19ರವರೆಗೆ ನಿಷೇಧಾಜ್ಞೆ
ದಾವಣಗೆರೆ, ಫೆ. 15- ಜಿಲ್ಲೆಯಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗಾಗಿ ಈಗಾಗಲೇ ವಿಧಿಸಲಾಗಿರುವ ವಿಷೇಧಾಜ್ಞೆಯನ್ನು ಜಿಲ್ಲಾಡಳಿತ ಫೆ.19ರ ಸಂಜೆ 6 ಗಂಟೆಯವರೆಗೆ ವಿಸ್ತರಿಸಿದೆ.
ಹಿಜಾಬ್ ಹಾಗೂ ಕೇಸರಿ ಶಾಲಿನ ವಿವಾದ ಭುಗಿಲೆದ್ದ ನಂತರ ಜಿಲ್ಲೆಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.
ದಾವಣಗೆರೆ, ಫೆ. 15- ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿ 9ರಿಂದ ಬಂದ್ ಆಗಿದ್ದ ಪಿ.ಯು. ಹಾಗೂ ಪದವಿ ತರಗತಿಗಳು ನಾಳೆ ಬುಧವಾರದಿಂದ ಮತ್ತೆ ಆರಂಭವಾಗಲಿವೆ.
ಹೈಕೋರ್ಟ್ ಮಧ್ಯಂತರ ಆದೇಶದ ಅನ್ವಯ ಧಾರ್ಮಿಕ ಸಂಕೇತದ ಬಟ್ಟೆಗಳನ್ನು ವಿದ್ಯಾರ್ಥಿಗಳು ಧರಿಸುವಂತಿಲ್ಲ. ಜಿಲ್ಲಾಡಳಿತ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ದೇಶನಗಳನ್ನು ನೀಡುವ ಜೊತೆಗೆ ಶಾಂತಿ – ಸೌಹಾರ್ದತೆಗಾಗಿ ಬಂದೋಬಸ್ತ್ ವ್ಯವಸ್ಥೆ ಮಾಡಲು ಸೂಚಿಸಿದೆ.
ಇದೆಲ್ಲದರ ನಡುವೆ ಹೈಸ್ಕೂಲ್‌ನ 9 ಹಾಗೂ 10ನೇ ತರಗತಿಗಳು ಸೋಮವಾರ ದಿಂದ ಪುನರಾರಂಭವಾಗಿವೆ. ಈ ಸಂದರ್ಭ ದಲ್ಲಿ ಆದ ಕೆಲ ಘಟನೆಗಳನ್ನು ಗಮನದ ಲ್ಲಿಟ್ಟುಕೊಂಡು, ಕಾಲೇಜು ಆರಂಭದ ವೇಳೆ ಮುನ್ನೆಚ್ಚರಿಕೆಯನ್ನೂ ವಹಿಸಲಾಗುತ್ತಿದೆ.
ಹೈಸ್ಕೂಲ್ ವಿದ್ಯಾರ್ಥಿನಿಯರು ಹಿಜಾಬ್ ಅನ್ನು ಶಾಲೆಯ ಗೇಟುಗಳಲ್ಲೇ ತೆಗೆದು ಒಳಹೋಗಬೇಕು ಎಂದು ಕೆಲ ಶಾಲೆಗಳು ನಿರ್ಬಂಧಿಸಿದ್ದು ಆಕ್ಷೇಪಕ್ಕೆ ಕಾರ ಣವಾಗಿತ್ತು. ಈ ಹಿನ್ನೆಲೆಯಲ್ಲಿ ಕಾಲೇಜಿನ ಒಳಗೆ ಕೋಣೆಯೊಂದನ್ನು ಕಾಯ್ದಿರಿಸಿ, ಅಲ್ಲಿ ಹಿಜಾಬ್ ತೆರೆಯಲು ವ್ಯವಸ್ಥೆ ಮಾಡುವಂತೆ ಕಾಲೇಜುಗಳಿಗೆ ತಿಳಿಸಲಾಗಿದೆ. ಕಾಲೇಜುಗಳ ಆಡಳಿತ ಮಂಡಳಿಗಳು ಸಮವಸ್ತ್ರ ಹೊರತುಪಡಿಸಿ ಬೇರೆ ರೀತಿಯ ಧರ್ಮ, ನಂಬಿಕೆಯನ್ನು ಪ್ರತಿನಿಧಿಸುವ ವಸ್ತ್ರಗಳನ್ನು ಧರಿಸಿ ಬಂದವರನ್ನು ಕಾಲೇಜು ಹೊರಭಾಗದಲ್ಲಿ ಅಥವಾ ರಸ್ತೆಯಲ್ಲಿ ನಿಲ್ಲಿಸಿ ತೆಗೆಯಲು ಹೇಳಬಾರದು. ಕಾಲೇಜಿನ ಆವರಣದ ಒಳಗೆ ತೆಗೆಯಲು ಸೂಚಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳೂ ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳ ಜೊತೆ ಈಗಾಗಲೇ ಸಭೆಗಳನ್ನು ನಡೆಸಲಾಗಿದೆ. ಪೊಲೀಸ್ ಬಂದೋಬಸ್ತ್‌ಗೂ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತ ವಿದ್ಯಾರ್ಥಿಗಳ ಜೊತೆ ಇರಲಿದೆ ಎಂದು ಡಿಡಿಪಿಯು ಶಿವರಾಜು ಹೇಳಿದ್ದಾರೆ.
ಹೈಕೋರ್ಟ್ ಮಧ್ಯಂತರ ಆದೇಶದ ಪಾಲನೆಗಾಗಿ ಕಾಲೇಜುಗಳು ಸಮನ್ವಯಾಧಿಕಾರಿಯೊಬ್ಬರನ್ನು ನಿಯೋಜಿಸಲೂ ಸಹ ಸೂಚನೆ ನೀಡಲಾಗಿದೆ.
ಕಾಲೇಜು ಆರಂಭಕ್ಕೆ ಮುಂಚೆ ಪೋಷಕರ ಸಭೆ ಕರೆದು ಹೈಕೋರ್ಟ್ ಆದೇಶದ ಬಗ್ಗೆ ತಿಳಿಸಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿತ್ತು. ಅದರಂತೆ ಕಾಲೇಜುಗಳು ಈಗಾಗಲೇ ಸಭೆಗಳನ್ನು ನಡೆಸಿವೆ.
ಈಗಾಗಲೇ ಪೋಷಕರ ಜೊತೆ ಆನ್‌ಲೈನ್ ಮೂಲಕ ಸಭೆ ನಡೆಸಿದ್ದೇವೆ. ಕಾಲೇಜಿಗೆ ಬರುವಾಗ ಮೊಬೈಲ್ ತರಬಾರದು ಎಂದು ತಿಳಿಸಿದ್ದೇವೆ. ಇದರ ಜೊತೆಗೆ ಕಾಲೇಜಿನ ಗುರುತಿನ ಚೀಟಿ ತರುವಂತೆಯೂ ಹೇಳಿದ್ದೇವೆ ಎಂದು ಎ.ವಿ.ಕೆ.ಕಾಲೇಜಿನ ಪ್ರಾಂಶುಪಾಲ ಬಿ.ಪಿ. ಕುಮಾರ್ ತಿಳಿಸಿದ್ದಾರೆ.