ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮೇಯರ್ ಎಸ್.ಟಿ. ವೀರೇಶ್
ದಾವಣಗೆರೆ, ಫೆ. 11- ಮಹಾನಗರ ಪಾಲಿಕೆಯಿಂದ ಡೋರ್ ನಂಬರ್ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಕರಡು ನಕ್ಷೆ ತಯಾರಿಸುವ ಸಂದರ್ಭದಲ್ಲಿಯೇ ಸ್ಥಳೀಯ ಸದಸ್ಯರ ಗಮನಕ್ಕೆ ತಂದು ಅಂತಿಮಗೊಳಿಸಲು ಎಂಜಿನಿಯರ್‌ಗಳಿಗೆ ಸೂಚಿಸಲಾಗುವುದು ಎಂದು ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಹೇಳಿದರು.
ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ನೀಡಲಾಗಿರುವ ಡೋರ್ ನಂಬರ್ ಸಮಸ್ಯೆಗಳನ್ನು ಬಗೆಹರಿ ಸಲು ಹಾಗೂ ಮುಂದೆ ಸಮಸ್ಯೆಗಳು ಎದುರಾಗ ದಂತೆ ಕ್ರಮ ವಹಿಸಲು ಶೀಘ್ರವೇ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.
ಪಾಲಿಕೆ ಜಾಗಕ್ಕೆ ಬೇಲಿ ಹಾಕಲು ಟೆಂಡರ್: ಒತ್ತುವರಿಯಾಗಿರುವ ಪಾಲಿಕೆ ಜಾಗವನ್ನು ಸರ್ವೇ ಮಾಡಿ ಬೇಲಿ ಹಾಕಲು ಟೆಂಡರ್ ಕರೆಯಲಾಗಿದೆ. ಶೀಘ್ರವೇ ಕಾರ್ಯಾದೇಶ ನೀಡಲಾಗು ವುದು. ಯಾವುದೇ ವಾರ್ಡುಗ ಳಲ್ಲಿ ಒತ್ತು ವರಿಯಾಗಿರುವುದು ತಿಳಿದು ಬಂದರೆ ನಮ್ಮ ಗಮನಕ್ಕೆ ತರುವಂತೆ ಮೇಯರ್ ವೀರೇಶ್ ಸದಸ್ಯರಿಗೆ ಹೇಳಿದರು.
ಸದಸ್ಯ ಚಮನ್ ಸಾಬ್, ಹಳೆ ಭಾಗದಲ್ಲಿ ರಾಜಕಾಲುವೆ ಹಾಗೂ ಬಫರ್ ಜೋನ್‌ಗಳು ಒತ್ತುವರಿಯಾಗಿವೆ ಎಂದು ಆರೋಪಿಸಿದರು. ಇದಕ್ಕೆ ದನಿ ಗೂಡಿಸಿದ ಸದಸ್ಯ ಉಮಾ ಪ್ರಕಾಶ್, ನನ್ನ ವಾರ್ಡ್‌ನಲ್ಲೂ ಆಟದ ಮೈದಾನ ಒತ್ತುವರಿ ಮಾಡಲಾಗಿದೆ. ಈ ವಿಷಯಕ್ಕೆ ನಾನೇ 50 ಲಕ್ಷ ರೂ. ಲಂಚ ಪಡೆದಿದ್ದೇನೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಶೀಘ್ರವೇ ಒತ್ತುವವರಿ ಜಾಗ ಸಂರಕ್ಷಿಸುವಂತೆ ಹೇಳಿದಾಗ ಮೇಯರ್ ಮೇಲಿನಂತೆ ಉತ್ತರಿಸಿದರು.
