ಕೊಟ್ಟೂರಿನಲ್ಲಿ ನಿಗದಿಯಾಗಿದ್ದ ಹುಣ್ಣಿಮೆ ಕಾರ್ಯಕ್ರಮ ಕೋವಿಡ್ ಕಾರಣದಿಂದಾಗಿ ಸಿರಿಗೆರೆಯಲ್ಲಿ ಆಚರಣೆ
ಸಿರಿಗೆರೆ, ಫೆ. 10- ತರಳಬಾಳು ಜಗದ್ಗುರು ಬೃಹನ್ಮಠದ ವಾರ್ಷಿಕ ಉತ್ಸವವಾದ ತರಳಬಾಳು ಹುಣ್ಣಿಮೆ ಮಹೋತ್ಸವವು ಈ ವರ್ಷ ಸಿರಿಗೆರೆ ಯಲ್ಲಿ ನಡೆಯಲಿದೆ. ವಿಜಯ ನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಒಂಭತ್ತು ದಿನಗಳ ಕಾಲ ನಡೆಯ ಬೇಕಾಗಿದ್ದ ಈ ಮಹೋತ್ಸವವು ಕೋವಿಡ್ – 19 ರ ಕಾರಣಕ್ಕಾಗಿ ಸಿರಿಗೆರೆಯ ಮೂಲಸ್ಥಾನ ದಲ್ಲಿ ಮೂರು ದಿನಗಳ ಕಾಲ ಸರಳವಾಗಿ, ಸಾಂಸ್ಕೃತಿಕ ಉತ್ಸವವನ್ನಾಗಿ ಆಚರಿಸಲಾಗುತ್ತಿದೆ.
ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಮೂರು ದಿನಗಳ ಕಾಲ ಬೆಳಗಿನ ಅವಧಿಯಲ್ಲಿ ವಿವಿಧ ವಿಚಾರ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ
ಫೆ.14ರ ಸೋಮವಾರ ಬೆಳಗ್ಗೆ 11ಕ್ಕೆ ಕನ್ನಡ ಸಾಹಿತ್ಯ ವಿಚಾರ ಗೋಷ್ಠಿಯಲ್ಲಿ ‘ಮಂಕುತಿಮ್ಮನ ಕಗ್ಗದಲ್ಲಿ ಜೀವನ ಮೌಲ್ಯಗಳು’ ವಿಷಯ ಕುರಿತು ಶಿವಮೊಗ್ಗದ ಪ್ರವಚನಕಾರ ರಾದ ಜಿ.ಎಸ್.ನಟೇಶ್ ಹಾಗೂ ‘ಜೀವನೋತ್ಸ ವಕ್ಕಾಗಿ ಹಾಸ್ಯ’ ವಿಷಯ ಕುರಿತು ದಾವಣಗೆರೆಯ ಹಿರಿಯ ವ್ಯಂಗ್ಯ ಚಿತ್ರಕಾರ ಎಚ್.ಬಿ.ಮಂಜುನಾಥ್ ಮಾತನಾಡಲಿದ್ದಾರೆ.
ಸಂಜೆ 6:30ಕ್ಕೆ ಸಭಾ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ, ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಬಸವರಾಜ್, ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್‌ಕುಮಾರ್ ಹಾಗೂ ವಿಶೇಷ ಆಹ್ವಾನಿತರಾಗಿ ದಾವಣಗೆರೆ ಜಿಲ್ಲಾಧಿಕಾರಿ ಮಹಂತೇಶ್ ಬೀಳಗಿ, ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತ ಎಸ್.ಮನ್ನಿಕೇರಿ ಭಾಗವಹಿಸಲಿದ್ದಾರೆ.
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬಿ.ವಾಮದೇವಪ್ಪ ಮತ್ತು ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಅವರನ್ನು ಸನ್ಮಾನಿಸಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮ : ಬೇಲೂರು ನೃತ್ಯಾಂಜಲಿ ಕಲಾ ನಿಕೇತನದವರಿಂದ ಭರತ ನಾಟ್ಯಂ, ಕುಮುಟಾದ ನಾಗರಾಜ್ ಮತ್ತು ತಂಡದಿಂದ ಯಕ್ಷಗಾನ ಪ್ರದರ್ಶನವಿದೆ. ಕಲರ್ಸ್ ಕನ್ನಡ ವಾಹಿನಿಯ ‘ಎದೆತುಂಬಿ ಹಾಡುವೆನು’ ಖ್ಯಾತಿಯ ಸೂರ್ಯಕಾಂತ್ ಅವರಿಂದ ಗೀತ ಗಾಯನವಿದೆ.
