ನೀಲಗುಂದ ಗುಡ್ಡದ ವಿರಕ್ತ ಮಠದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮೀಜಿ
ದಾವಣಗೆರೆ, ಫೆ. 11 – ಕೈಲಾಸ ಹಾಗೂ ದೇವಸ್ಥಾನಕ್ಕಿಂತ ಕಾಯಕ ದೊಡ್ಡದು. ಒಳ್ಳೆಯ ಗುಣ, ಸಚ್ಚಾರಿತ್ರ್ಯ ಹಾಗೂ ಮೌಲ್ಯ ಗುಣಗಳನ್ನು ಬೆಳೆಸಿಕೊಳ್ಳುವುದರಿಂದ ದೈವತ್ವ ಪಡೆಯಬಹುದು ಎಂದು ಹರಪಹನಳ್ಳಿಯ ನೀಲಗುಂದ ಗುಡ್ಡದ ವಿರಕ್ತ ಮಠದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಮಹಾಲಕ್ಷ್ಮಿ ಲೇಔಟ್ನಲ್ಲಿ ಶ್ರೀ ಗುರು ಬಾಲ ಶನೈಶ್ವರಸ್ವಾಮಿ ದೇವಾಲಯದಲ್ಲಿ ಇಂದು ಏರ್ಪಾಡಾಗಿದ್ದ ದೇವರುಗಳ ಸ್ಥಿರಬಿಂಬ ಪ್ರತಿಷ್ಠಾ ಪನೆ, ಕಲಶ ಸ್ಥಾಪನೆ ಹಾಗೂ ಮಹಾಕುಂಭಾಭಿಷೇಕ ಕಾರ್ಯಕ್ರಮದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ, ಅವರು ಮಾತನಾಡುತ್ತಿದ್ದರು.
ಶಿಲೆಯನ್ನು ಕಡೆದು ಮೂರ್ತಿ ಮಾಡಬಹುದು. ಆದರೆ, ಮನುಷ್ಯ ಮಾತ್ರ ಬಸವಾದಿ ಶರಣರು ತಿದ್ದಿದರೂ ಸರಿ ಆಗಿಲ್ಲ. ಮನುಷ್ಯ ಬೆರಕಿ ಅಂತ ಗೊತ್ತಿರುವುದರಿಂದ ದೇವಾನುದೇವತೆಗಳು ಬೇರೆ ಬೇರೆ ಪ್ರಾಣಿಗಳನ್ನು ವಾಹನ ಮಾಡಿಕೊಂಡರೇ ಹೊರತು, ಮನುಷ್ಯನನ್ನು ವಾಹನ ಮಾಡಿಕೊಳ್ಳಲಿಲ್ಲ ಎಂದವರು ಚಟಾಕಿ ಹಾರಿಸಿದರು.
ಮನುಷ್ಯನನ್ನು ತಿದ್ದುವುದು ಅಷ್ಟು ಸುಲಭವಲ್ಲ. ಹೀಗಾಗಿಯೇ ಮನುಷ್ಯನನ್ನು ತಿದ್ದಲು ದೇವಸ್ಥಾನ, ಗುರುಗಳು, ಮಠ ಸೇರಿದಂತೆ ಹಲವಾರು ಸಾಧನಗಳ ಅಗತ್ಯವಿದೆ ಎಂದವರು ಅಭಿಪ್ರಾಯ ಪಟ್ಟರು.
ಶಿವಮೊಗ್ಗದ ಕೋಣಂದೂರು ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಉತ್ತಮ ಕಾರ್ಯ ಮಾಡಿದವರು ಸಂತೋಷವಾಗಿರುತ್ತಾರೆ. ಸಂತೋಷವಾಗಿರುವುದೇ ಸಾಕ್ಷಾತ್ ಈಶ್ವರನ ಪೂಜೆ ಮಾಡಿದಂತೆ ಎಂದು ಹೇಳಿದರು.
ಮನುಷ್ಯ ಇತ್ತೀಚಿನ ವರ್ಷಗಳಲ್ಲಿ ತಂತ್ರ – ಯಂತ್ರಗಳ ಹಿಂದೆ ಓಡುತ್ತಿದ್ದಾನೆ. ಇದರಿಂದಾಗಿ ನೆಮ್ಮದಿ ಮರೆಯಾಗಿದೆ. ಧರ್ಮಾಚರಣೆ ಮಾಡುವವರಿಗೆ ಯಾವತ್ತೂ ದುಃಖ ಇರುವುದಿಲ್ಲ ಎಂದು ಶ್ರೀಗಳು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಮಾಜಿ ಸದಸ್ಯ ಹೆಚ್.ಜಿ. ಉಮೇಶ್ ಜೋಳಿಗೆ ಹಿಡಿದು 95 ಲಕ್ಷ ರೂ. ಸಂಗ್ರಹಿಸಿ, ಈ ದೇವಾಲಯ ನಿರ್ಮಿಸಲಾಗಿದೆ. ಇದು ಜನರಿಗೆ ನೆಮ್ಮದಿ ತರುವ ಸ್ಥಳವಾಗಲಿದೆ. ಇಲ್ಲಿ ಸಮಾರಂಭದ ಕೋಣೆಯೊಂದನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಶ್ರೀ ಶನೈಶ್ವರ ಸ್ವಾಮಿ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ. ಶಾಂತಕುಮಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಟಿ.ಎಂ. ವೀರಭದ್ರಯ್ಯ, ಅಧ್ಯಕ್ಷ ಟಿ.ಎನ್. ನಟ ರಾಜ್, ಸದಸ್ಯ ಅಜ್ಜಂಪುರ ಶೆಟ್ರು ಮೃತ್ಯುಂಜಯ, ಮುಖಂಡರಾದ ವಿಜಯ ಕುಮಾರ್ ಹುಲ್ಮನಿ, ಕೆ.ಎ. ಬಸವರಾಜ, ಬಿ. ನಾಗೇಂದ್ರಚಾರ್ ಬಸಾಪುರ, ರಮೇಶ್, ಜಂಬಣ್ಣ, ಗಣಪ, ಡಿ. ಮಹೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.