ಟೆಂಡರ್ ಪಾಲಿಕೆಗೆ ಹೊರೆ : ಸಾರ್ವಜನಿಕ ರುದ್ರಭೂಮಿಯಲ್ಲಿ ಗುಂಡಿ ತೋಡಲು ಒಂದು ವರ್ಷಕ್ಕೆ 18 ಲಕ್ಷ ರೂ.ಗಳಿಗೆ ಟೆಂಡರ್ ನೀಡಲಾಗಿದೆ. ಇದರ ಬದಲು ಪಾಲಿಕೆಯಿಂದಲೇ ಐವರು ಹೊರಗುತ್ತಿಗೆ ಕೆಲಸಗಾರರನ್ನು ನೇಮಿಸಿಕೊಳ್ಳಬಹುದು. ಅವರಿಗೆ ಪ್ರತಿ ತಿಂಗಳು 15 ಸಾವಿರ ರೂ. ನೀಡಿದರೂ 10 ಲಕ್ಷ ರೂ.ಗಳು ಪಾಲಿಕೆಗೆ ಉಳಿಯು ತ್ತದೆ ಎಂದು ವಿಪಕ್ಷ ನಾಯಕ ಎ.ನಾಗರಾಜ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಗುಂಡಿ ತೆಗೆಯಲು ಸಾರ್ವಜನಿಕರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆಂಬ ದೂರುಗಳು ಹೆಚ್ಚಾದ ಕಾರಣ ಉಚಿತವಾಗಿ ಅಂತ್ಯಕ್ರಿಯೆ ನೆರವೇರಿಸಲು ಖಾಸಗಿ ಏಜೆನ್ಸಿಗೆ ಗುತ್ತಿಗೆ ನೀಡಲಾಗಿದೆ. ಈಗಾಗಲೇ 1 ವರ್ಷಕ್ಕೆ ಟೆಂಡರ್ ನೀಡಲಾಗಿದ್ದು, ಸಾಧಕ-ಬಾಧಕ ನೋಡಿಕೊಂಡು ಮುಂದಿನ ವರ್ಷ ಬದಲಾವಣೆಯ ತೀರ್ಮಾನ ಕೈಗೊಳ್ಳೋಣ ಎಂದರು.
ವಸತಿ ಜಾಗ ವಾಣಿಜ್ಯಕ್ಕೆ ಬಳಕೆ: ಪ್ರತಿಷ್ಠಿತ ಬಡಾವಣೆಗಳಲ್ಲಿ ವಸತಿ ಜಾಗಗಳನ್ನು ವಾಣಿಜ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಇದಕ್ಕೆ ಅನುಮತಿ ನೀಡಿರುವ ಅಧಿಕಾರಿಗಳನ್ನು ಪ್ರಶ್ನಿಸಿದರೆ ನಮಗೆ ಬೆಲೆ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಸದಸ್ಯ ಗಡಿಗುಡಾಳ್ ಮಂಜುನಾಥ್ ಆರೋಪಿಸಿದರು. ವಸತಿ ಪ್ರದೇಶದಲ್ಲಿ ವಾಣಿಜ್ಯ ಕಾರ್ಯಕ್ಕೆ ಅನುಮತಿ ನೀಡುವಾಗ ಆಯಾ ಸದಸ್ಯರ ಗಮನಕ್ಕೆ ತಂದು ಅನುಮತಿ ನೀಡುವಂತೆ ಮೇಯರ್ ಅಧಿಕಾರಿಗಳಿಗೆ ಸೂಚಿಸಿದರು.
ಎಲ್ಲಾ ಧರ್ಮದವರಿಗೂ ಹಣ ಕೊಡಬೇಕಾಗುತ್ತದೆ: ಈ ಹಿಂದೆ ದಸರಾ ಮಹೋತ್ಸವಕ್ಕೆ 3 ಲಕ್ಷ ನೀಡಿದಾಗ ಆಡಿಟ್‌ನಲ್ಲಿ ಆಕ್ಷೇಪಿಸಲಾಗಿತ್ತು. ಆದಾಗ್ಯೂ ಮತ್ತೆ 4 ಲಕ್ಷ ರೂ.ನೀಡಲಾಗಿದೆ ಎಂದು ಎ.ನಾಗರಾಜ್ ಅಕ್ಷೇಪಿಸಿದರು. ದಸರಾ ನಾಡಹಬ್ಬವಾಗಿರುವುದರಿಂದ ಹಣ ನೀಡಲಾಗಿದೆ. ಕಳೆದ ಬಾರಿ ಸರ್ಕಾರದಿಂದ ಅನುಮತಿ ಪಡೆದಿರಲಿಲ್ಲ. ಈ ಬಾರಿ ಸರ್ಕಾರದಿಂದ ಘಟನೋತ್ತರ ಅನುಮತಿಗೆ ಕಳುಹಿಸಲಾಗಿದೆ ಎಂದು ಮೇಯರ್ ಹೇಳಿದರು.
