ತರಳಬಾಳು ಹುಣ್ಣಿಮೆಯಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಸಿರಿಗೆರೆ, ಫೆ.14-ಸಮಸ್ಯೆಗೆ ಹೆದರಬಾರದು. ಸಮಸ್ಯೆ ಬಂದಾಗ ಹೇಗೆ ಎದುರಿಸಬೇಕೆಂಬ ಆಲೋಚನೆ ಮಾಡಬೇಕು. ಪರಿಹಾರ ಸಿಕ್ಕೇ ಸಿಗುತ್ತದೆ. ಮನುಷ್ಯನ ಮನಸ್ಸಿಗೆ ಅದ್ಭುತವಾದ ಶಕ್ತಿ ಇದೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸೋಮವಾರ ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ಭವನದ ಮುಂಭಾಗದ ಸುಸಜ್ಜಿತ ವೇದಿಕೆಯಲ್ಲಿ ಮೊದಲನೆಯ ದಿನದ ತರಳಬಾಳು ಹುಣ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಜಗತ್ತಿನ ದೊಡ್ಡ ದೊಡ್ಡ ವಿಜ್ಞಾನಿಗಳು ಚಿಂತನೆ ಮೂಲಕ ಸಾಧನೆ ಮಾಡಿದವರು ಎಂದು ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ನ ಉದಾಹರಣೆಯೊಂದಿಗೆ ತಿಳಿಸಿದರು.
ಮಕ್ಕಳು ಪೋಷಕರನ್ನು ಗೌರವಿಸಬೇಕು. ಸಾಮಾನ್ಯ ಜ್ಞಾನ ಹೊಂದಿರಬೇಕು. ಬುದ್ದಿಮತ್ತೆಗೆ ಹೆಚ್ಚಿನ ಕೆಲಸ ನೀಡಬೇಕಾಗಿದೆ. ಧರ್ಮ ಇನ್ನೊ ಬ್ಬರಿಗೆ ಸಹಾಯವಾಗುವಂತಹದ್ದು, ದುಷ್ಟತನಕ್ಕೆ ಎಡೆಮಾಡಿಕೊಡಬಾರದು ಎಂದು ಕಿವಿಮಾತು ಹೇಳಿದರು.
ಕೋವಿಡ್ ವೇಳೆಯಲ್ಲಿ ನಮ್ಮ ಎರಡೂ ಅವಳಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ರಕ್ಷಣಾಧಿಕಾರಿಗಳು ಶ್ರಮಿಸಿದರು. ಚಿತ್ರದುರ್ಗ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಕೋವಿಡ್ ಇರುವಂತೆ ನೋಡಿಕೊಂಡವರು ಕವಿತಾ ಎಸ್. ಮನ್ನಿಕೇರಿಯವರು. ಬ್ಯಾಡಗಿಯಲ್ಲಿ 40 ಕೋವಿಡ್ ರೋಗಿಗಳಿಗೆ ತಕ್ಷಣ ಜಂಬೋ ಸಿಲಿಂಡರ್ ಒದಗಿಸಿದರು. ಈ ಎಲ್ಲಾ ಕಾರ್ಯ ವನ್ನು ನಾವು ಶಾಂತಿವನದಲ್ಲಿದ್ದುಕೊಂಡೇ ನಿರ್ವಹಿ ಸಿದೆವು. ಇದಕ್ಕೆ ಎಲ್ಲರೂ ಸ್ಪಂದಿಸಿರುವುದಕ್ಕೆ ಅವ ರಿಗೆ ಅಭಿನಂದಿಸುತ್ತೇವೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ, ಸಂಸ್ಕಾರ ನೀಡುವಂತಹ ಕಾರ್ಯಕ್ರಮವೆಂದರೆ ತರಳಬಾಳು ಹುಣ್ಣಿಮೆ ಕಾರ್ಯಕ್ರಮ ಎಂದು ಶ್ಲ್ಯಾಘಿಸಿದರು.
