ಹರಪನಹಳ್ಳಿ : ಅಖಿಲ ಭಾರತ ಕಿಸಾನ್ ಸಭಾ ಪ್ರತಿಭಟನೆ
ಹರಪನಹಳ್ಳಿ, ಫೆ.14- ಹೋಬಳಿ ಕೇಂದ್ರ ಸ್ಥಾನದಲ್ಲಿಯೇ ಸರ್ಕಾರ ಖರೀದಿ ಆರಂಭಿಸುವುದು ಸೇರಿದಂತೆ, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಸಂಘಟನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆಯ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘ ಟನೆಯ ಮುಖಂಡ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಪ್ರೊ.ನಂಜುಂಡಪ್ಪ ಅವರು ಸಲ್ಲಿಸಿರುವ ಪ್ರಾದೇಶಿಕ ಅಸಮತೋಲನದ ವರದಿಯಲ್ಲಿ ಹರಪನಹಳ್ಳಿ ತಾಲ್ಲೂಕು ಅತ್ಯಂತ ಹಿಂದುಳಿದ ಪ್ರದೇಶಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಸಣ್ಣ ಹಾಗೂ ಅತಿಸಣ್ಣ ರೈತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ, ಅತಿ ಹೆಚ್ಚು ಹಿಂದುಳಿದ ಸಮುದಾಯವೇ ಇಲ್ಲಿ ವಾಸಿಸುತ್ತಿದ್ದು, ತಾಲ್ಲೂಕಿನಲ್ಲಿ ಆಗಾಗ್ಗೆ ಸಂಭವಿ ಸುವ ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಕಡು ಶಾಪಕ್ಕೆ ತುತ್ತಾಗುವ ಮೂಲಕ ಇಲ್ಲಿನ ರೈತರ ಬದುಕು ಅತ್ಯಂತ ನಿಕೃಷ್ಟಕ್ಕೆ ಸಿಲುಕಿದೆ ಎಂದರು. ಬರದ ತಾಲ್ಲೂಕಿನ ರೈತರ ಬದುಕನ್ನು ಹಸನು ಮಾಡುವ ಒಂದೇ ಒಂದು ನಿಶ್ಚಿತ ಯೋಜನೆಗಳನ್ನು ಆಳುವ ಜನಪ್ರತಿನಿಧಿ ಗಳು ಮಾಡಲು ಮುಂದಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದು ಹರಿಹಾಯ್ದರು.
ಸಂಘಟನೆಯ ಅಂಗ ಸಂಘಟನೆ ಅಖಿಲ ಭಾರತ ಯುವಜನ ಫೆಡರೇಷನ್ (ಎಐ ವೈಎಫ್) ರಾಜ್ಯಮಂಡಳಿ ಕಾರ್ಯದರ್ಶಿ ಎಚ್.ಎಂ. ಸಂತೋಷ್ ಮಾತನಾಡಿ, ಉಳುಮೆ ಮಾಡಿಕೊಂಡಿರುವ ರೈತರಿಗೆ ಮೊದಲ ಆದ್ಯತೆ ನೀಡುವ ಮೂಲಕ, ಅವರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿದರು.
ತಾಲ್ಲೂಕಿನ ಅರಸೀಕೆರೆ, ಬೆಣ್ಣಿಹಳ್ಳಿ, ತೆಲಿಗಿ ಹಾಗೂ ಹಲುವಾಗಲು ಗ್ರಾಮಗಳಲ್ಲಿ ಎಲ್ಲಾ ವಾಣಿಜ್ಯ ಬೆಳೆಗಳ ಖರೀದಿ ಕೇಂದ್ರ ಆರಂಭಿಸಬೇಕು. ಅಕ್ರಮ- ಸಕ್ರಮ ಸಮಿತಿ ಮುಂದೆ ವಿಲೇವಾರಿಗಾಗಿ ಕಾಯುತ್ತಿರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ, ಫಲಾನುಭವಿ ರೈತರಿಗೆ ಹಕ್ಕುಪತ್ರ ವಿತರಿಸ ಬೇಕೆನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿದ ಮನವಿಯನ್ನು ತಹಶೀಲ್ದಾರ್ ಮುಖಾಂತರ ಪ್ರತಿಭಟನಾ ಕಾರರು ಮುಖ್ಯಮಂತ್ರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಹೊಸಳ್ಳಿ ಮಲ್ಲೇಶ್, ದಾದಾಪೀರ್, ಹನುಮಂತಪ್ಪ, ರಂಗಪ್ಪ, ಬಳಿಗಾನೂರು ಕೊಟ್ರೇಶ್, ರಾಜಶೇಖರ್, ಎಸ್. ಅರುಣಕುಮಾರ್, ಬಸವರಾಜಪ್ಪ, ಮಂಜಪ್ಪ, ಜಿ. ನಾಗರಾಜ, ಎಚ್. ರಾಮಪ್ಪ, ಅಂಜಿನಪ್ಪ, ಕರಿಯಪ್ಪ, ಮಲ್ಲೇಶಪ್ಪ, ಭೀಮಪ್ಪ, ಪರಶುರಾಮ, ದುರುಗಪ್ಪ, ಬಸವರಾಜಪ್ಪ, ಆನಂದ, ಎನ್. ಕರಿಬಸಯ್ಯ, ಗೋಣೆಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.