ಹಿಜಾಬ್ ಬಿಡುವುದಿಲ್ಲ ಎಂದು 23 ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರು

ಹರಿಹರ ಧ.ರಾ.ಮ. ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿನಿಯರು

ಹರಿಹರ, ಫೆ.15 – ನಗರದ ಧ.ರಾ.ಮ. ಸರ್ಕಾರಿ ಪ್ರೌಢಶಾಲೆಯ 23 ವಿದ್ಯಾರ್ಥಿನಿಯರು ಹೈಕೋರ್ಟ್ ಮಧ್ಯಂತರ ಆದೇಶದಂತೆ ಹಿಜಾಬ್ ಬಿಡಲು ನಿರಾಕರಿಸಿದ್ದು, ಎಸ್.ಎಸ್.ಎಲ್.ಸಿ ಜಿಲ್ಲಾ ಪೂರ್ವ ಸಿದ್ದತಾ ಪರೀಕ್ಷೆಗೆ ಹಾಜರಾಗದೇ ವಾಪಸ್ಸಾಗಿದ್ದಾರೆ.

ನಗರದ ಧ.ರಾ.ಮ. ಸರ್ಕಾರಿ ಪ್ರೌಢಶಾಲೆಯಲ್ಲಿ ಒಟ್ಟು 399 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅದರಲ್ಲಿ 305 ವಿದ್ಯಾರ್ಥಿಗಳು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಇದ್ದಾರೆ. ಇಂದು ಶಾಲೆಗೆ 141 ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಲ್ಲಿ 61 ಮಕ್ಕಳು ಎಸ್.ಎಸ್.ಎಲ್.ಸಿ‌ ಜಿಲ್ಲಾ ಪೂರ್ವ ಸಿದ್ದತೆ ಗಣಿತ ವಿಷಯದ ಪರೀಕ್ಷೆಗೆ ಹಿಜಾಬ್ ಧರಿಸಿ ಆಗಮಿಸಿದ್ದರು. 

ಆದರೆ, ಹೈಕೋರ್ಟ್ ಆದೇಶವನ್ನು ಪಾಲಿಸುವಂತೆ ಸರ್ಕಾರದಿಂದ ಆದೇಶ ಬಂದಿರುವುದರಿಂದ, ಶಾಲೆಯಲ್ಲಿ ಹಿಜಾಬ್‌ಗೆ ಅವಕಾಶ ಇಲ್ಲ. ಹಿಜಾಬ್ ರಹಿತವಾಗಿ ಪರೀಕ್ಷೆ ಬರೆಯಬೇಕು ಎಂದು ವಿದ್ಯಾರ್ಥಿಗಳಿಗೆ ಶಿಕ್ಷಕರು ತಿಳಿಸಿದರು.

ಆಗ 23 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯದೇ ವಾಪಸ್ಸಾಗಿದ್ದಾರೆ.  8 ನೇ ತರಗತಿಯ 3 ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಪೋಷಕರಿಗೆ ಕೇಳಿಕೊಂಡು ಬರುವುದಾಗಿ ಮನೆಗಳಿಗೆ ವಾಪಸ್‌ ಹೋಗಿದ್ದಾರೆ.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ ಮಾತನಾಡಿ, ಹರಿಹರ ತಾಲ್ಲೂಕಿನ ಖಾಸಗಿ ಮತ್ತು ಅನುದಾನ ರಹಿತ ಸೇರಿದಂತೆ, ಒಟ್ಟು 60 ಪ್ರೌಢಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ. ಜಿಲ್ಲಾ ಪೂರ್ವ ಸಿದ್ದತೆ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ ಹರಿಹರ ನಗರದ ಧ.ರಾ.ಮ. ಸರ್ಕಾರಿ ಪ್ರೌಢಶಾಲೆಯಲ್ಲಿ ಮಾತ್ರ ಎಸ್.ಎಸ್.ಎಲ್.ಸಿ.ಯ 23 ವಿದ್ಯಾರ್ಥಿಗಳು ಮತ್ತು 8 ನೇ ತರಗತಿ ಮೂವರು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಆಗಮಿಸಿದ್ದರಿಂದ ಅವರಿಗೆ ಮನೆಗಳಿಗೆ ವಾಪಸ್‌ ಕಳಿಸಲಾಯಿತು. ಉಳಿದಂತೆ ಎಲ್ಲಾ ಶಾಲೆಗಳಲ್ಲಿ ಮಕ್ಕಳು ಯಾವುದೇ ರೀತಿಯ ತೊಂದರೆ ಇಲ್ಲದೆ ಪರೀಕ್ಷೆಯನ್ನು ಬರೆದಿದ್ದಾರೆ ಎಂದು ಹೇಳಿದರು.

ಧ.ರಾ.ಮ. ಸರ್ಕಾರಿ ಪ್ರೌಢಶಾಲಾ ಉಪ ಪ್ರಾಚಾರ್ಯ ಸಿದ್ದರಾಮೇಶ್ವರ ಮಾತನಾಡಿ, ನಿನ್ನೆ  61 ವಿದ್ಯಾರ್ಥಿಗಳು ವಾಪಸ್‌ ಹೋಗಿದ್ದರು. ಆದರೆ, ಇವತ್ತು ಅವರ ಮನವೊಲಿಸಿ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಿದ್ದರಿಂದ 23 ವಿದ್ಯಾರ್ಥಿಗಳು ಮಾತ್ರ ವಾಪಸ್‌ ಹೋಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿ.ಆರ್.ಪಿ. ಕ್ಲಸ್ಟರ್ ಅಧಿಕಾರಿ ರೇವಣ್ಣ, ಪಿಎಸ್ಐ ಸುನೀಲ್ ಬಸವರಾಜ್ ತೆಲಿ, ಶಿಕ್ಷಕರಾದ ಈಶಪ್ಪ ಬೂದಿಹಾಳ, ಆನಂದ್, ಹೀನಾಕೌಸರ್, ಮಂಜುಳಾ, ಇಮ್ತಿಯಾಜ್, ಲೋಕೇಶ್, ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!