ಹರಪನಹಳ್ಳಿಯಲ್ಲಿ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು
ಹರಪನಹಳ್ಳಿ, ಫೆ.10- ಭಗವಂತ ಎಲ್ಲರಿಗೂ ಗುರು, ತಾಯಿ, ತಂದೆಯಾಗಿದ್ದಾನೆ ಎಂಬ ಭಾವನೆ ಯಾವಾಗಲು ನಿಮ್ಮಲ್ಲಿ ದೃಢವಾಗಿರಲಿ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಹೇಳಿದರು.
ಪಟ್ಟಣದ ಗುರು ಮಾಧ್ವ ಸೇವಾ ಸಮಿತಿಯಿಂದ ಶ್ರೀ ಮಧ್ವನವಮಿ ಉತ್ಸವದ ನಿಮಿತ್ತ ಭಕ್ತರ ಮನೆಗೆ ಶ್ರೀಗಳ ಪಾದಪೂಜೆ, ಶ್ರೀ ಮಧ್ವಾಚಾರ್ಯರಿಗೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ಮಧ್ವಚಾರ್ಯರರ ರಥೋತ್ಸವ, ಪ್ರವಚನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಪಾಲಿನ ಕರ್ತವ್ಯವನ್ನು ಪ್ರಾಮಾಣಿ ಕವಾಗಿ ಮಾಡಿ ಮತ್ತು ಅದರಿಂದ ದೊರೆತ ಫಲವನ್ನು ಅನುಭವಿ ಸಬೇಕು. ಆದರೆ ಸುಖವನ್ನು ಅನುಭವಿಸುವಾಗ ಭಗವಂತನನ್ನು ಎಂದಿಗೂ ಮರೆಯಬಾರದು ಎಂದು ಹಿತ ನುಡಿದರು.
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ, ನ್ಯಾಯಾಲಯದ ತೀರ್ಪು ಪ್ರಕಟವಾಗುವವರೆಗೂ ಯುವಜನಾಂಗ ಸಂಯಮ ಕಾಪಾಡಿಕೊಳ್ಳಬೇಕು. ಹರಿಜನ ಕಾಲೋನಿಗಳು ಸೇರಿದಂತೆ ನಾಡಿನಾದ್ಯಂತ ಜನಜಾಗೃತಿ ಕಾರ್ಯಕ್ರಮಗಳು ಸದಾ ನಡೆಯುತ್ತಿರುತ್ತವೆ ಎಂದ ಸ್ವಾಮೀಜಿ, ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಕುರಿತಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಕೋಲಾರದ ಶ್ರೀ ವಿದ್ಯಾವಲ್ಲಭ ಮಾಧವ ತೀರ್ಥ ಶ್ರೀಪಾದಂಗಳವರು ಮಾತನಾಡಿ, ಇಂದು ಒತ್ತಡದ ಜೀವನದಲ್ಲಿ ಬದುಕುತ್ತಿದ್ದೇವೆ. ಸುಖ, ನೆಮ್ಮದಿ ಕಾಣಬೇಕಾದರೆ ಪ್ರತಿಯೊಬ್ಬರೂ ಧರ್ಮ, ಸಂಸ್ಕಾರ, ಆಚರಣೆಯಲ್ಲಿ ಪಾಲ್ಗೊಂಡರೆ ಸುಖ ಲಭಿಸುತ್ತದೆ ಎಂದರು.
ಬೆಂಗಳೂರು ವಿದ್ವಾಂಸರಾದ ಜಿಮ್ಮಟ್ಟಿ ಶೇಷಾಚಾರ್ ಅವರು `ಸುಮಧ್ವ ವಿಜಯ’ ಪ್ರವಚನ ನೀಡಿ, ಯಾವ ವ್ಯಕ್ತಿ ದೇವರಲ್ಲಿ ಅನನ್ಯವಾದ ಭಕ್ತಿ ಆಚರಿಸುವನೋ, ಆತ ಈ ಸಂಸಾರದಿಂದ ಪಾರಾಗುವನು. ಯಾವುದೇ ಜಾತಿ, ಮತದವರಾದರೂ ಭಗವಂತನಲ್ಲಿ ಶರಣಾಗತರಾಗಿ, ಭಗವಂತನ ಭಕ್ತರಾಗಿ ಪ್ರಾಮಾಣಿಕ ಜೀವನ ನಡೆಸಿದಲ್ಲಿ ಅವರು ಮೋಕ್ಷ ಪಡೆಯಬಹುದು ಎಂದು ಸಾರಿದವರು ಜಗದ್ಗುರುಗಳಾದ ಶ್ರೀ ಮಧ್ವಚಾರ್ಯರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗುರು ಮಧ್ವ ಸೇವಾ ಸಮಿತಿ ಅಧ್ಯಕ್ಷ ಎನ್.ವಿ.ಹನುಮಂತರಾವ್, ಕಾರ್ಯದರ್ಶಿ ವೈದ್ಯ ವಾದಿರಾಜ, ಖಜಾಂಚಿ ಆರ್. ಶ್ರೀಕಾಂತ, ಎ. ಗಿರಿಧರ, ಕೆ. ಪ್ರಿಯವ್ರತರಾವ್, ಡಿ. ನರಸಿಂಹಮೂರ್ತಿ, ಟಿ.ವ್ಯಾಸರಾಜ, ಡಾ. ಸುಬ್ಬರಾವ್, ದಂಡಿನ ಹರೀಶ್, ಕಟ್ಟಿ ರಾಮಪ್ರಸಾದ್, ಬಾದನಹಟ್ಟಿ ಶ್ರೀನಿಧಿ, ತಟ್ಟಿ ರಾಮಪ್ರಸಾದ್, ಬಿ. ಕೃಷ್ಣಮೂರ್ತಿ, ನಾಗರಾಜ ಭಟ್,
ಬಿ. ಮಾದವರಾವ್ ಸೇರಿದಂತೆ, ಇತರರು ಇದ್ದರು.