893 ನಿವೇಶನಗಳ ವಿತರಣೆ: ಶಾಸಕ ಎಸ್.ವಿ.ರಾಮಚಂದ್ರ
ಜಗಳೂರು, ಫೆ.10- ಗೃಹ ಮಂಡಳಿ ವತಿಯಿಂದ ಸುಸಜ್ಜಿತ ಬಡಾವಣೆ ನಿರ್ಮಿಸಿ, 893 ನಿವೇಶನಗಳನ್ನು ವಿತರಿಸಲಾಗುವುದು ಎಂದು ಶಾಸಕ ಎಸ್ ವಿ ರಾಮಚಂದ್ರ ತಿಳಿಸಿದರು.
ಪಟ್ಟಣದ ಹೊರವಲಯದ ಅಶ್ವತ್ಥ ರೆಡ್ಡಿ ನಗರದ ಬಳಿ ಗೃಹ ಮಂಡಳಿ ವತಿಯಿಂದ ನಿವೇಶನ ಅಭಿವೃದ್ಧಿ ಪಡಿಸುವ ಜಮೀನಿನ ಜಾಗದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಶಾಸಕರು ಮಾತನಾಡಿದರು.
ನಗರ ಅಭಿವದ್ಧಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಅಶ್ವತ್ ರೆಡ್ಡಿ ನಗರದ ಬಳಿ 94 ಎಕರೆ ಪ್ರದೇಶದಲ್ಲಿ ರೈತರ ಜಮೀನು ಖರೀದಿಸಿ 40:60 ಅನುಪಾತದಲ್ಲಿ ಉತ್ತಮ ನಿವೇಶನ ನಿರ್ಮಾಣ ಮಾಡುವ ಮೂಲಕ ಆಸರೆಯಾಗಿದೆ. ನಿವೇಶನ ಅಭಿವೃದ್ಧಿಪಡಿಸಿ ಅರ್ಜಿ ಹಾಕಿದ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು.
ಈಗಾಗಲೇ 2009ರ ಸಾಲಿನಲ್ಲಿ 900 ಅರ್ಜಿಗಳು ಬಂದಿವೆ. ಮುಂದಿನ ದಿನಗಳಲ್ಲಿ ಲಾಟರಿ ಮೂಲಕ ಆಯ್ಕೆ ಮಾಡುವ ಚಿಂತನೆಯಿದೆ. ಜನತೆಗೆ ನಿವೇಶನದ ಕೊರತೆಯಿದ್ದು, ಅದನ್ನು ನೀಗಿಸಲು ಗೃಹ ಮಂಡಳಿ ವತಿಯಿಂದ ನಿವೇಶನ ಸೌಲಭ್ಯ ಸಹಕಾರಿಯಾಗಿದೆ ಎಂದು ತಿಳಿಸಿದರು.
ಗೃಹ ಮಂಡಳಿ ಕಾರ್ಯಪಾಲಕ ಅಭಿಯಂತರ ಸುಧೀರ್ ನಾಮಧಾರಿ ಮಾತನಾಡಿ, 2009 ರಲ್ಲಿ ಈ ವಸತಿ ನಿವೇಶನದ ಪೂರ್ವ ತಯಾರಿ ಸಮೀಕ್ಷೆ ನಡೆಸಿದ್ದ ಫಲವಾಗಿ ಇದೀಗ ಅಸ್ತಿತ್ವಕ್ಕೆ ಬಂದಿದೆ. ಒಂದು ವರ್ಷಗಳಲ್ಲಿಯೇ ಬಡಾವಣೆ ಅಭಿವೃದ್ಧಿ ಪಡಿಸಲಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಎಸ್.ಸಿದ್ದಪ್ಪ, ಉಪಾಧ್ಯಕ್ಷೆ ಮಂಜಮ್ಮ, ಜಿ.ಪಂ. ಮಾಜಿ ಸದಸ್ಯ ಸೊಕ್ಕೆ ನಾಗರಾಜ್, ಪಿ ಎಸ್ ಐ ಸಂತೋಷ್ ಬಾಗೋಜಿ, ಪ.ಪಂ. ಸದಸ್ಯ ಪಾಪಲಿಂಗಪ್ಪ, ವಕೀಲರಾದ ಹೆಚ್.ಹನುಮಂತಪ್ಪ, ಮುಖಂಡರಾದ ಹಟ್ಟಿ ತಿಪ್ಪೇಸ್ವಾಮಿ, ಭರತ್ ಗ್ಯಾಸ್ ಓಬಪ್ಪ ಇತರರು ಉಪಸ್ಥಿತರಿದ್ದರು.