ಹರಿಹರದಲ್ಲಿ ಹಿಂಸೆಗೆ ತಿರುಗಿದ ಹಿಜಾಬ್ ವಿವಾದ

ಹರಿಹರ, ಫೆ. 9 – ಇಲ್ಲಿನ ಡಿ.ಆರ್.ಎಂ. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿವಾದ ಉಲ್ಬಣಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಪೊಲೀಸರು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಸಿಡಿಸಿದ ಘಟನೆ ನಡೆದಿದೆ.

ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಕಾಲೇಜಿನ ಒಳಗೆ ಬರದಂತೆ ಕೆಲವರು ತಡೆದಿದ್ದಾರೆ. ಕಾಲೇಜು ಹೊರಗಡೆ ಇದ್ದ ಕೆಲ ಯುವಕರು ಹಿಜಾಬ್ ಧರಿಸಿದ ಯುವತಿಯರ ಪರ ನಿಂತಿದ್ದಾರೆ. ಈ ವೇಳೆ ಕಾಲೇಜಿನ ಹೊರಗಿನವರೂ ಸೇರಿಕೊಂಡಿ ರುವುದು ಪರಿಸ್ಥಿತಿ ಉಲ್ಬಣಿಸುವಂತೆ ಮಾಡಿದೆ.

ಎರಡೂ ಕೋಮುಗಳ ಯುವಕರ ನಡುವೆ ನಡೆದ ಘರ್ಷಣೆಯಲ್ಲಿ 15-20 ವಿದ್ಯಾರ್ಥಿಗಳು ಹಾಗೂ ಜನರಿಗೆ ಗಾಯಗಳಾಗಿವೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸುವ ಪ್ರಯತ್ನ ನಡೆಸಿದ್ದಾರೆ. ಘಟನೆಯ ನಂತರ ನಗರಾದ್ಯಂತ 144ನೇ ಸೆಕ್ಷನ್ ಜಾರಿಗೆ ತರಲಾಗಿದೆ.

ಜಾಲತಾಣದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಹರಿಹರದಲ್ಲಿ ಪ್ರಕ್ಷುಬ್ಧಿತ ಪರಿಸ್ಥಿತಿ ಉಂಟಾಗಿತ್ತು. ಪೊಲೀಸ್ ಠಾಣೆಯ ಎದುರು ಸೇರಿದ್ದ ಜನರನ್ನು ಚೆದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದರು.

ಪೊಲೀಸ್ ಠಾಣೆಯ ಎದುರು ನೆರೆದಿದ್ದ ಕೆಲವರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಎಂದೂ ಆರೋಪಿಸಲಾಗಿತ್ತು. ನಿನ್ನೆ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಠಾಣೆಯಲ್ಲಿ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ.

ಪೆಟ್ರೋಲ್‌ ಬಂಕ್‌ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಎರಡು ಕೋಮುಗಳ ಯುವಕರ ನಡುವೆ ಘರ್ಷಣೆ ನಡೆದು ಒಬ್ಬರು ಗಾಯಗೊಂಡ ಘಟನೆಯೂ ನಡೆದಿತ್ತು.

ಈ ಘಟನೆಗಳ ಹಿನ್ನೆಲೆಯಲ್ಲಿ ನಗರದಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿತ್ತು. ಈ ನಡುವೆಯೂ, ಡಿ.ಆರ್.ಎಂ. ಕಾಲೇಜಿನಲ್ಲಿ ನಡೆದ ಘಟನೆ ನಗರದ ಶಾಂತಿಯನ್ನು ಕದಡಿದೆ.

ಕಾಲೇಜಿನ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಒಳಗೆ ಬರಲು ಬಿಡದೇ ಇದ್ದಾಗ ಮುಸ್ಲಿಮ್ ಮುಖಂಡರು ಕಾಲೇಜಿನ ಹೊರಗೆ ಸೇರಿಕೊಂಡು ಆಕ್ಷೇಪಿಸಿದರು.

ಈ ಸಂದರ್ಭದಲ್ಲಿ ಶಾಸಕ ಎಸ್. ರಾಮಪ್ಪ ಅವರೂ  ಇದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಸೇರಿದಂತೆ ಹಿರಿಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಶ್ರಮಿಸಿದ್ದಾರೆ. ಸಿಪಿಐ ಸತೀಶ್, ಪಿಎಸ್‌ಐ ಬಸವರಾಜ್‌, ಗ್ರಾಮಾಂತರ ಘಟಕದ ವೀರಬಸಪ್ಪ ಮತ್ತಿತರರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ನಗರದಲ್ಲಿ ಹೆಚ್ಚಿನ ಭದ್ರತೆಗಾಗಿ 4 ಡಿ.ಆರ್., 2 ಕೆ.ಎಸ್.ಆರ್.ಪಿ., 100 ಹೋಂ ಗಾರ್ಡ್, 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

error: Content is protected !!