ಮಾನ್ಯರೇ,
ಸರ್ಕಾರದ ಯಾವುದೇ ಸೇವೆ ಮತ್ತು ಸೌಲಭ್ಯವನ್ನು ಪಡೆದುಕೊಳ್ಳಲು ಎಲ್ಲದಕ್ಕೂ ಆಧಾರ್ ಕಾರ್ಡ್ ಕಡ್ಡಾಯ ಮಾಡಿದೆ ಸರಿ. ಇದಕ್ಕೆ ಸರ್ಕಾರಿ ಆಸ್ಪತ್ರೆಗಳು ಕೂಡ ಹೊರತಾಗಿಲ್ಲ.
ಇಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯವನ್ನು ಪಡೆದುಕೊಳ್ಳಲು ಮೂಲ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ತರಬೇಕು ಎಂಬ ನಿಯಮವಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಬರುವವರೆಲ್ಲರೂ ಶಕ್ತರು, ಹರೆಯ ವಯಸ್ಸಿನವರಾಗಿರುವುದಿಲ್ಲ, ಬದಲಾಗಿ ವಯೋವೃದ್ಧರು, ಅಶಕ್ತರು, ಅಂಗವಿಕಲರು, ಗರ್ಭಿಣಿ, ಬಾಣಂತಿಯರು ಇನ್ನೂ ಒಬ್ಬೊಬ್ಬರಾಗಿಯೇ ಬೇರೆ ಊರುಗಳಿಂದ ಬರುವುದು ಉಂಟು. ಬೇರೆ ಬೇರೆ ದೂರದ ಊರುಗಳಿಂದ ಆಸ್ಪತ್ರೆಗೆ ಬರುವ ಮಾರ್ಗ ಮಧ್ಯೆಯೇ ಅಥವಾ ಆಸ್ಪತ್ರೆಯ ಜನಸಂದಣಿಯಲ್ಲಿಯೇ ಮೂಲ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಕಳೆದು ಹೋದರೆ ಯಾರು ಜವಾಬ್ದಾರಿ?
ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಮೂಲ ದಾಖಲಾತಿಗಳನ್ನು ಕೇಳುವುದು ನಿಜಕ್ಕೂ ಹಾಸ್ಯಾಸ್ಪದ ಎನಿಸುತ್ತದೆ. ಕಂಪ್ಯೂಟರ್‌ನಲ್ಲಿ ಅವರ ನೋಂದಣಿ ಸಂಖ್ಯೆ ನಮೂದಿಸಿದರೆ ಫಲಾನುಭವಿಯ ಊರು, ಹೆಸರು,ವಯಸ್ಸು ಎಲ್ಲಾ ವಿವರಗಳು ಗೊತ್ತಾಗುತ್ತದೆಯಲ್ಲವೇ?
– ಡಿ.ಮುರುಗೇಶ, ದಾವಣಗೆರೆ.