ಹರಪನಹಳ್ಳಿ : ಶೈಕ್ಷಣಿಕ ಅರಿವು ಕಾರ್ಯಕ್ರಮದಲ್ಲಿ ಬಿಸಿಎಂ ವಿಸ್ತರಣಾಧಿಕಾರಿ ಭೀಮಪ್ಪ
ಹರಪನಹಳ್ಳಿ, ಫೆ.15- ಕಾಣದ ದೈವಾಂಶ ಸಂಭೂತಗಳು ನಮ್ಮ ನೆರವಿಗೆ ಬರುವ ಮೂಲಕ ವರ ಕೊಡುತ್ತವೆ ಎಂದು ನಿರೀಕ್ಷಿಸುವುದನ್ನು ಬಿಟ್ಟು, ಅಕ್ಷರದ ಸಂಸ್ಕಾರ ಪಡೆಯುವa ಮೂಲಕ ನಾವು ಸಮಾಜದ ಮುಖ್ಯವಾಹಿನಿಗೆ ರಹದಾರಿ ಮಾಡಿ ಕೊಳ್ಳಬೇಕಾದ ಜರೂರು ಇದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಕೆ. ಭೀಮಪ್ಪ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸತ್ತೂರು ಗೊಲ್ಲರಹಟ್ಟಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಮ್ಮಿ ಕೊಂಡಿದ್ದ ಗೊಲ್ಲ, ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ಶೈಕ್ಷಣಿಕ ಅರಿವು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.
ವೈಜ್ಞಾನಿಕ ನಾಗಾಲೋಟದಲ್ಲಿ ಬೆಳವಣಿಗೆಯಾಗು ತ್ತಿದ್ದರೂ ಸಹ, ಇನ್ನೂ ನಮ್ಮಲ್ಲಿ ಮೂಢನಂಬಿಕೆಯೇ ಪ್ರಧಾನ ಪಾತ್ರ ನಿರ್ವಹಿಸುತ್ತಿದೆ. ಹುಟ್ಟಿಸಿದ ದೇವರು ಹುಲ್ಲು ಮೇಯಿಸಲಾರ ಎಂಬ ಮೌಢ್ಯತೆಯ ಸಂಕೋಲೆ ಒಳಗೆ ನಾವು ಜೀವಿಸುತ್ತಿದ್ದೇವೆ. ಶೋಷಿತ ಸಮುದಾಯ ಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಔದ್ಯೋಗಿಕವಾಗಿ ನಾವು ಪ್ರಾಬಲ್ಯ ಸಾಧಿಸಬೇಕಾದರೆ, ಶೈಕ್ಷಣಿಕ ಸಂಸ್ಕಾರವನ್ನು ನಾವು ನಮ್ಮ ಮಕ್ಕಳಿಗೆ ಚಾಚೂ ತಪ್ಪದೇ ಕೊಟ್ಟಾಗ ಮಾತ್ರ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದು ವಿಶ್ಲೇಷಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಹನುಮಕ್ಕ ಪರಶು ರಾಮಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ಎ.ಎನ್. ಕುಮಾರ್, ಸದಸ್ಯೆ ರೇಣುಕಮ್ಮ, ಇಲಾಖೆಯ ವಸತಿ ನಿಲಯದ ಮೇಲ್ವಿಚಾರಕ ಬಿ.ಎಚ್. ಚಂದ್ರಪ್ಪ, ಎಸ್ಡಿಎಂಸಿ ಅಧ್ಯಕ್ಷ ಹೇಮಣ್ಣ, ಮುಖಂಡರಾದ ಹನುಮಂತಪ್ಪ, ದಾಸಣ್ಣ ಇತರರು ಪಾಲ್ಗೊಂಡಿದ್ದರು.
ನಯನ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪಂಚಾಯ್ತಿ ಕರ ವಸೂಲಿಗಾರ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.