ದಾವಣಗೆರೆ, ಫೆ.10- ನದಾಫ್, ಪಿಂಜಾರ್ ಸಮಾಜದ ಅಭಿವೃದ್ಧಿ ನಿಗಮ ಮಂಡಳಿ ರಚಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ನದಾಫ್, ಪಿಂಜಾರ್ ಸಂಘದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಡಳಿತಕ್ಕೆ ಇಂದು ಮನವಿ ಸಲ್ಲಿಸಲಾಯಿತು.
ರಾಜ್ಯ ಸಂಘದ ಕರೆಯ ಮೇರೆಗೆ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ 35-40 ಲಕ್ಷ ಜನಸಂಖ್ಯೆ ಹೊಂದಿರುವ ಪಿಂಜಾರ ಸಮುದಾಯವು ಕಡು ಬಡತನದ ನೆರಳಲ್ಲಿ ಕಷ್ಟಕರ ಜೀವನ ನಡೆಸುತ್ತಿದೆ. ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅತೀ ಹಿಂದುಳಿದ ಜನಾಂಗ ಇದಾಗಿದ್ದು, ಸರ್ಕಾರದಿಂದ ಸೌಲಭ್ಯ ಪಡೆಯಲು ನಿಗಮ ಮಂಡಳಿ ರಚಿಸಬೇಕು ಎಂದು ಒತ್ತಾಯಿಸಲಾಗಿದೆ.
ನದಾಫ್, ಪಿಂಜಾರ ಜನಾಂಗ ನಗರ ಹಾಗೂ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದು ಗಾದಿ, ಹಗ್ಗ ತಯಾರಿಸಲಾಗುತ್ತಿದೆ. ದುಡಿಮೆಗಾಗಿ ಗೌಂಡಿ, ಕೂಲಿ ಕೆಲಸ, ಬೀದಿಗಳಲ್ಲಿ ಹಣ್ಣು, ತರಕಾರಿ ವ್ಯಾಪಾರ, ಆಟೋ ಗ್ಯಾರೇಜ್ಗಳಲ್ಲಿ ಸಣ್ಣ – ಪುಟ್ಟ ಉದ್ಯೋಗ ಮಾಡುತ್ತಿದೆ. ಹೀಗಾಗಿ, ಸರ್ಕಾರದಿಂದ ಹೆಚ್ಚಿನ ಸೌಲಭ್ಯ ಪಡೆದುಕೊಳ್ಳಲು ಪ್ರತ್ಯೇಕ ನಿಗಮ, ಮಂಡಳಿ ಅಗತ್ಯ. ನಿಗಮ ಮಂಡಳಿ ರಚನೆಗೆ ಕಳೆದ 10 ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದರೂ ಬೇಡಿಕೆಗೆ ಸ್ಪಂದಿಸಿಲ್ಲ. ಹಲವು ಬಾರಿ ಮುಖ್ಯಮಂತ್ರಿಗಳನ್ನು ನೇರವಾಗಿ ಭೇಟಿ ಮಾಡಿದರೂ ನಮ್ಮ ಬೇಡಿಕೆ ಈಡೇರಿಲ್ಲ. ಮೀಸಲಾತಿ ಪ್ರಕಾರ ನದಾಫ್ ಜನಾಂಗ ಪ್ರವರ್ಗ-1 ರಲ್ಲಿ ಬರುವುದರಿಂದ ಬೇಡಿಕೆ ಈಡೇರಿಲ್ಲ. ಹಲವು ತಾಂತ್ರಿಕ ದೋಷಗಳಿಂದ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ ಎಂದು ಮನವಿ ಮಾಡಲಾಯಿತು.
ಈ ವೇಳೆ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಖಾದರ್ ಬಾಷಾ, ಜಿಲ್ಲಾ ಕಾರ್ಯದರ್ಶಿ ಎ.ಫಕೃದ್ದೀನ್, ಮುಖಂಡರಾದ ಶೌಖತ್ ಅಲಿ, ಡಾ. ಎ.ದಾದಾಪೀರ್ ನವಿಲೇಹಾಳ್, ಕೆ.ಟಿಪ್ಪು ಮಸ್ತಾನ್, ನಿಜಾಮುದ್ದೀನ್, ಡಿ.ಸಿ. ನಯಾಜ್, ಹೆಚ್.ಸಿ. ದಾದಾಪೀರ್ ಸೇರಿದಂತೆ ಇತರರಿದ್ದರು.