹಿಂ ಸುತಾರ್ ಅವರ ನಿಧನ ನಮಗೆಲ್ಲಾ ಆಘಾತ ತಂದಿದೆ. ಅವರಲ್ಲಿದ್ದ ಸರಳ, ಸಜ್ಜನಿಕೆ ಗುಣಗಳಿಂದ ಇಡೀ ಕರ್ನಾಟಕದ ಜನತೆಯ ಮನವನ್ನು ಗೆದ್ದಿದ್ದಾರೆ. ಅವರು ಅಪರೂಪದ ವ್ಯಕ್ತಿಯಾಗಿದ್ದರು. ಎಲ್ಲಾ ಧರ್ಮಗಳ ಸಾರವನ್ನು ಅರ್ಥಮಾಡಿಕೊಂಡು ಮಾನವ ಧರ್ಮದ ಬಗ್ಗೆ ಪ್ರವಚನ ನೀಡಿ, ಜನರಲ್ಲಿ ಸಜ್ಜನಿಕೆ ಹೆಚ್ಚಾಗುವಂತೆ ಮಾಡುತ್ತಿದ್ದರು. 

ಇಂತಹ ಮಾನವ ಧರ್ಮದ ಹರಿಕಾರ ಇಬ್ರಾಹಿಂ ಸುತಾರರಿಗೆ ಮರಣೋತ್ತರ `ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ಪ್ರೊ.ಭಿಕ್ಷಾವರ್ತಿಮಠ ಆಗ್ರಹಿಸಿದರು. 

ಸಾಹಿತಿ ಜೆ. ಕಲೀಂಭಾಷ ಮಾತನಾಡಿ, ಲತಾ ಮಂಗೇಶ್ಕರ್ ಮತ್ತು ಇಬ್ರಾಹಿಂ ಸುತಾರ್ ಇಬ್ಬರೂ ಮತ್ತೆ ಹುಟ್ಟಿಬರಲೆಂದು ಪ್ರಾರ್ಥಿಸಿದರು.

ಕಾರ್ಮಿಕ ಮುಖಂಡ ಹೆಚ್.ಕೆ.ಕೊಟ್ರಪ್ಪ, ಬಂಡಾಯ ಸಾಹಿತಿ ಹುಲಿಕಟ್ಟೆ ಚನ್ನಬಸಪ್ಪ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಕ್ರೀಡಾಪಟು ಹೆಚ್. ನಿಜಗುಣ  ನುಡಿ ನಮನ ಸಲ್ಲಿಸಿದರು. 

ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ ಅಧ್ಯಕ್ಷತೆ ವಹಿಸಿದ್ದರು. ಪರಸ್ಪರ ಬಳಗದ ಸಂಚಾಲಕ ಎ.ರಿಯಾಜ್ ಅಹ್ಮದ್, ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಎ.ಕೆ.ಭೂಮೇಶ್, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಎಂ.ಉಮ್ಮಣ್ಣ,   ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ.ಕೊಟ್ರೇಶಪ್ಪ, ತಾಲ್ಲೂಕು  ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಡಿ.ಟಿ.ತಿಪ್ಪಣ್ಣರಾಜು, ಕಾರ್ಯದರ್ಶಿ ಈಶಪ್ಪ ಬೂದಿಹಾಳ್,   ಹಿರಿಯ ಪತ್ರಕರ್ತ ಸುಬ್ರಹ್ಮಣ್ಯ ನಾಡಿಗೇರ್ ಉಪಸ್ಥಿತರಿದ್ದರು.

ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ.ರೇವಣನಾಯ್ಕ್ ಸ್ವಾಗತಿಸಿದರು. ಎಂ.ಎನ್.ಶ್ರೀಧರ ಮಯ್ಯ ವಂದಿಸಿದರು.

error: Content is protected !!