ಮುಂದೆ ಎಲ್ಲಾ ಧರ್ಮದವರಿಗೂ ಹಣ ಕೊಡಬೇಕಾಗುತ್ತದೆ ಎಂದು ನಾಗರಾಜ್ ಹೇಳಿದರು. ಆಡಿಟ್ ಆಕ್ಷೇಪಣೆಯಾದರೆ ನಮ್ಮನ್ನು ಪಾಲುದಾರರನ್ನಾಗಿ ಮಾಡಬೇಡಿ ಎಂದು ಚಮನ್ ಸಾಬ್ ಹೇಳಿದರು.
ಚರ್ಚೆಗಳೇ ಬೇರೆ, ದಾಖಲಾಗುವುದೇ ಬೇರೆ
ಸಭೆಯಲ್ಲಿ ನಡೆಯುವ ಚರ್ಚೆಗಳೇ ಬೇರೆ. ದಾಖಲಿಸಿಕೊಳ್ಳುವುದೇ ಬೇರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ವಿಪಕ್ಷ ನಾಯಕ ಎ.ನಾಗರಾಜ್, ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆಗಳು ನಡೆದು ಮೇಯರ್ ಉತ್ತರಿಸುತ್ತಿದ್ದಾಗ `ಈ ಬಗ್ಗೆ ಸ್ಪಷ್ಟ ನಿರ್ಧಾರ ದಾಖಲಿಸಿ (ರೂಲಿಂಗ್ ಹೇಳಿ)’ ರೆಕಾರ್ಡ್ ಮಾಡಿಸಿ ಎಂದು ಹೇಳುತ್ತಿದ್ದರು.
33 ಕೋಟಿ ರೂ. ತೆರಿಗೆ ಗುರಿ
2021-22ನೇ ಸಾಲಿನಲ್ಲಿ 33 ಕೋಟಿ ರೂ. ತೆರಿಗೆ ಗುರಿ ಹೊಂದಲಾ ಗಿದ್ದು, ಜನವರಿ ಅಂತ್ಯಕ್ಕೆ 24 ಕೋಟಿ ರೂ. ವಸೂಲಿ ಮಾಡಲಾಗಿದೆ. ಶೇ.74ರಷ್ಟು ತೆರಿಗೆ ವಸೂಲಿಯಾಗಿದ್ದು, ವಾರ್ಡುಗಳಲ್ಲಿ ಆಂದೋಲನ ನಡೆಸಿ ಶೇ.95ರಷ್ಟು ಗುರಿ ಸಾಧಿಸಲಾಗುವುದು ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಹೇಳಿದರು.
ಪತ್ರಿಕೆಯವರಿದ್ದಾಗಲೇ ಚರ್ಚೆಯಾಗಲಿ
ವಾರ್ಡ್ಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ಬಗ್ಗೆ ಸದಸ್ಯರು ಚರ್ಚಿಸುವುದಿಲ್ಲ ಎಂದು ಜನರು ನಮ್ಮನ್ನು ಬೈಯ್ಯುತ್ತಾರೆ. ಆದ್ದರಿಂದ ಪತ್ರಿಕೆಯವರು ಇರುವಾಗಲೇ ಆರಂಭದ ಒಂದು ತಾಸು ಎಲ್ಲಾ ವಾರ್ಡುಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅನುಮತಿ ನೀಡುವಂತೆ ಸದಸ್ಯ ಚಮನ್ ಸಾಬ್ ಮನವಿ ಮಾಡಿದರು. ಎ.ನಾಗರಾಜ್ ಸೇರಿದಂತೆ ಹಲವು ಸದಸ್ಯರು ಇದಕ್ಕೆ ದನಿಗೂಡಿಸಿದರು. ನಗರದ ನಲವತ್ತೈದೂ ವಾರ್ಡ್ ಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ. ಆದರೆ ನಡಾವಳಿಗಳಂತೆ ಸಭೆ ನಡೆಯಲಿ. ನಂತರ ಚರ್ಚಿಸೋಣ ಎಂದು ಮೇಯರ್ ವೀರೇಶ್ ಹೇಳಿದರು.
ಸಭೆ ನಡೆಸಬಹುದಾ?