ತರಳಬಾಳು ಕಲಾ ಸಂಘದಿಂದ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ವಿವಿಧ ಶಾಲಾ – ಕಾಲೇಜುಗಳ ವಿದ್ಯಾರ್ಥಿಗಳು ಮಲ್ಲಕಂಬ, ಜಡೆ ಕೋಲಾಟ, ಲಂಬಾಣಿ ನೃತ್ಯ, ವಚನ ನೃತ್ಯ, ಜನಪದ ನೃತ್ಯ, ಒನಕೆ ಓಬವ್ವ ರೂಪಕ ಕೀಲುಕುದುರೆ, ಗಾರುಡಿ ಗೊಂಬೆ ಹಾಗೂ ಡೊಳ್ಳು ಕುಣಿತ ಪ್ರದರ್ಶಿಸಲಿದ್ದಾರೆ.
ಫೆ.15ರ ಮಂಗಳವಾರ : ಬೆಳಗ್ಗೆ 11ಕ್ಕೆ ವಿಜ್ಞಾನ ವಿಸ್ಮಯ ವಿಚಾರ ಗೋಷ್ಠಿಯಲ್ಲಿ ಧಾರವಾಡ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕ ಎಂ.ಎಸ್.ಶಿವಪ್ರಸಾದ್ ಅವರಿಂದ ‘ವಿಜ್ಞಾನ ಕಲಿಕೆಯ ವಿಸ್ಮಯ’ ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಎಸ್.ಟಿ. ಸ್ವಾಮಿಯವರಿಂದ ‘ಖಗೋಳ ಕೌತುಕ’ ಹಾಗೂ ಧಾರವಾಡದ ಮಹೇಶ್ ಮಾಸಾಳ್ ಅವರು ‘ವಿಜ್ಞಾನ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ’ ಉಪನ್ಯಾಸ ನೀಡಲಿದ್ದಾರೆ.
ಸಂಜೆ 6:30ರ ಸಭಾ ಕಾರ್ಯಕ್ರಮದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ‘ಪಿಟೀಲು ವಾದನ ನುಡಿಸಲಿದ್ದಾರೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಗೌಡ ಹಾಗೂ ಶಾಸಕರಾದ ಎಸ್.ಎ.ರವೀಂದ್ರನಾಥ್, ಕೆ.ಮಾಡಾಳ್ ವಿರುಪಾಕ್ಷಪ್ಪ, ಎಂ.ಚಂದ್ರಪ್ಪ, ಎಸ್.ವಿ.ರಾಮಚಂದ್ರಪ್ಪ, ಎನ್.ರವಿಕುಮಾರ್, ಅಮೃತ ದೇಸಾಯಿ, ಎಸ್.ರುದ್ರೇಗೌಡ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶಶಿಧರ್ ಕೋಟೆ ತಂಡದವರಿಂದ ಸುಗಮ ಸಂಗೀತ ಮತ್ತು ವಚನಗೀತೆ ಗಾಯನವಿದೆ. ಉತ್ತರ ಪ್ರದೇಶದ ವೃಂದಾವನದ ಅಂತರರಾಷ್ಟೀಯ ಖ್ಯಾತಿಯ ವಿಷ್ಣುಪ್ರಿಯ ಗೋಸ್ವಾಮಿ ಅವರಿಂದ ಒಡಿಸ್ಸಿ ನೃತ್ಯ, ಚೆನ್ನೈನ ಚಿತ್ರಾ ಚಂದ್ರಶೇಖರ್ ಅವರಿಂದ ಭರತ ನಾಟ್ಯ, ಹಾವೇರಿಯ ಗೊಟಗೋಡಿ ಕಲಾವಿದರಿಂದ ‘ವೀರ ಅಭಿಮನ್ಯುವಿನ ವಧೆ’ ದೊಡ್ಡಾಟವಿದೆ. ತರಳಬಾಳು ಕಲಾಸಂಘದಿಂದ ಮಲ್ಲಿಹಗ್ಗ, ನಗಾರಿ, ಬೀಸು ಕಂಸಾಳೆ ಪ್ರದರ್ಶನವಿದೆ.
