ಶಾಲೆಗಳಿಗೆ ಭೇಟಿ ನೀಡಿದ ನೋಡಲ್ ಅಧಿಕಾರಿ ನಜ್ಮಾ
ಮಲೇಬೆನ್ನೂರು, ಫೆ. 14- ಹೈಕೋರ್ಟ್ ಸೂಚನೆ ನಡುವೆಯೂ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 26 ವಿದ್ಯಾರ್ಥಿನಿಯರು ಸೋಮವಾರ ಹಿಜಾಬ್ ಧರಿಸಿ ಶಾಲೆಗೆ ಆಗಮಿಸಿದ ಘಟನೆ ನಡೆಯಿತು.
ಹಿಜಾಬ್ ಧರಿಸಿ ಶಾಲೆಗೆ ಬಂದಿದ್ದ ಎಲ್ಲಾ ವಿದ್ಯಾರ್ಥಿನಿಯರನ್ನು ಉಪ ಪ್ರಾಚಾರ್ಯ ರಾಮಪ್ಪ ಅವರು ಆಫೀಸ್ ರೂಂಗೆ ಕರೆದು ಸರ್ಕಾರದ ಸೂಚನೆ ಈ ರೀತಿ ಇದ್ದು, ದಯವಿಟ್ಟು ಹಿಜಾಬ್ ತೆಗೆದು ತರಗತಿಗಳಿಗೆ ಹೋಗಿ ಎಂದರು.
ಆಗ 16 ವಿದ್ಯಾರ್ಥಿನಿಯರು ನಾವು ಹಿಜಾಬ್ ತೆಗೆಯಲ್ಲ. ನಮ್ಮ ಮನೆಯಲ್ಲಿ ಹಿಜಾಬ್ ತೆಗೆಯಬೇಡಿ ಎಂದು ಹೇಳಿ ಕಳುಹಿಸಿದ್ದಾರೆಂದು ತಿಳಿಸಿ ಶಾಲೆಯಿಂದ ಮನೆಗೆ ವಾಪಸ್ಸಾದರು.
ಉಳಿದ 10 ವಿದ್ಯಾರ್ಥಿನಿಯರು ಶಿಕ್ಷಕರ ಮನವೊಲಿಕೆಗೆ ಮನ್ನಣೆ ನೀಡಿ ಹಿಜಾಬ್ ತೆಗೆದು ತರಗತಿಗಳಿಗೆ ತೆರಳಿದರು.
ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪಿಎಸ್ಐ ರವಿಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಶಾಲೆ ಬಿಡುವವರೆಗೂ ಶಾಲೆ ಬಳಿಯೇ ಮೊಕ್ಕಾಂ ಮಾಡಿದ್ದರು.
ಪೋಷಕರ ಸಭೆ: ಹಿಜಾಬ್ ಧರಿಸಿ ತರಗತಿಗಳಿಗೆ ಬರಬಾರದೆಂಬ ವಿಷಯ ತಿಳಿಸಲು ಭಾನುವಾರ ಪೋಷಕರು ಸಭೆ ಕರೆಯಲಾಗಿತ್ತು. ಆದರೆ ಸಭೆಗೆ ಹೆಚ್ಚಿನ ಪೋಷಕರು ಆಗಮಿಸದ ಕಾರಣ ಅವರಿಗೆ ಈ ವಿಷಯ ತಿಳಿದಿಲ್ಲ. ಹಾಗಾಗಿ ವಿದ್ಯಾರ್ಥಿನಿಯರು ಎಂದಿನಂತೆ ಹಿಜಾಬ್ ಧರಿಸಿ ಆಗಮಿಸಿದ್ದರು.
ಇನ್ನೊಮ್ಮೆ ಪೋಷಕರ ಸಭೆ ನಡೆಸಿ ಹಿಜಾಬ್ ಬಗ್ಗೆ ಕೋರ್ಟ್ ಸೂಚನೆಯನ್ನು ಮನವರಿಕೆ ಮಾಡಿ ಕೊಡಲಾಗುವುದೆಂದು ಎಸ್ಡಿಎಂಸಿ ಸದಸ್ಯ ಸದಾನಂದ್ ತಿಳಿಸಿದ್ದಾರೆ.
ನೋಡಲ್ ಅಧಿಕಾರಿ ಭೇಟಿ: ಏತನ್ಮಧ್ಯೆ ನೋಡಲ್ ಅಧಿಕಾರಿಗಳೂ ಆದ ಸ್ಥಳೀಯ ಸಂಸ್ಥೆಗಳ ಯೋಜನಾ ನಿರ್ದೇಶಕರಾದ ಶ್ರೀಮತಿ ನಜ್ಮಾ ಅವರು ಪಟ್ಟಣದ ವಿವಿಧ ಪ್ರೌಢಶಾಲೆಗಳಿಗೆ ಭೇಟಿ ನೀಡಿ, ಕಾನೂನು ಸುವ್ಯವಸ್ಥೆ ಮತ್ತು ಸರ್ಕಾರದ ಸೂಚನೆಗಳನ್ನು ಶಾಲಾ ಮುಖ್ಯ ಶಿಕ್ಷಕರಿಗೆ ತಿಳಿಸಿ, ಸಭೆ ನಡೆಸಿದರು.
ಉಪ ತಹಶೀಲ್ದಾರ್ ಆರ್. ರವಿ, ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ರುಕ್ಮಿಣಿ ಮತ್ತಿತರರು ಈ ವೇಳೆ ಹಾಜರಿದ್ದರು.