ಮೇಯರ್-ಉಪಮೇಯರ್ ಚುನಾವಣೆಯ ನೀತಿ ಸಂಹಿತೆ ಇರುವ ವೇಳೆ ಸಾಮಾನ್ಯ ಸಭೆ ನಡೆಸಲು ಅನುಮತಿ ಇದೆಯೇ ? ಎಂದು ಆರಂಭದಲ್ಲಿ ವಿಪಕ್ಷ ನಾಯಕ ಎ.ನಾಗರಾಜ್ ಪ್ರಶ್ನಿಸಿದರು.
ಕಳೆದ ಬಾರಿಯೂ ನೀತಿ ಸಂಹಿತೆ ಇದ್ದಾಗ ಮನವಿ ನೀಡಿದ್ದರಿಂದ ಸಭೆ ಮುಂದೂಡಲಾಗಿತ್ತು. ಈ ಬಾರಿಯೂ ಆಯುಕ್ತರಿಗೆ ಮನವಿ ಮಾಡಿದ್ದೆವು. ಆದರೆ ಆಯುಕ್ತರು ಉತ್ತರಿಸಲಿಲ್ಲ. ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಹಾಗೂ ಸರ್ಕಾರದಿಂದ ಅನುಮತಿ ನೀಡಲಾಗಿದೆಯೇ? ಎಂದರು.
ಸಭೆ ನಡೆಸಲು ನೀತಿ ಸಂಹಿತೆ ಅಡ್ಡಿಯಾಗದು ಎಂದು ಆಯುಕ್ತ ವಿಶ್ವನಾಥ ಮುದಜ್ಜಿ ಸ್ಪಷ್ಟಪಡಿ ಸುತ್ತಾ, ಈ ಬಗ್ಗೆ ಪ್ರಾದೇಶಿಕ ಆಯುಕ್ತರ ಕಚೇರಿಗೆ ಪತ್ರ ಬರೆಯ ಲಾಗಿತ್ತು. ಈ ವಿಷಯ ನಮ್ಮ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ಸರ್ಕಾರದ ಹಂತದಲ್ಲಿ ನಿರ್ದೇಶನ ಪಡೆಯುವಂತೆ ಆಯುಕ್ತರ ಕಚೇರಿಯಿಂದ ಉತ್ತರ ಬಂದಿದೆ ಎಂದು ಹೇಳಿದರು.
ಪ್ರಾದೇಶಿಕ ಆಯುಕ್ತರು ಸರ್ಕಾರದ ಮಟ್ಟದಲ್ಲಿ ನಿರ್ದೇಶನ ಪಡೆಯುವಂತೆ ಹೇಳಿ ವರ್ಷವಾದರೂ ಏಕೆ ಮುಂದಿನ ಕ್ರಮ ಕೈಗೊಂಡಿಲ್ಲ ? ಎಂದು ಸದಸ್ಯ ಚಮನ್ ಸಾಬ್ ಪ್ರಶ್ನಿಸಿದರು.
ಸಭೆ ಇರುವ ಬಗ್ಗೆ ಪತ್ರಿಕೆಗಳನ್ನು ನೋಡಿ ತಿಳಿದಿದೆ. 7 ದಿನದ ಮೊದಲೇ ನೋಟಿಸ್ ನೀಡುವ ಸೌಜನ್ಯ ಅಧಿಕಾರಿಗಳಿಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಂದೆ ಈ ರೀತಿಯಾಗದಂತೆ ಉಪ ಕಾರ್ಯದರ್ಶಿಗಳು ಉತ್ತರಿಸಿದರು. ಇದೇ ವೇಳೆ ಸಭೆಗೆ ಬಾರದ ಅಧಿಕಾರಿಗಳಿಗೆ ನೊಟೀಸ್ ನೀಡುವಂತೆ ಮೇಯರ್ ಸೂಚಿಸಿದರು.
ಬೇಕಾದರೆ ನ್ಯಾಯಾಲಯಕ್ಕೆ ಹೋಗಲಿ: ನಿಟುವಳ್ಳಿಯಲ್ಲಿ ಹೈಟೆನ್ಷನ್ ತಂತಿಯ ಕೆಳಗಿನ ಬಫರ್ ಝೋನ್‌ನಲ್ಲಿ ನಿರ್ಮಿಸಿರುವ ಬಡಾವಣೆಯಲ್ಲಿ ಡೋರ್ ನಂಬರ್ ನೀಡುವ ವಿಷಯ ಸಭೆಯಲ್ಲಿ ಮತ್ತೆ ಚರ್ಚೆಗೆ ಬಂತು.
