ನಿರಂಜನ ನಿರಾಭಾರಿ ಪಟ್ಟಾಧಿಕಾರ ಮಹೋತ್ಸವದಲ್ಲಿ ಶ್ರೀ ಮುರುಘಾ ಶರಣರು
ಚಿತ್ರದುರ್ಗ, ಫೆ. 11 – ಸ್ವಾಮಿಗಳಾದವರು ಶಿವಾನುಭವ, ಲೋಕಾನುಭವ ಮತ್ತು ಸ್ವಾನುಭಾವ ಪಡೆದು ಅಧ್ಯಯನಶೀಲರಾಗಿ ಅಂತರಂಗದ ಸಾಧನೆಯ ಮೂಲಕ ಸಮಾಜಕ್ಕೆ ಧರ್ಮ ಬೋಧನೆಯೊಂದಿಗೆ ಮಾರ್ಗದರ್ಶನ ಮಾಡಬೇಕು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಟಿ.ನರಸೀಪುರ ತಾಲ್ಲೂಕು ಚಿದರವಳ್ಳಿಯ ಶ್ರೀ ಸಿದ್ಧರಹಳ್ಳಿ ಪಾರಮಾರ್ಥ ಗವಿಮಠದಲ್ಲಿ ನಡೆದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳವರಿಗೆ ನಿರಂಜನ ನಿರಾಭಾರಿ ಪಟ್ಟಾಧಿಕಾರ ಮಹೋತ್ಸವದ ದಿವ್ಯಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.
ಧ್ಯಾನ ಮಾಡುವುದರಿಂದ ವ್ಯಾಘ್ರತೆ, ಉದ್ವಿಗ್ನತೆಯನ್ನು ನಿಯಂತ್ರಿಸಬಹುದು. ನಾಲಿಗೆಯ ಮೇಲಿನ ನಿಯಂತ್ರಣ ಕಳೆದುಕೊಂಡಾಗ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಂಘರ್ಷಗಳು ನಡೆಯುತ್ತವೆ.
ಅವುಗಳನ್ನು ನಿಯಂತ್ರಿಸಲು ಪಾರಮಾರ್ಥ ಪ್ರಜ್ಞೆ ಬೇಕು. ಬಸವಾದಿ ಶರಣರು ಸಂಸ್ಕಾರಯುಕ್ತ ಸಮಾಜ, ಸಮ ಸಮಾಜವನ್ನು ಕಟ್ಟಿದರು. ಬಸವ ತತ್ವ ಪಾಲಿಸದವರಿಗೆ ಉಳಿಗಾಲವಿಲ್ಲ.
ಬಸವ ತತ್ವ ಬೋಧನೆ ಮತ್ತು ಆಚರಣೆಯೇ ಸ್ವಾಮಿಗಳ ಕರ್ತವ್ಯವಾಗಬೇಕು. ಎಲ್ಲರನ್ನು ಅಪ್ಪಿಕೊಳ್ಳುವುದೇ ಬಸವ ಪ್ರಜ್ಞೆ. ರಾಜಕಾರಣವು ಧರ್ಮದ ಪ್ರದಕ್ಷಿಣೆ ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶ್ರೀಗಳು ಶ್ರೀ ಸಿದ್ಧರಹಳ್ಳಿ ಮಠದ ಅಭಿವೃದ್ಧಿ ಕಾರ್ಯಗಳಿಗೆ ಹತ್ತು ಲಕ್ಷ ರೂ.ಗಳ ದೇಣಿಗೆ ನೀಡಿದರು.
ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಡಾ. ಮುಮ್ಮಡಿ ಶಿವರುದ್ರ ಸ್ವಾಮಿಗಳು, ಡಾ. ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು, ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು, ಶ್ರೀ ಶಿವಬಸವ ಸ್ವಾಮಿಗಳು, ಶ್ರೀ ಬಸವಪ್ರಭು ಸ್ವಾಮಿಗಳು, ಶ್ರೀ ವಚನಾನಂದ ಸ್ವಾಮಿಗಳು, ಡಾ. ಬಸವಕುಮಾರ ಸ್ವಾಮಿಗಳು, ಡಾ. ಶಾಂತವೀರ ಮಹಾಸ್ವಾಮಿಗಳು, ಶ್ರೀ ವೇಮನಾನಂದ ಸ್ವಾಮಿಗಳು, ಶ್ರೀ ಬಸವ ಮಾಚಿದೇವ ಸ್ವಾಮಿಗಳು, ಮೊದಲಾದ ಹರಗುರು ಚರಮೂರ್ತಿಗಳು, ಶಾಸಕ ಅಶ್ವಿನ್‍ಕುಮಾರ್, ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಮತ್ತಿತರರು ಭಾಗವಹಿಸಿದ್ದರು.