ಫೆ.16ರ ಮಂಗಳವಾರ: ಬೆಳಗ್ಗೆ 11ಕ್ಕೆ ವ್ಯಕ್ತಿತ್ವ ವಿಕಸನ ವಿಚಾರ ಗೋಷ್ಠಿಯಲ್ಲಿ ಮೈಸೂರಿನ ಡಾ.ಆರ್.ಎ.ಚೇತನ್ ರಾಮ್ ಅವರಿಂದ ‘ವ್ಯಕ್ತಿತ್ವ ವಿಕಸನ’ ಮತ್ತು ಶಿಕಾರಿಪುರ ಸಾಧನಾ ಅಕಾಡೆಮಿ ಸಂಸ್ಥಾಪಕ ಬಿ.ಮಂಜುನಾಥ್ ‘ಪಿಯುಸಿ ನಂತರ ಮುಂದೇನು’ ಎಂಬ ವಿಷಯಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಸಂಜೆ 6.30ರ ಸಭಾ ಕಾರ್ಯಕ್ರಮದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರಿಂದ ‘ಸದ್ಧರ್ಮ ಸಿಂಹಾಸನಾರೋಹಣ’ ನೆರವೇರುವುದು. ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಶರಣ ಬಸವರಾಜ ಬೊಮ್ಮಾಯಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ನಾರಾಯಣಸ್ವಾಮಿ, ಕೃಷಿ ಸಚಿವ ಮತ್ತು ಚಿತ್ರದುರ್ಗ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್, ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ, ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ್, ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಭಾಗವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಷಿ ಅವರನ್ನು ಸನ್ಮಾನಿಸಲಾಗುವುದು.
ಬೆಂಗಳೂರಿನ ರಘುನಂದನ್ ಪ್ರಜ್ಞಾಪ್ರವಾಹ ಅವರು `ಆಧುನಿಕ ಶಿಕ್ಷಣದ ಜೊತೆಯಲ್ಲಿ ಧಾರ್ಮಿಕ ಶಿಕ್ಷಣದ ಅಗತ್ಯತೆ’ ವಿಷಯ ಕುರಿತು ಹಾಗೂ ವಿಶ್ವಬಂಧು ಮರುಳಸಿದ್ಧನ ಪರಂಪರೆ’ ಬಗ್ಗೆ ವಾಗ್ಮಿ ಚಟ್ಟನಹಳ್ಳಿ ಮಹೇಶ್ ಉಪನ್ಯಾಸ ನೀಡುವರು. ದಾವಣಗೆರೆ ಸುಶ್ರಾವ್ಯ ಸಂಗೀತ ಶಾಲೆಯವರಿಂದ ವಚನಗೀತೆ ಗಾಯನವಿದೆ.
ಉತ್ತರ ಪ್ರದೇಶದ ವೃಂದಾವನದ ಅಂತರರಾಷ್ಟ್ರೀಯ ಖ್ಯಾತಿಯ ವಿಷ್ಣುಪ್ರಿಯ ಗೋಸ್ವಾಮಿ ಅವರಿಂದ ಒಡಿಸ್ಸಿ ನೃತ್ಯ, ಚೆನ್ನೈನ ಚಿತ್ರಾ ಚಂದ್ರಶೇಖರ ಅವರಿಂದ ಭರತ ನಾಟ್ಯ ಪ್ರದರ್ಶನವಿದೆ. ತರಳಬಾಳು ಕಲಾ ಸಂಘದಿಂದ ಮಲ್ಲಕಂಬ, ಮಲ್ಲಿಹಗ್ಗ ಹಾಗೂ ಶಿವಶರಣ ಹರಳಯ್ಯ ಕುರಿತ ರೂಪಕ ಪ್ರದರ್ಶಿಸಲಿದ್ದಾರೆ.