ನಗರ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ಪ್ರಕಾಶ್, ಮೂರ್ನಾಲ್ಕು ಬಾರಿ ಚರ್ಚಿಸಿದರೂ ಪರಿಹಾರ ಸಿಕ್ಕಿಲ್ಲ. ಯಾವ ಕಾರಣಕ್ಕೂ ಅಲ್ಲಿ ಡೋರ್ ನಂಬರ್ ಕೊಡಬಾರದು ಎಂದು ಹೇಳಿದರು.
ಪಾಲಿಕೆ ಸಭೆಯಲ್ಲಿ ಚರ್ಚಿಸಿ ದೂಡಾಕ್ಕೆ ಪತ್ರ ಬರೆದಿದ್ದೆವು. ಅಲ್ಲಿ ನಿಯಮವಾಸುರಾರ ಇದೆ ಎಂದು ಪತ್ರ ಬರೆದಿದ್ದಾರೆ ಎಂದು ಆಯುಕ್ತರು ಉತ್ತರಿಸಿದರು.
ನಿಯಮಾನುಸಾರ ಎಂದರೆ ಜಾಗ ಮಾಲೀಕರದ್ದೋ ಅಥವಾ ಸರ್ಕಾರಕ್ಕೆ ಸೇರಿದ್ದೋ ಎಂದು ಉಮಾ ಪ್ರಕಾಶ್ ಪ್ರಶ್ನಿಸಿದರು. ನಂತರ ಮಾತನಾಡಿದ ಚಮನ್ ಸಾಬ್, ಮೇಯರ್, ಸ್ಥಾಯಿ ಸಮಿತಿ ಅಧ್ಯಕ್ಷರು, ಸ್ಥಳೀಯ ಸದಸ್ಯರು ಸ್ಥಳ ಪರಿಶೀಲಿಸಲಿ. ಸರಿ ಇದ್ದರೆ ಡೋರ್ ನಂಬರ್ ನೀಡಲಿ . ಇಲ್ಲದಿದ್ದರೆ ತಡೆ ಹಿಡಿಯಿರಿ. ಅವರು ಬೇಕಾದರೆ ನ್ಯಾಯಾಲಯಕ್ಕೆ ಹೋಗಲಿ ಎಂದರು. ಎ.ನಾಗರಾಜ್ ದನಿಗೂಡಿಸಿದರು.
ಸದಸ್ಯ ಪ್ರಸನ್ನಕುಮಾರ್, ‘ಬಡಾವಣೆಯ ಡ್ರಾಫ್ಟ್ ಪ್ಲಾನ್ ಅನ್ನು ಅರ್ಜಿದಾರರಿಗೆ ನೀಡುವ ಮೊದಲು ದೂಡಾ ಪಾಲಿಕೆಯ ಗಮನಕ್ಕೂ ತರಬೇಕು. ಪಾಲಿಕೆಯ ಅಧಿಕಾರಿಗಳು, ಸ್ಥಳೀಯ ಸದಸ್ಯರು ಪರಿಶೀಲಿಸಿದ ಬಳಿಕವೇ ಅರ್ಜಿದಾರರಿಗೆ ನೀಡುವ ವ್ಯವಸ್ಥೆ ಜಾರಿಗೆ ಬಂದರೆ ಇಂತಹ ಸಮಸ್ಯೆ ಉದ್ಭವಿಸುವುದಿಲ್ಲ’ ಎಂದರು.
ಮೇಯರ್ ವೀರೇಶ್ ಮಾತನಾಡಿ, ಈ ಬಗ್ಗೆ ದೂಡಾ ಅಧ್ಯಕ್ಷರು, ಆಯುಕ್ತರು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮೂಲ ಸೌಲಭ್ಯಗಳಿಲ್ಲದಿದ್ದರೂ ಮನೆ ಕಟ್ಟಿ ನಂತರ ಸೌಲಭ್ಯ ಕೇಳುತ್ತಾರೆ. ನೀವು ಅನುದಾನ ನೀಡುವುದಿಲ್ಲ. ಆದ್ದರಿಂದ ಎಲ್ಲಾ ಸರಿ ಆದ ಮೇಲೆಯೇ ಡೋರ್ ನಂಬರ್ ನೀಡಿ ಎಂದು ಸದಸ್ಯ ಉದಯಕುಮಾರ್ ಹೇಳಿದರು.