ರೈತರ ಪರ ಕಾಳಜಿಗೆ ಒತ್ತು ನೀಡಿದ್ದ ಸ್ವಾಮೀಜಿ ಅವರು, ಕೆರೆಗಳನ್ನು ತುಂಬಿಸಲು ರಾಜ್ಯ ಸರ್ಕಾರದಲ್ಲಿ ಹಮ್ಮಿಕೊಂಡಿರುವ ಕಾರ್ಯಗಳಿಗೆ ಒತ್ತು ನೀಡಿದ್ದರು. ಈ ರಾಜ್ಯಕ್ಕೆ ಕೆರೆಗಳನ್ನು ಅಭಿವೃದ್ಧಿ ಮಾಡಲು ಶ್ರೀಗಳವರು ಮಾರ್ಗದರ್ಶನ ನೀಡಿದ್ದಾರೆ ಎಂದರು.
ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡುತ್ತಾ, ಮೊಬೈಲ್ ಬಳಕೆ ಒಂದು ರೋಗವಾಗುತ್ತಿದೆ. ಹೆತ್ತವರು ಮಕ್ಕಳಿಗೆ ಹೆಚ್ಚು ಮೊತ್ತದ ಮೊಬೈಲ್ಗಳನ್ನು ಕೊಡಿಸುವ ಮೂಲಕ ಮಕ್ಕಳನ್ನು ಹಾಳು ಮಾಡುತ್ತಿದ್ದೇವೆ ಎಂಬುದನ್ನೂ ಅರಿಯಬೇಕು. ನೀವು ಕೊಡಿಸಿದ ಮೊಬೈಲ್ಗಳು ಯಾವುದಕ್ಕೆ ಉಪಯೋಗ ವಾಗು ತ್ತಿವೆ ಎಂಬುದನ್ನೂ ಗಮನಿಸಬೇಕು ಎಂದರು.
ಮಾಜಿ ಶಾಸಕ ಎಚ್.ಆಂಜನೇಯ, ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ವಿಧಾನ ಪರಿಷತ್ ಶಾಸಕ ಎನ್.ನವೀನ್ಕುಮಾರ್, ದಾವಣಗೆರೆ ಎಸ್ಪಿ ರಿಷ್ಯಂತ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ದಾವಣಗೆರೆ ಶ್ರೀಗುರು ಪಂಚಾಕ್ಷರಿ ಸಂಗೀತ ವಿದ್ಯಾಲಯ ತಂಡದವರು ವಚನ ಗೀತೆ, ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ ಸ್ವಾಗತಿಸಿದರು. ರಾಜಶೇಖರಯ್ಯ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ, ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಉದ್ಘಾಟನೆಯ ನಂತರ ನಾಡಗೀತೆ ಗೌರವ ಸೂಚಿಸಲಾಯಿತು. ಬೇಲೂರು ನೃತ್ಯಾಂಜಲಿ ಕಲಾನಿಕೇತನ ಅವರಿಂದ ಭರತನಾಟ್ಯಂ, ಕುಮು ಟದ ನಾಗರಾಜ್ ಮತ್ತು ತಂಡದಿಂದ ಯಕ್ಷಗಾನ, ಕಲರ್ಸ್ ಕನ್ನಡ ವಾಹಿನಿ ಸೂರ್ಯಕಾಂತ್ ಅವರಿಂದ ಗೀತಗಾಯನ ನಡೆಯಿತು. ತರಳ ಬಾಳು ಕಲಾ ಸಂಘ ವಿದ್ಯಾಸಂಸ್ಥೆಯ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಮಲ್ಲಕಂಬ, ಜಡೆ ಕೋಲಾಟ, ಲಂಬಾಣಿ ನೃತ್ಯ, ವಚನ ನೃತ್ಯ, ಜಾನಪದ ನೃತ್ಯ, ಒನಕೆ ಓಬವ್ವ, ಕೀಲು ಕುದುರೆ ಗಾರುಡಿ ಗೊಂಬೆ, ಡೊಳ್ಳು ಕುಣಿತ ಪ್ರದರ್ಶಿಸಿದರು.