ಸ್ಥಾಯಿ ಸಮಿತಿ ಅಧ್ಯಕ್ಷರ ವಾಹನ ಖರ್ಚಿಗೆ ವಿರೋಧ: ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ವಾಹನ ನೀಡದಂತೆ ಸರ್ಕಾರದ ಆದೇಶವಿದ್ದರೂ ವಾಹನ ನೀಡಿರುವುದಕ್ಕೆ ಎ.ನಾಗರಾಜ್ ಆಕ್ಷೇಪಿಸಿದರು. ಸರ್ಕಾರದ ಆದೇಶದಂತೆ ವಾಹನ ಹಿಂಪಡೆಯಲಾಗಿದ್ದು, ಅನುಮತಿಗಾಗಿ ಪತ್ರ ಬರೆಯಲಾಗಿದೆ ಎಂದು ಆಯುಕ್ತರು ಉತ್ತರಿಸಿದರು.
ಇದುವರೆಗೆ ಸ್ಥಾಯಿ ಸಮಿತಿ ಅಧ್ಯಕ್ಷರ ವಾಹನಕ್ಕೆ ಸಂಬಂಧಿಸಿದಂತೆ 3 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದಾಗ, ಇದಕ್ಕೆ ನಮ್ಮ ವಿರೋಧವಿದೆ. ರೆಕಾರ್ಡ್ ಮಾಡಿಕೊಳ್ಳಿ ಎಂದು ನಾಗರಾಜ್ ಹೇಳಿದರು.
60 ಲಕ್ಷ ಜಕಾತಿ ಬಾಕಿ: ಜಕಾತಿ ವಸೂಲಿ ಮಾಡುವ ಗುತ್ತಿಗೆ ಪಡೆದ ವ್ಯಕ್ತಿ 60 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದಾರೆ. ಅಲ್ಲದೇ ಅವರು ಅಡವಿಟ್ಟಿರುವ ಮನೆಯನ್ನು ಈಗಾಗಲೇ ಬೇರೆಯವರಿಗೆ ಮಾರಾಟ ಮಾಡಲಾಗಿದೆ ಎಂದು ಸದಸ್ಯ ಉದಯ ಕುಮಾರ್ ಹೇಳಿದರು.
ಜಕಾತಿ ಟೆಂಡರ್‌ಗೆ 1 ಲಕ್ಷ ರೂ. ಬದಲು 10 ಲಕ್ಷ ರೂ. ಠೇವಣಿ ನಿಗದಿಪಡಿಸಿರುವುದು ಸರಿಯಲ್ಲ. ಇದರಿಂದ ಅನೇಕರು ಟೆಂಡರ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದರು.
ಕಳೆದ ಬಾರಿ ಜಕಾತಿ ವಸೂಲಿ ಗುತ್ತಿಗೆ ಪಡೆದವರು ಹಣ ಪಾವತಿಸದ ಕಾರಣ ಆತನ ಮನೆಯನ್ನು ಅಡಮಾನ ಇಟ್ಟುಕೊಳ್ಳಲಾಗಿತ್ತು. ಆದ್ದರಿಂದ ಟೆಂಡರ್ ಠೇವಣಿ ಹೆಚ್ಚಿಸಲಾಗಿದೆ ಎಂದು ಆಯುಕ್ತರು ಉತ್ತರಿಸಿದರು.
ಸಭೆಯಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್, ಪಾಲಿಕೆ ಉಪ ಮೇಯರ್ ಹೆಚ್.ಆರ್ ಶಿಲ್ಪಾ, ಸ್ಥಾಯಿ ಸಮಿತಿ ಸದಸ್ಯರುಗಳಾದ ಎಲ್.ಡಿ. ಗೋಣೆಪ್ಪ, ಗೀತಾ ದಿಳ್ಯೆಪ್ಪ, ಉಮಾ ಪ್ರಕಾಶ್, ರೇಣುಕಾ ಶ್ರೀನಿವಾಸ್ ಸೇರಿದಂತೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.